

ಚೆನ್ನೈ: ಖ್ಯಾತ ತಮಿಳುನಟ ಜಯಂರವಿ ವಿಚ್ಛೇದನ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇದೀಗ ನೇರವಾಗಿ ಪತ್ನಿ ಆರತಿ ನಟ ಜಯಂ ರವಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಹೌದು.. ಡಿವೊರ್ಸ್ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಹೊಸ ಸಂಬಂಧಗಳನ್ನು ಬೆಳೆಸುತ್ತಿರುವ ತಮಿಳು ನಟರ ವಿರುದ್ಧ ಜಯಂ ರವಿ ಖ್ಯಾತಿಯ ನಟ ರವಿ ಮೋಹನ್ ಅವರ ಮಾಜಿ ಪತ್ನಿ ಆರತಿ ಟೀಕಾ ಪ್ರಹಾರ ನಡೆಸಿದ್ದಾರೆ. ಪುರುಷರು ಈ ಜಗತ್ತಿನ ಅತಿದೊಡ್ಡ ಸಂತ್ರಸ್ತರು ಎಂಬ ನಟ ರವಿ ಹೇಳಿಕೆಗೆ ಆರತಿ ಈ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
'ವಿಚ್ಛೇದನ ಅಂತಿಮಗೊಳ್ಳುವ ಮೊದಲೇ ನಾನು ಇನ್ನೊಬ್ಬ ಪುರುಷನೊಂದಿಗೆ ಹೊರಗೆ ಹೋದರೆ, ಈ ದೇಶದ ಜನರು ಮೌನವಾಗಿರುತ್ತಾರೆಯೇ? ಇಷ್ಟೆಲ್ಲಾ ಮಾಡಿದ ನಂತರ, ಮಹಿಳೆಯರು ಈ ಜಗತ್ತಿನಲ್ಲಿ ಅತಿದೊಡ್ಡ ಸಂತ್ರಸ್ತರು ಎಂಬ ನನ್ನ ಮಾತನ್ನು ಯಾರಾದರೂ ಒಪ್ಪುತ್ತಾರೆಯೇ? ಖಂಡಿತ ಇಲ್ಲ. ಹಾಗಿದ್ದಲ್ಲಿ, ಅದೇ ರೀತಿ ಮಾಡುವ ಪುರುಷರನ್ನೂ ನಾವು ಪ್ರಶ್ನಿಸಬೇಕು. ಅಂತಹ ಕೆಲಸಗಳನ್ನು ಮಾಡುವ ಮೂಲಕ ದೊಡ್ಡ ವ್ಯಕ್ತಿಯಾಗಲು ಪ್ರಯತ್ನಿಸಬೇಡಿ ಎಂದು ಆರತಿ ಟೀಕಿಸಿದ್ದಾರೆ.
ನಟ ರವಿ ಹೇಳಿದ್ದೇನು?
ತಮ್ಮ ಮೇಲಿನ ಸೈಬರ್ ದಾಳಿಗಳಿಗೆ ಇತ್ತೀಚೆಗಷ್ಟೇ ಖಡಕ್ ಉತ್ತರ ನೀಡಿರುವ ರವಿ ಮೋಹನ್, ಮಹಿಳೆಯರು ಮಾತ್ರ ಸರಿ ಎಂದು ನೀವು ಭಾವಿಸುತ್ತೀರಿ. ಆದರೆ, ಪುರುಷರು ಈ ಜಗತ್ತಿನ ಅತಿ ದೊಡ್ಡ ಸಂತ್ರಸ್ತರು. ನಮ್ಮ ಕಾನೂನು ವ್ಯವಸ್ಥೆಯು ಕೂಡ ಅದನ್ನು ಅರಿತುಕೊಂಡಿದೆ.
ಒಂದು ದಿನ ನಿಮಗೆ ನನ್ನ ಮನಸ್ಸು ಏನೆಂದು ಗೊತ್ತಾಗುತ್ತದೆ ಮತ್ತು ನಾನು ಇಷ್ಟ ಪಟ್ಟ ಜನರಿಗೆ ಏನು ಮಾಡಿದ್ದೇನೆ ಅನ್ನೋದು ಸಹ ತಿಳಿಯುತ್ತದೆ. ಹೀಗಾಗಿ ನನ್ನನ್ನು ಬದುಕಲು ಬಿಡಿ, ನಿಮ್ಮ ಕೆಟ್ಟ ಆಲೋಚನೆಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳಿ. ನಾನು ನನ್ನ ಹಾದಿಗೆ ಹಿಂತಿರುಗುತ್ತಿದ್ದೇನೆ ಎಂದು ರವಿ ಮೋಹನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
Advertisement