ನಟ ಅರ್ಜುನ್ ರಾಮ್ ಪಾಲ್-ಗ್ಯಾಬ್ರಿಯೆಲಾ 
ಬಾಲಿವುಡ್

20 ವರ್ಷಗಳ ಬಳಿಕ ಮತ್ತೆ ಮದುವೆಯಾದ ಬಾಲಿವುಡ್ ನಟ Arjun Rampal; ಯಾರು ಈ ಗ್ಯಾಬ್ರಿಯೆಲಾ?

ಉತ್ತರ ಗೋವಾದ ಮಾಪುಸಾದಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಮಧ್ಯಾಹ್ನ ಸುಮಾರು 4 ಗಂಟೆಗೆ ಅರ್ಜುನ್ ರಾಮ್‌ಪಾಲ್ ಮತ್ತು ಗ್ಯಾಬ್ರಿಯೆಲಾ ಆಗಮಿಸಿ ವಿವಾಹ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದರು.

ಪಣಜಿ: ಬಾಲಿವುಡ್ ನಟ ಅರ್ಜುನ್ ರಾಮ್‌ಪಾಲ್ ತಮ್ಮ ಬಹುಕಾಲದ ಸಂಗಾತಿ ಹಾಗೂ ಮಾಡೆಲ್-ಫ್ಯಾಷನ್ ಡಿಸೈನರ್ ಗ್ಯಾಬ್ರಿಯೆಲಾ ಡೆಮೆಟ್ರಿಯಾಡ್ಸ್ ಅವರನ್ನು ಶುಕ್ರವಾರ ವಿವಾಹವಾಗಿದ್ದಾರೆ.

ಗೋವಾದಲ್ಲಿ ಕೆಲವೇ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಂಪತಿ ತಮ್ಮ ವಿವಾಹವನ್ನು ಅಧಿಕೃತವಾಗಿ ನೋಂದಾಯಿಸಿಕೊಂಡಿದ್ದು, ಉತ್ತರ ಗೋವಾದ ಮಾಪುಸಾದಲ್ಲಿರುವ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಮಧ್ಯಾಹ್ನ ಸುಮಾರು 4 ಗಂಟೆಗೆ ಅರ್ಜುನ್ ರಾಮ್‌ಪಾಲ್ ಮತ್ತು ಗ್ಯಾಬ್ರಿಯೆಲಾ ಆಗಮಿಸಿ ವಿವಾಹ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದರು.

ರಾಜ್ಯದ ಏಕರೂಪ ನಾಗರಿಕ ಸಂಹಿತೆ (Uniform Civil Code - UCC) ಅಡಿಯಲ್ಲಿ ವಿವಾಹ ನೋಂದಣಿಯಾಗಿದೆ ಎಂದು ಸಬ್-ರಿಜಿಸ್ಟ್ರಾರ್ ಸೂರಜ್ ವೆರ್ನೇಕರ್ ತಿಳಿಸಿದ್ದಾರೆ. ದಂಪತಿ ಸರಳ ಕ್ಯಾಶುವಲ್ ಉಡುಗೆಯಲ್ಲಿ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿದ್ದರು.

15 ದಿನಗಳ ನಿಯಮಕ್ಕೆ ವಿನಾಯಿತಿ

ಇನ್ನು ಸ್ಥಳೀಯ ಕಾನೂನಿನ ಪ್ರಕಾರ ವಿವಾಹ ನೋಂದಣಿಯ ಮೊದಲ ಮತ್ತು ಎರಡನೇ ಸಹಿಗಳ ನಡುವೆ 15 ದಿನಗಳ ಅವಧಿ ಕಡ್ಡಾಯವಾಗಿದೆ. ಆದರೆ ಈ ಅವಧಿಯನ್ನು ಕಡಿಮೆ ಮಾಡಲು ಸ್ಥಳೀಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರಿಂದ ದಂಪತಿ ವಿಶೇಷ ಅನುಮತಿ ಪಡೆದಿದ್ದರು ಎಂದು ಸಬ್-ರಿಜಿಸ್ಟ್ರಾರ್ ತಿಳಿಸಿದ್ದಾರೆ. ಆದಾಗ್ಯೂ, ವಿವಾಹ ಪ್ರಮಾಣಪತ್ರವನ್ನು 15 ದಿನಗಳ ಬಳಿಕ ದಂಪತಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾರು ಈ ಗ್ಯಾಬ್ರಿಯೆಲಾ?

ಗ್ಯಾಬ್ರಿಯೆಲಾ ದಕ್ಷಿಣ ಆಫ್ರಿಕಾದ ಪ್ರಜೆಯಾಗಿದ್ದು, ದಂಪತಿ ಪ್ರಸ್ತುತ ಪಣಜಿ ಸಮೀಪದ ಸಕ್ಕೊರೊ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಇತ್ತೀಚೆಗೆ ನಟಿ ರಿಯಾ ಚಕ್ರವರ್ತಿ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂಭಾಷಣೆಯಲ್ಲಿ ಗ್ಯಾಬ್ರಿಯೆಲಾ, ಅರ್ಜುನ್ ಅವರ ಪುತ್ರಿಯರಾದ ಮಹಿಕಾ ಮತ್ತು ಮೈರಾ ಅವರೊಂದಿಗೆ ತಮಗಿರುವ ಆತ್ಮೀಯ ಬಾಂಧವ್ಯದ ಬಗ್ಗೆ ಮಾತನಾಡಿದ್ದರು.

ಅರ್ಜುನ್ ಅವರ ಪುತ್ರಿಯರು ತಮ್ಮೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತಮ್ಮನ್ನು ಗೌರವಿಸಬೇಕು ಎಂದು ಅವರಿಗೆ ಎಂದಿಗೂ ಒತ್ತಾಯಿಸಿಲ್ಲ. ತಮ್ಮನ್ನು ಸ್ನೇಹಿತೆಯಾಗಿ ಸ್ವೀಕರಿಸಿದರೆ ಅದೇ ಸಾಕು. ಅವರ ಮೇಲೆ ಯಾವುದೇ ಒತ್ತಡ ಹೇರದೆ, ತಮ್ಮದೇ ಆದ ಹೊಂದಾಣಿಕೆಗೆ ಸಮಯ ನೀಡಿದ್ದೇವೆ ಎಂದು ಗ್ಯಾಬ್ರಿಯೆಲಾ ಹೇಳಿದ್ದರು.

1998ರಲ್ಲಿ ಅರ್ಜುನ್ ಮೊದಲ ಮದುವೆ

ಅರ್ಜುನ್ ರಾಮ್‌ಪಾಲ್ 1998ರಲ್ಲಿ ಮಾಜಿ ಸೂಪರ್ ಮಾಡೆಲ್ ಹಾಗೂ ಉದ್ಯಮಿ ಮೆಹರ್ ಜೆಸಿಯಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮಹಿಕಾ ಮತ್ತು ಮೈರಾ ಎಂಬ ಇಬ್ಬರು ಪುತ್ರಿಯರಿದ್ದಾರೆ. ಸುಮಾರು ಎರಡು ದಶಕಗಳ ದಾಂಪತ್ಯದ ಬಳಿಕ 2018ರಲ್ಲಿ ಇಬ್ಬರೂ ಪ್ರತ್ಯೇಕವಾಗಲು ನಿರ್ಧರಿಸಿದ್ದರು. 2019ರಲ್ಲಿ ಅವರ ವಿಚ್ಛೇದನ ಅಧಿಕೃತವಾಗಿ ಪೂರ್ಣಗೊಂಡಿತ್ತು. ಪುತ್ರಿಯರ ಪಾಲನೆಯಲ್ಲಿ ತಾವು ಇಬ್ಬರೂ ಸೌಹಾರ್ದಯುತವಾಗಿ ಸಹಕರಿಸುತ್ತಿರುವುದಾಗಿ ಅರ್ಜುನ್ ಹಲವು ಸಂದರ್ಭಗಳಲ್ಲಿ ಹೇಳಿಕೊಂಡಿದ್ದಾರೆ.

ಗ್ಯಾಬ್ರಿಯೆಲಾ ಜೊತೆ ಇಬ್ಬರು ಪುತ್ರರು

2018ರ ಸುಮಾರಿಗೆ ಅರ್ಜುನ್ ಮತ್ತು ಗ್ಯಾಬ್ರಿಯೆಲಾ ಪ್ರೀತಿಸುತ್ತಿದ್ದರು ಎನ್ನಲಾಗಿದೆ. 2019ರಲ್ಲಿ ಅವರಿಗೆ ಮೊದಲ ಪುತ್ರ ಆರಿಕ್ ಜನಿಸಿದರು. ಬಳಿಕ 2023ರಲ್ಲಿ ಎರಡನೇ ಪುತ್ರ ಅರಿವ್ ಜನಿಸಿದರು.

ಕಳೆದ ಡಿಸೆಂಬರ್‌ನಲ್ಲಿ ರಿಯಾ ಚಕ್ರವರ್ತಿ ಅವರ ಪಾಡ್‌ಕಾಸ್ಟ್‌ನಲ್ಲಿ ಅರ್ಜುನ್ ಮತ್ತು ಗ್ಯಾಬ್ರಿಯೆಲಾ ಭಾಗವಹಿಸಿದ್ದ ವೇಳೆ ತಮ್ಮ ನಿಶ್ಚಿತಾರ್ಥವನ್ನು ನಟ ಬಹಿರಂಗಪಡಿಸಿದ್ದರು. ಆ ಸಂದರ್ಭದಲ್ಲಿ ಗ್ಯಾಬ್ರಿಯೆಲಾ, “ನಾವು ಈಗ ಮದುವೆಯಾಗಿಲ್ಲ, ಆದರೆ ಯಾರಿಗೆ ಗೊತ್ತು?” ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರ್ಜುನ್, “ನಾವು ಎಂಗೇಜ್ ಆಗಿದ್ದೇವೆ... ನಿಮ್ಮ ಶೋನಲ್ಲೇ ಇದನ್ನು ಮೊದಲ ಬಾರಿಗೆ ಹೇಳುತ್ತಿದ್ದೇವೆ” ಎಂದು ಘೋಷಿಸಿದ್ದರು.

‘ಧುರಂಧರ್’ನಲ್ಲಿ ಮೆಚ್ಚುಗೆ

ವೃತ್ತಿಜೀವನದ ವಿಚಾರಕ್ಕೆ ಬಂದರೆ, ಅರ್ಜುನ್ ರಾಮ್‌ಪಾಲ್ ಇತ್ತೀಚೆಗೆ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಚಿತ್ರದಲ್ಲಿ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಕಾಣಿಸಿಕೊಂಡು ವ್ಯಾಪಕ ಮೆಚ್ಚುಗೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿದ್ಯಾರ್ಥಿಗೆ ಪೆಲೆಟ್ ಗನ್ ಪೆಟ್ಟು: ರಾಹುಲ್ ಧರಣಿ ಬೆನ್ನಲ್ಲೇ FIR ದಾಖಲಿಸಿದ ದೆಹಲಿ ಪೊಲೀಸ್

ಜಂತರ್ ಮಂತರ್ ಪ್ರತಿಭಟನೆಗಳು ಭ್ರಷ್ಟಾಚಾರ ಮಾತ್ರವಲ್ಲ, ವ್ಯವಸ್ಥೆಯ ವೈಫಲ್ಯಗಳನ್ನೂ ಎತ್ತಿ ತೋರಿಸಿದೆ: RSS

Toxic ಟಿಕೆಟ್ ದಾಖಲೆ ಮಾರಾಟ: 1.65 ಲಕ್ಷ ಮುಂಗಡ ಟಿಕೆಟ್ ಬುಕ್ಕಿಂಗ್; ಹಿಂದಿಯಲ್ಲೇ ಮೊದಲ ದಿನ 50 ಕೋಟಿ ಗಳಿಕೆ ಸಾಧ್ಯತೆ, ಕನ್ನಡದಲ್ಲೆಷ್ಟು!

"ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ"- ಸೆರ್ಗಿಯೊ ಗೋರ್ ಹೇಳಿಕೆಗೆ ಪಾಕ್ ಕೆಂಡ- ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ- ಭಾರತ

3ನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಕರೀನಾ-ಸೈಫ್ ಅಲಿ ಖಾನ್? ಸಂಚಲನ ಸೃಷ್ಟಿಸಿದ ಬೇಬಿ ಬಂಪ್ ವಿಡಿಯೋ!