ಚೆನ್ನೈ: ಬಾಲಿವುಡ್ ನಿರ್ಮಾಪಕಿ ಕಿರಣ್ ರಾವ್ ಅವರ ಲಾಪಟಾ ಲೇಡೀಸ್ ನ್ನು ಆಸ್ಕರ್ 2025ರ ಸ್ಪರ್ಧೆಗೆ ಅಧಿಕೃತವಾಗಿ ಭಾರತದಿಂದ ನಾಮನಿರ್ದೇಶನ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಪ್ರಕಟಿಸಿದೆ.
ಹಿಂದಿ ಭಾಷೆಯ ಚಲನಚಿತ್ರವಾಗಿರುವ ಲಾಪಟಾ ಲೇಡೀಸ್, ಪಿತೃಪ್ರಭುತ್ವದ ಮೇಲೆ ಲಘುವಾದ ವಿಡಂಬನೆಯ ಕಥೆಯನ್ನು ಒಳಗೊಂಡಿದೆ. ಬಾಲಿವುಡ್ ಹಿಟ್ ಚಿತ್ರ ಅನಿಮಲ್, ಮಲಯಾಳಂ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ಆಟ್ಟಂ ಮತ್ತು ಕ್ಯಾನೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಗೆದ್ದಿರುವ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಸೇರಿದಂತೆ 29 ಚಲನಚಿತ್ರಗಳಲ್ಲಿ ಅಂತಿಮವಾಗಿ ಲಾಪಟಾ ಲೇಡೀಸ್ ನ್ನು ಆಯ್ಕೆ ಮಾಡಲಾಯಿತು.
ಅಸ್ಸಾಮ್ ನ ನಿರ್ದೇಶಕ ಜಾಹ್ನು ಬರುವಾ ನೇತೃತ್ವದ 13 ಸದಸ್ಯರ ಆಯ್ಕೆ ಸಮಿತಿಯು ಅಮೀರ್ ಖಾನ್ ಮತ್ತು ಕಿರಣ್ ರಾವ್ ನಿರ್ಮಿಸಿದ ಲಾಪತಾ ಲೇಡೀಸ್ ನ್ನು ಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಪರಿಗಣಿಸಲು ಸರ್ವಾನುಮತದಿಂದ ನಿರ್ಧರಿಸಿತು.
ಲಾಪಟಾ ಲೇಡೀಸ್ ಜೊತೆಗೆ, ಹಿಂದಿ ಚಿತ್ರ ಶ್ರೀಕಾಂತ್, ತಮಿಳು ಚಲನಚಿತ್ರಗಳಾದ ವಾಜೈ ಮತ್ತು ತಂಗಲಾನ್ ಮಲಯಾಳಂ ಚಿತ್ರ ಉಲ್ಲೊಝುಕ್ಕು 29 ಚಿತ್ರಗಳಲ್ಲಿ ಟಾಪ್ 5ಲ್ಲಿ ಇದ್ದವು.
ವಿಮರ್ಶಕರಿಂದ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾದ ಮಾರ್ಚ್‌ನಲ್ಲಿ ಬಿಡುಗಡೆಯಾದ ಲಾಪಟ್ ಲೇಡೀಸ್, 2001 ರಲ್ಲಿ ಗ್ರಾಮೀಣ ಭಾರತದಲ್ಲಿ ಇಬ್ಬರು ವಧುಗಳನ್ನು ರೈಲು ಪ್ರಯಾಣದ ಸಮಯದಲ್ಲಿ ಆಕಸ್ಮಿಕವಾಗಿ ಬದಲಾಯಿಸಿಕೊಳ್ಳುವ ಹೃದಯಸ್ಪರ್ಶಿ ಮತ್ತು ಮಹಿಳಾ ಸಬಲೀಕರಣದ ಕಥೆಯನ್ನು ಹೊಂದಿದೆ. ಕಿರಣ್ ರಾವ್ ಅವರ ಕಿಂಡ್ಲಿಂಗ್ ಪ್ರೊಡಕ್ಷನ್ಸ್, ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ಜಿಯೋ ಸ್ಟುಡಿಯೊಸ್ ಜಂಟಿಯಾಗಿ ಚಿತ್ರ ಮಾಡಿದೆ.
ರವಿ ಕಿಶನ್, ಛಾಯಾ ಕದಮ್ ಮತ್ತು ಗೀತಾ ಅಗರ್ವಾಲ್ ಶರ್ಮಾ ಅವರೊಂದಿಗೆ ನಿತಾಂಶಿ ಗೋಯೆಲ್, ಪ್ರತಿಭಾ ರಂತ ಮತ್ತು ಸ್ಪರ್ಶ ಶ್ರೀವಾಸ್ತವ್ ಅವರು ನಾಯಕರಾಗಿ ನಟಿಸಿದ್ದಾರೆ, ಇದು 2023 ರ ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ವಿಶ್ವ ಪ್ರದರ್ಶನ ಕಂಡಿತ್ತು.
ತಮಿಳು ಚಿತ್ರ ಮಹಾರಾಜ, ತೆಲುಗಿನ ಕಲ್ಕಿ 2898 AD ಮತ್ತು ಹನು-ಮಾನ್, ಹಾಗೆಯೇ ಹಿಂದಿ ಚಲನಚಿತ್ರಗಳಾದ ಸ್ವತಂತ್ರ ವೀರ ಸಾವರ್ಕರ್ ಮತ್ತು ಆರ್ಟಿಕಲ್ 370 ಸಹ ಪಟ್ಟಿಯಲ್ಲಿದ್ದವು.
2002 ರಲ್ಲಿ ಅಮೀರ್ ಖಾನ್ ಅಭಿನಯದ ಲಗಾನ್ ಚಿತ್ರದ ನಂತರ ಯಾವುದೇ ಭಾರತೀಯ ಚಲನಚಿತ್ರವು ಆಸ್ಕರ್‌ನಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಕ್ಕಾಗಿ ನಾಮನಿರ್ದೇಶನಗೊಂಡಿಲ್ಲ.
ಈ ಹಿಂದೆ ಇನ್ನೆರಡು ಚಿತ್ರಗಳು ಮಾತ್ರ ಭಾರತದಿಂದ ಆಸ್ಕರ್ ಗೆ ಅಂತಿಮ ಐದರಲ್ಲಿ ಸ್ಥಾನ ಪಡೆದಿದ್ದವು. ಅವುಗಳು ನರ್ಗೀಸ್ ಅಭಿನಯದ ಮದರ್ ಇಂಡಿಯಾ ಮತ್ತು ಮೀರಾ ನಾಯರ್ ಅವರ ಸಲಾಮ್ ಬಾಂಬೆ! ಮಲಯಾಳಂ ಸೂಪರ್‌ಹಿಟ್ 2018: ಎವಿರಿವನ್ ಈಸ್ ಎ ಹೀರೋ ವನ್ನು ಕಳೆದ ವರ್ಷ ಕಳುಹಿಸಲಾಗಿತ್ತು.