ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW) ಸತತ 5 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿದೆ.
ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಅಥವಾ ಅವರ ಪತಿ ರಾಜ್ ಕುಂದ್ರಾ ಅವರ ಸಂಪರ್ಕದ ಸುತ್ತಲಿನ ವಿವರಗಳು ಸ್ಪಷ್ಟವಾಗಿಲ್ಲ. ಇಲ್ಲಿಯವರೆಗೆ, ರಾಜ್ ಕುಂದ್ರಾ ಸೇರಿದಂತೆ ಐದು ಜನರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಸೆಪ್ಟೆಂಬರ್ ಆರಂಭದಲ್ಲಿ, ವಂಚನೆ ಪ್ರಕರಣದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿಯ ವಿರುದ್ಧ ಇಒಡಬ್ಲ್ಯೂ ಲುಕ್ ಔಟ್ ಸುತ್ತೋಲೆ ಹೊರಡಿಸಿತ್ತು.
ಆಗಸ್ಟ್‌ನಲ್ಲಿ, ಉದ್ಯಮಿಯೊಬ್ಬರಿಗೆ 60 ಕೋಟಿ ರೂಪಾಯಿಗಳಿಗೂ ಹೆಚ್ಚು ವಂಚನೆ ಮಾಡಿದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್‌ನ ನಿರ್ದೇಶಕ ಉದ್ಯಮಿ ದೀಪಕ್ ಕೊಠಾರಿ ಸಲ್ಲಿಸಿದ ದೂರಿನಲ್ಲಿ, ಈ ಘಟನೆ 2015 ರಿಂದ 2023 ರ ನಡುವೆ ನಡೆದಿವೆ ಎಂದು ಹೇಳಲಾಗಿದೆ.
ತಮ್ಮ ಉದ್ಯಮ ವಿಸ್ತರಿಸುವ ನೆಪದಲ್ಲಿ ಶಿಲ್ಪಾ ಶೆಟ್ಟಿ ದಂಪತಿ ಹಣವನ್ನು ತೆಗೆದುಕೊಂಡು ಅದನ್ನು ವೈಯಕ್ತಿಕ ವೆಚ್ಚಗಳಿಗೆ ಬಳಸಿಕೊಂಡಿದ್ದಾರೆ ಎಂದು ಕೊಠಾರಿ ಆರೋಪಿಸಿದ್ದಾರೆ. ಕೊಠಾರಿ ಪ್ರಕಾರ, 2015 ರಲ್ಲಿ, ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ನ್ನು ನಡೆಸುತ್ತಿದ್ದ ತಮ್ಮ ಕಂಪನಿಯಾದ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್‌ಗೆ 75 ಕೋಟಿ ರೂಪಾಯಿ ಸಾಲವನ್ನು ಕೋರಿ ಮಧ್ಯವರ್ತಿಯ ಮೂಲಕ ಅವರನ್ನು ಸಂಪರ್ಕಿಸಿದರು.
ಪ್ರಸ್ತಾವಿತ ಬಡ್ಡಿದರ ಶೇಕಡಾ 12 ರಷ್ಟಿತ್ತು. ನಂತರ, ಅವರು ಸಾಲದ ಬದಲು ಹೂಡಿಕೆಯಾಗಿ ಹಣವನ್ನು ಒದಗಿಸುವಂತೆ ಕೇಳಿಕೊಂಡರು. ಮಾಸಿಕ ಆದಾಯ ಮತ್ತು ಅಸಲು ಮರುಪಾವತಿಯನ್ನು ಖಾತರಿಪಡಿಸಿದರು. ಷೇರು ಚಂದಾದಾರಿಕೆ ಒಪ್ಪಂದದ ಅಡಿಯಲ್ಲಿ ಏಪ್ರಿಲ್ 2015 ರಲ್ಲಿ 31.95 ಕೋಟಿ ರೂ.ಗಳನ್ನು ಮತ್ತು ಪೂರಕ ಒಪ್ಪಂದದ ಅಡಿಯಲ್ಲಿ ಸೆಪ್ಟೆಂಬರ್ 2015 ರಲ್ಲಿ 28.53 ಕೋಟಿ ರೂಪಾಯಿ ವರ್ಗಾಯಿಸಿರುವುದಾಗಿ ಕೊಠಾರಿ ಹೇಳಿಕೊಂಡಿದ್ದಾರೆ.
ಒಟ್ಟು ಮೊತ್ತವನ್ನು ಬೆಸ್ಟ್ ಡೀಲ್ ಟಿವಿಯ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಹಣವನ್ನು ಮರುಪಡೆಯಲು ಮಾಡಿದ ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳಲಾಗಿದ್ದು, ಶಿಲ್ಪಾ ಶೆಟ್ಟಿ ದಂಪತಿ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೊಠಾರಿ ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ಶಿಲ್ಪಾ ಶೆಟ್ಟಿ ಅವರ ವಕೀಲ ಪ್ರಶಾಂತ್ ಪಾಟೀಲ್ ನಿರಾಕರಿಸಿದ್ದಾರೆ. ತನಿಖಾ ಸಂಸ್ಥೆಗಳ ಮುಂದೆ ನಮ್ಮ ಸತ್ಯವನ್ನು ತಿಳಿಸುವುದಾಗಿ ಹೇಳಿದ್ದಾರೆ.