ಪ್ರಪಂಚದಾದ್ಯಂತ ಇರುವ ಅಭಿಮಾನಿಗಳು ಮತ್ತು ಪ್ರವಾಸಿಗರ ಪಟ್ಟಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರ ಬಂಗಲೆ 'ಮನ್ನತ್' ಯಾವಾಗಲು ಇರುತ್ತದೆ. ಆದರೆ, ನಟ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಬೇರೆಡೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಮೇ ತಿಂಗಳಿನಲ್ಲಿ ಸೂಪರ್‌ಸ್ಟಾರ್‌ನ ಮನೆಯ ನವೀಕರಣ ಕಾರ್ಯವು ಆರಂಬವಾಗಲಿರುವುದರಿಂದ ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಮತ್ತು ಅವರ ಮಕ್ಕಳಾದ ಸುಹಾನಾ ಮತ್ತು ಆರ್ಯನ್ ಮುಂಬೈನ ಬಾಂದ್ರಾದಲ್ಲಿರುವ ಪಾಲಿ ಹಿಲ್‌ಗೆ ಸ್ಥಳಾಂತರಗೊಳ್ಳಲಿದ್ದಾರೆ. ಸಿನಿಮಾ ನಿರ್ಮಾಪಕ ವಶು ಭಗ್ನಾನಿ ನಿರ್ಮಿಸಿದ ಐಷಾರಾಮಿ ಅಪಾರ್ಟ್‌ಮೆಂಟ್‌ನ ನಾಲ್ಕು ಮಹಡಿಗಳನ್ನು ಶಾರುಖ್ ಖಾನ್ ಬಾಡಿಗೆಗೆ ಪಡೆದಿದ್ದಾರೆ ಎನ್ನಲಾಗಿದೆ.
ಮನ್ನತ್ ಅನ್ನು ನವೀಕರಣ ಮತ್ತು ವಿಸ್ತರಣೆ ಮಾಡುವ ಕೆಲಸ ಮುಂದಿನ ಎರಡು ವರ್ಷ ತೆಗೆದುಕೊಳ್ಳಲಿದ್ದು, ಈ ಅವಧಿಯಲ್ಲಿ ಶಾರುಖ್ ಖಾನ್ ಕುಟುಂಬ ಬೇರೆಡೆ ವಾಸಿಸಲಿದೆ.
ಗೌರಿ ಖಾನ್ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಮನ್ನತ್ ಅನೆಕ್ಸ್‌ಗೆ ಎರಡು ಹೆಚ್ಚುವರಿ ಮಹಡಿಗಳನ್ನು ಸೇರಿಸಲು ಮಹಾರಾಷ್ಟ್ರ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರದ (MCZMA) ಅನುಮತಿ ಕೋರಿದ್ದರು. ಮನ್ನತ್ ಆರು ಅಂತಸ್ತಿನ ಕಟ್ಟಡವಾಗಿದೆ. ಮನ್ನತ್ ಒಂದು ಗ್ರೇಡ್ III ಪರಂಪರೆಯ ಕಟ್ಟಡವಾಗಿದ್ದು, ಯಾವುದೇ ರಚನಾತ್ಮಕ ಬದಲಾವಣೆ ಮಾಡಬೇಕಾದರೆ ಅನುಮತಿ ಪಡೆಯಬೇಕಿರುತ್ತದೆ. ಈ ಯೋಜನೆಯ ಅಂದಾಜು ವೆಚ್ಚ 25 ಕೋಟಿ ರೂ. ಆಗಿದೆ.
'ಎಸ್‌ಆರ್‌ಕೆ ಮತ್ತು ಕುಟುಂಬ ವಾಸಿಸುವ ಮುಂದಿನ ಕಟ್ಟಡದಲ್ಲಿ ಪ್ರತಿ ಮಹಡಿಗೆ ಒಂದು ಫ್ಲಾಟ್ ಇದೆ ಮತ್ತು ಅದು ಮನ್ನತ್‌ನಷ್ಟು ವಿಶಾಲವಾಗಿಲ್ಲದಿದ್ದರೂ, ಅವರ ಭದ್ರತೆ ಮತ್ತು ಇತರ ಸಿಬ್ಬಂದಿಗೆ ಅವಕಾಶ ಕಲ್ಪಿಸಲು ಸಾಕಷ್ಟು ಸ್ಥಳವಿದೆ' ಎಂದು ಮೂಲವೊಂದು ತಿಳಿಸಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿಯಾಗಿದೆ. ಎಸ್‌ಆರ್‌ಕೆ ನಾಲ್ಕು ಮಹಡಿಗಳಿಗೆ ಮಾಸಿಕ 24 ಲಕ್ಷ ರೂ. ಬಾಡಿಗೆ ಪಾವತಿಸಲಿದ್ದಾರೆ ಎಂದು ವರದಿಯಾಗಿದೆ.