ನವದೆಹಲಿ: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಪತಿ-ರಾಜಕಾರಣಿ ರಾಘವ್ ಚಡ್ಡಾ ತಮ್ಮ ಮಗನಿಗೆ 'ನೀರ್' ಎಂದು ಹೆಸರಿಟ್ಟಿದ್ದಾರೆ.
ದಂಪತಿ ಬುಧವಾರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಂಟಿ ಪೋಸ್ಟ್ ಮಾಡಿದ್ದು, ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮಗುವಿನೊಂದಿಗೆ ಇರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
'ಜಲಸ್ಯ ರೂಪಂ, ಪ್ರೇಮಸ್ಯ ಸ್ವರೂಪಂ ತತ್ರ ಏವ ನೀರ್. ನಮ್ಮ ಹೃದಯಗಳು ಶಾಶ್ವತ ಜೀವನದ ಭಾಗದಲ್ಲಿ ಶಾಂತಿಯನ್ನು ಕಂಡುಕೊಂಡವು. ನಾವು ಅವನಿಗೆ 'NEER'- ಶುದ್ಧ, ದೈವಿಕ, ಅಪರಿಮಿತ ಎಂದು ಹೆಸರಿಟ್ಟಿದ್ದೇವೆ' ಎಂದು ದಂಪತಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ಜೋಡಿ 2023ರ ಮೇ 13 ರಂದು ನವದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿತು ಮತ್ತು 2023ರ ಸೆಪ್ಟೆಂಬರ್ 24 ರಂದು ರಾಜಸ್ಥಾನದ ಉದಯಪುರದ ದಿ ಲೀಲಾ ಪ್ಯಾಲೇಸ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ಆಗಸ್ಟ್‌ನಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಜಂಟಿ ಪೋಸ್ಟ್ ಮಾಡುವ ಮೂಲಕ ಗರ್ಭಧಾರಣೆಯ ವಿಚಾರವನ್ನು ಘೋಷಿಸಿದರು. ಬಳಿಕ ಅಕ್ಟೋಬರ್ 19 ರಂದು ದಂಪತಿ ಮೊದಲ ಮಗುವನ್ನು ಸ್ವಾಗತಿಸಿದರು.
ಪರಿಣಿತಿ ಚೋಪ್ರಾ ಕೊನೆಯ ಬಾರಿಗೆ ಇಮ್ತಿಯಾಜ್ ಅಲಿ ಅವರ 'ಅಮರ್ ಸಿಂಗ್ ಚಮ್ಕಿಲಾ'ದಲ್ಲಿ ಕಾಣಿಸಿಕೊಂಡಿದ್ದರು ಮತ್ತು ರೆನ್ಸಿಲ್ ಡಿ'ಸಿಲ್ವಾ ನಿರ್ದೇಶನದ ಮುಂಬರುವ ನೆಟ್‌ಫ್ಲಿಕ್ಸ್ ಸರಣಿಯಲ್ಲಿ ತಾಹಿರ್ ರಾಜ್ ಭಾಸಿನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ರಾಘವ್ ಚಡ್ಡಾ ಆಮ್ ಆದ್ಮಿ ಪಕ್ಷದ ಸದಸ್ಯರಾಗಿದ್ದು, ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.