ನವದೆಹಲಿ: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳಕ್ಕೆ ಫೆಬ್ರುವರಿ 26ರಂದು ತೆರೆಬಿದ್ದಿದೆ. ಇತ್ತೀಚೆಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ವೇಳೆ ವಿಡಿಯೋ ಚಿತ್ರೀಕರಿಸಿದ್ದು, ವ್ಯಕ್ತಿಯೊಬ್ಬನ ಈ ಕ್ರಮದಿಂದ ನನಗೆ 'ಅಸಹ್ಯ' ಉಂಟಾಗಿದೆ ಎಂದು ನಟಿ ರವೀನಾ ಟಂಡನ್ ಹೇಳಿದ್ದಾರೆ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಅವರ ಪತ್ನಿ ಕತ್ರೀನಾ ಫೆಬ್ರುವರಿ 24 ರಂದು ತನ್ನ ಅತ್ತೆ ವೀಣಾ ಕೌಶಲ್ ಜೊತೆಗೆ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದರು.
ಅದೇ ದಿನ ರವೀನಾ ಕೂಡ ಪ್ರಯಾಗರಾಜ್‌ಗೆ ಬಂದಿದ್ದರು. ಪವಿತ್ರ ಸ್ನಾನಗೈದ ಬಳಿಕ ಕತ್ರೀನಾ ಕೈಫ್, ರವೀನಾ ಮತ್ತು ಪುತ್ರಿ ರಾಶಾ ಥದಾನಿ ಗಂಗಾ ಆರತಿಯಲ್ಲಿ ಭಾಗಿಯಾಗಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಉದ್ದೇಶಿತ ವಿಡಿಯೋದಲ್ಲಿ, ಕತ್ರಿನಾ ಕೈಫ್ ಅವರು ಪವಿತ್ರ ಸ್ನಾನ ಮಾಡುವಾಗ ವ್ಯಕ್ತಿಯೊಬ್ಬ ವಿಡಿಯೋ ರೆಕಾರ್ಡ್ ಮಾಡುತ್ತಾ ಇದು ನಾನು, ಅದು ನನ್ನ ಸಹೋದರ ಮತ್ತು ಅದು ಕತ್ರಿನಾ ಕೈಫ್ ಎಂದು ಹೇಳುತ್ತಾನೆ. ಅವನ ಸುತ್ತಲಿನ ಇತರ ಪುರುಷರು ನಗುತ್ತಾ ಕತ್ರಿನಾಳನ್ನು ನೋಡಲು ಹತ್ತಿರವಾಗುತ್ತಾರೆ.
ಅದೇ ವಿಡಿಯೋವನ್ನು ಶನಿವಾರದಂದು ಇನ್‌ಸ್ಟಾಗ್ರಾಮ್‌ನಲ್ಲಿ ಮನರಂಜನಾ ಸುದ್ದಿ ಪೋರ್ಟಲ್ ಹಂಚಿಕೊಂಡಿದ್ದು, 'ಇದು ಅಸಹ್ಯಕರವಾಗಿದೆ' ಎಂದು ಆ ವಿಡಿಯೋಗೆ ರವೀನಾ ಕಮೆಂಟ್ ಮಾಡಿದ್ದಾರೆ.
'ಈ ರೀತಿಯ ಜನರು ಶಾಂತಿಯುತ ಮತ್ತು ಅರ್ಥಪೂರ್ಣವಾಗಿರಬೇಕಾದ ಕ್ಷಣವನ್ನು ಹಾಳುಮಾಡುತ್ತಾರೆ' ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.
ಕತ್ರೀನಾ ಕೈಫ್ ಅವರು ಪುಣ್ಯಸ್ನಾನ ಮಾಡುವ ವೇಳೆ ನೂರಾರು ಮಂದಿ ಅವರನ್ನು ಸುತ್ತುವರಿದಿದ್ದು, ಫೋಟೊ ಮತ್ತು ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ಭದ್ರತೆಗೆಂದು ಜೊತೆಯಲ್ಲಿದ್ದವರು ಜನರ ಗುಂಪನ್ನು ನಿಯಂತ್ರಿಸಲು ಯತ್ನಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ವಿಕ್ಕಿ ಕೌಶಲ್, ಸೋನಾಲಿ ಬೇಂದ್ರೆ, ಗುರು ರಾಂಧವ, ಜೂಹಿ ಚಾವ್ಲಾ, ಅನುಪಮ್ ಖೇರ್, ಪ್ರೀತಿ ಜಿಂಟಾ, ಅಕ್ಷಯ್ ಕುಮಾರ್ ಮತ್ತು ರಾಜ್‌ಕುಮಾರ್ ರಾವ್ ಸೇರಿದಂತೆ ಹಲವಾರು ಬಾಲಿವುಡ್ ನಟ-ನಟಿಯಲು ಪವಿತ್ರ ಸ್ನಾನ ಮಾಡಿದ್ದಾರೆ.