ನವದೆಹಲಿ: ಪ್ರಕರಣವೊಂದರ ವಿಚಾರಣೆ ವೇಳೆ ಖ್ಯಾತ ಸ್ಟ್ಯಾಂಡ್‌ಅಪ್ ಹಾಸ್ಯನಟ ಮತ್ತು ಯೂಟ್ಯೂಬರ್ ಸಮಯ್ ರೈನಾಗೆ ದೇಶದ ಸರ್ವೋಚ್ಛ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ.
ಏನಿದು ಪ್ರಕರಣ?
ಸಮಯ್ ರೈನಾ ತಮ್ಮ ಇಂಡಿಯಾಸ್ ಗಾಟ್ ಲೇಟೆಂಟ್ ಶೋನಲ್ಲಿ, ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಚಿಕಿತ್ಸೆಗೆ ತಗಲುವ ಭಾರಿ ವೆಚ್ಚದ (ಸುಮಾರು 16 ಕೋಟಿ ರೂಪಾಯಿ) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಜೊತೆಗೆ, ದೃಷ್ಟಿ ವಿಕಲಚೇತನರು ಹಾಗೂ ದಿವ್ಯಾಂಗ ವ್ಯಕ್ತಿಯೊಬ್ಬರನ್ನು ಅಣಕಿಸುವ ರೀತಿಯಲ್ಲಿ ಜೋಕ್‌ಗಳನ್ನು ಮಾಡಲಾಗಿತ್ತು.
ಹಾಗಾಗಿ, ಎಸ್‌ಎಂಎ ಫೌಂಡೇಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಕಳೆದ ವರ್ಷ ಪ್ರಕರಣವನ್ನು ವಿಚಾರಣೆ ನಡೆಸಿದ್ದ ಕೋರ್ಟ್, ಇದನ್ನು ಶಿಕ್ಷೆಯ ಬದಲು ಸಾಮಾಜಿಕ ಜವಾಬ್ದಾರಿಯನ್ನ ನೀಡಿತ್ತು. ಅಂದರೆ, ಕಾರ್ಯಕ್ರಮದಲ್ಲಿ ವಿಕಲ ಚೇತನ ಸಾಧಕರ ಕಥೆಗಳನ್ನು ಬಿಂಬಿಸಬೇಕು ಮತ್ತು ಅವರಿಗಾಗಿ ನಿಧಿ ಸಂಗ್ರಹಣೆ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಆದೇಶಿಸಿತ್ತು. ಆದ್ರೆ, ರೈನಾ ಅವರು ಎಸ್‌ಎಂಎ ಫೌಂಡೇಶನ್ ಅನ್ನು ಸಂಪರ್ಕಿಸದೆ ಹಾಗೂ ನ್ಯಾಯಾಲಯದ ಆದೇಶಗಳನ್ನು ಸರಿಯಾಗಿ ಪಾಲಿಸದೆ ಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದ್ದಾರೆ. ಹಾಗಾಗಿ, ಸಮಯ್ ರೈನಾ ವಿರುದ್ಧ ಅಸಮಧಾನ ವ್ಯಕ್ತಪಡಿಸಿ, 3 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಯಾವ ರೀತಿಯ ಯುವ ಐಕಾನ್?
ಇನ್ನು, ಎಸ್‌ಎಂಎ ಫೌಂಡೇಶನ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಅವರು, ನ್ಯಾಯಾಲಯದ ಹಿಂದಿನ ನಿರ್ದೇಶನಗಳ ಹೊರತಾಗಿಯೂ, ರೈನಾ ಎಸ್‌ಎಂಎ ಸಂಪರ್ಕಿಸಿಲ್ಲ. ಇದು, ನ್ಯಾಯಾಲಯದ ಮೇಲೆ ಅವರಿಗಿರುವ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ. ಅವರಿಂದ ಪ್ರತಿಷ್ಠಾನವು ಒಂದು ಪೈಸೆಯನ್ನೂ ಬಯಸುವುದಿಲ್ಲ ಎಂದ ಅವರು, ಇಂತವರು, ಯುವಜನರಿಗೆ ಯಾವ ರೀತಿಯ ಐಕಾನ್ ಎಂದು ನನಗೆ ತಿಳಿದಿಲ್ಲ ಎಂದರು.
ಮುಂದುವರೆದು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠವು ಆರಂಭದಲ್ಲಿ ಸಮಯ್ ರೈನಾಗೆ 10 ಲಕ್ಷ ರೂಪಾಯಿ ದಂಡ ವಿಧಿಸಲು ಮುಂದಾಗಿತ್ತು. ಆದರೆ ರೈನಾ ಪರ ವಕೀಲರು ಬೇಷರತ್ ಕ್ಷಮೆಯಾಚಿಸಿ, ವಿನಾಯಿತಿ ಕೋರಿದ ನಂತರ ದಂಡದ ಮೊತ್ತವನ್ನು 3 ಲಕ್ಷ ರೂಪಾಯಿಗೆ ಇಳಿಸಲಾಯಿತು.
ಇದರೊಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಇತರ 4 ಹಾಸ್ಯನಟರಾದ ವಿಪುಲ್ ಗೋಯಲ್, ಬಾಲರಾಜ್ ಪರಮ್‌ಜೀತ್ ಸಿಂಗ್ ಘೈ, ಸೋನಾಲಿ ಠಕ್ಕರ್ ಹಾಗೂ ನಿಶಾಂತ್ ಜಗದೀಶ್ ತನ್ವರ್ ಅವರಿಗೂ ನ್ಯಾಯಾಲಯವು 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮುಂದಿನ ವಿಚಾರಣೆಯೊಳಗೆ ನ್ಯಾಯಾಲಯದ ಆದೇಶಗಳನ್ನು ಸಂಪೂರ್ಣವಾಗಿ ಪಾಲಿಸದಿದ್ದರೆ, ಈ ದಂಡದ ಮೊತ್ತವನ್ನು 30 ಲಕ್ಷಕ್ಕೆ ಏರಿಕೆ ಮಾಡುವುದಾಗಿ ಕೋರ್ಟ್ ಎಚ್ಚರಿಕೆ ನೀಡಿದೆ.