ಇತ್ತೀಚಿಗೆ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಇದೀಗ ವಿಭಿನ್ನ ರಾಗ ಹಾಡಿದ್ದಾರೆ. ದೇಶಕ್ಕಾಗಿ ಅವರ ನಿರಂತರ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಅಲ್ಲದೇ ಅವರ ಹೇಳಿಕೆಯ ಹಿಂದಿನ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ.
ಬಾಲಿವುಡ್‌ನಲ್ಲಿ ಕೋಮುವಾದ ಕುರಿತ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾದ ನಂತರ ಸಾಮಾಜಿಕ ಜಾಲತಾಣ ಇನ್ಸಾಟಾಗ್ರಾಮ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ತನ್ನ ಪ್ರೇರಣಾತ್ಮಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಭಾರತ ನನ್ನ ಸ್ಫೂರ್ತಿ ಮತ್ತು ಮನೆ ಎಂದು ಬಣ್ಣಿಸಿದ್ದಾರೆ. ಸಂಗೀತವು ನನ್ನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಸಂಗೀತವು ಯಾವಾಗಲೂ ನಮ್ಮ ಸಂಸ್ಕೃತಿಯನ್ನು ಸಂಪರ್ಕಿಸುವ, ಆಚರಿಸುವ ಮತ್ತು ಗೌರವಿಸುವ ನನ್ನ ಮಾರ್ಗವಾಗಿದೆ. ಭಾರತವು ನನ್ನ ಸ್ಫೂರ್ತಿ, ನನ್ನ ಗುರು ಮತ್ತು ನನ್ನ ಮನೆ. ಉದ್ದೇಶಗಳನ್ನು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನನ್ನ ಉದ್ದೇಶವು ಯಾವಾಗಲೂ ಸಂಗೀತದ ಮೂಲಕ ಉನ್ನತಿ, ಗೌರವ ಮತ್ತು ಸೇವೆಯಾಗಿದೆ. ನಾನು ಎಂದಿಗೂ ನೋವುಂಟುಮಾಡಲು ಬಯಸಲಿಲ್ಲ. ಪ್ರಾಮಾಣಿಕವಾಗಿ ಇರುವುದಾಗಿ ಅವರು ಹೇಳಿಕೊಂಡಿದ್ದಾರೆ.
ಹಲವು ಪ್ರಾಜೆಕ್ಟ್ ಗಳ ಮೂಲಕ ದೇಶದ ವೈವಿಧ್ಯತೆಯನ್ನು ಆಚರಿಸಲು ತನ್ನ ಪ್ರಯತ್ನವನ್ನು ರೆಹಮಾನ್ ಉದಾಹರಣೆಯಾಗಿ ನೀಡಿದ್ದಾರೆ. WAVES ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ Jhalaa ಪ್ರಸ್ತುತಿ, Rooh-e-Noor ನಲ್ಲಿ ಯುವ ನಾಗ ಸಂಗೀತಗಾರರೊಂದಿಗೆ ಆಕ್ರೇಸ್ಟ್ರಾ, ಸಿಕ್ರೇಟ್ ಮೌಂಟೇನ್ ಸಂಗೀತ ಕಾರ್ಯಕ್ರಮ, ರಾಮಾಯಣಕ್ಕೆ ಸಂಗೀತ ಸಂಯೋಜನೆ ಸೇರಿದಂತೆ ಹಲವು ಪ್ರಾಜೆಕ್ಟ್ ಮಾಡಿದ್ದು, ಪ್ರತಿ ಜರ್ನಿಯು ನನ್ನ ಉದ್ದೇಶವನ್ನು ಗಟ್ಟಿಗೊಳಿಸಿದೆ ಎಂದು ಅವರು ಹೇಳಿದ್ದಾರೆ.
ಕೊನೆಯಲ್ಲಿ ಕ್ರಿಕೆಟ್ ಪಂದ್ಯವೊಂದರಲ್ಲಿ 'Maa Tujhe Salaam' Vande Mataram ಸಾಂಗ್ ಪ್ರಸಾರವಾಗುವುದರೊಂದಿಗೆ ವಿಡಿಯೋ ಅಂತ್ಯಗೊಳ್ಳುತ್ತದೆ.