ಮುಂಬೈ: ಹಜ್ ಯಾತ್ರೆಯಿಂದ ಮರಳಿದ ಬಳಿಕ ಪತ್ನಿ ಫರಾ ನಾಜ್ ಸಂಪೂರ್ಣ ಬದಲಾಗಿದ್ದು ಇದೇ ಕಾರಣಕ್ಕೆ ತಮ್ಮ ಮೊದಲ ಮದುವೆ ಮುರಿದು ಬಿತ್ತು ಖ್ಯಾತ ಅಥ್ಲೀಟ್ ಹಾಗೂ ನಟ ವಿಂದು ದಾರಾ ಸಿಂಗ್ ಹೇಳಿದ್ದಾರೆ.
ನಟಿ ತಬು ಅವರ ಸಹೋದರಿ ಹಾಗೂ ನಟಿ ಫರಾ ನಾಜ್ ಜೊತೆಗಿನ ಮೊದಲ ಮದುವೆ ಮುರಿದುಬೀಳಲು ಕಾರಣವೇನು ಎಂಬುದನ್ನು ನಟ ವಿಂದು ದಾರಾ ಸಿಂಗ್ ಬಹಿರಂಗಪಡಿಸಿದ್ದಾರೆ.
ಫರಾ ನಾಜ್ ಹಜ್ ಯಾತ್ರೆಯಿಂದ ಮರಳಿದ ಬಳಿಕ ಅವರ ಧಾರ್ಮಿಕ ನಂಬಿಕೆಗಳು ಮತ್ತು ಜೀವನಶೈಲಿಯಲ್ಲಿ ದೊಡ್ಡ ಬದಲಾವಣೆಯಾಗಿತ್ತು. ಇದೇ ತಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ 'ಬಿಂದಾಸ್ ಬೋಲ್' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ವಿಂದು ದಾರಾ ಸಿಂಗ್, ತಮ್ಮ ಮೊದಲ ಮದುವೆಯ ವೈಫಲ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಹಜ್ ಯಾತ್ರೆ ಬಳಿಕ ಬದಲಾದರು!
ಪಾಡ್‌ಕಾಸ್ಟ್‌ನಲ್ಲಿ ಫರಾ ನಾಜ್ ಜೊತೆಗಿನ ವಿಚ್ಛೇದನದ ಬಗ್ಗೆ ಕೇಳಿದಾಗ, ಹಜ್ ಯಾತ್ರೆಗೆ ಹೋಗಿ ಬಂದ ಬಳಿಕ ಅವರ ಧಾರ್ಮಿಕ ನಂಬಿಕೆಗಳಲ್ಲಿ ಬದಲಾವಣೆಯಾಯಿತು ಎಂದು ವಿಂದು ಹೇಳಿದ್ದಾರೆ.
"ಹಜ್ ಯಾತ್ರೆಯಿಂದ ಮರಳಿದ ಬಳಿಕ ಅವರು ಸಂಪೂರ್ಣ ಬದಲಾಗಿದ್ದರು. ಇಸ್ಲಾಂ ಧರ್ಮವನ್ನು ಅನುಸರಿಸಬೇಕು, ಹಿಂದೂ ಧರ್ಮವನ್ನು ಅಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದಕ್ಕೂ ಮೊದಲು ನಮ್ಮ ನಡುವೆ ಧರ್ಮದ ವಿಚಾರವಾಗಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅವರು ಬದಲಾದ ಬಳಿಕ ನಮ್ಮ ನಡುವೆ ಭಿನ್ನಾಭಿಪ್ರಾಯಗಳು ಶುರುವಾದವು" ಎಂದು ತಿಳಿಸಿದ್ದಾರೆ.
ಫರಾ ಅವರು ಧೂಮಪಾನ ಬಿಡುವುದಾಗಿ ಹೇಳಿ, ತಮ್ಮನ್ನು ಹಜ್ ಯಾತ್ರೆಗೆ ಕಳುಹಿಸುವಂತೆ ಕೇಳಿಕೊಂಡಿದ್ದರು. ಅದರಂತೆ ವಿಂದು ಯಾತ್ರೆಗೆ ವ್ಯವಸ್ಥೆ ಮಾಡಿದ್ದರು. ಆದರೆ ಅಲ್ಲಿಂದ ಮರಳಿದ ಬಳಿಕ ಅವರ ವರ್ತನೆ ಮತ್ತು ಆಲೋಚನೆಗಳಲ್ಲಿ ಬದಲಾವಣೆಯಾಯಿತು ಎಂದು ನೆನಪಿಸಿಕೊಂಡಿದ್ದಾರೆ.
ಮದುವೆಗೂ ಮುನ್ನ ಎಚ್ಚರಿಕೆ ನೀಡಿದ್ದ ತಂದೆ ದಾರಾ ಸಿಂಗ್!
ವಿಂದು ದಾರಾ ಸಿಂಗ್ ಅವರ ತಂದೆ, ಖ್ಯಾತ ಕುಸ್ತಿಪಟು ಹಾಗೂ ನಟ ದಾರಾ ಸಿಂಗ್ ಅವರು ಕೂಡ ಈ ಮದುವೆಯ ಬಗ್ಗೆ ಆರಂಭದಲ್ಲೇ ಎಚ್ಚರಿಕೆ ನೀಡಿದ್ದರಂತೆ.
2024ರ ಮಾರ್ಚ್‌ನಲ್ಲಿ ಸಿದ್ಧಾರ್ಥ್ ಕಣ್ಣನ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ವಿಂದು, "ಪ್ರೀತಿಯವರೆಗೆ ಎಲ್ಲವೂ ಸರಿ. ಆದರೆ ಬೇರೆ ಬೇರೆ ಧರ್ಮದವರು, ಅದರಲ್ಲೂ ಹಿಂದೂ ಮತ್ತು ಮುಸ್ಲಿಮರು ಮದುವೆಯಾದಾಗ ಕೆಲವು ಸಮಸ್ಯೆಗಳು ಎದುರಾಗಬಹುದು" ಎಂದು ತಂದೆ ಹೇಳಿದ್ದನ್ನು ನೆನಪಿಸಿಕೊಂಡಿದ್ದರು.
ಆದರೆ ತಾವು ಮತ್ತು ಫರಾ ಪರಸ್ಪರ ಪ್ರೀತಿಸುತ್ತಿದ್ದು, ಯಾವುದೇ ಭಿನ್ನಾಭಿಪ್ರಾಯಗಳನ್ನು ಎದುರಿಸುವ ಶಕ್ತಿ ತಮ್ಮ ಸಂಬಂಧಕ್ಕಿದೆ ಎಂದು ತಂದೆ ಮತ್ತು ಕುಟುಂಬದವರನ್ನು ಒಪ್ಪಿಸಿದ್ದಾಗಿ ಹೇಳಿದ್ದಾರೆ.
ನಂತರದ ದಿನಗಳಲ್ಲಿ ತಂದೆಯ ಮಾತು ನೆನಪಾಯಿತು. ದಂಪತಿಯಲ್ಲಿ ಒಬ್ಬರು ಧಾರ್ಮಿಕವಾಗಿ ಹೆಚ್ಚು ಕಟ್ಟುನಿಟ್ಟಾದಾಗ ವೈವಾಹಿಕ ಜೀವನದ ನಿರೀಕ್ಷೆಗಳು ಬದಲಾಗಬಹುದು ಎಂದು ವಿಂದು ಅಭಿಪ್ರಾಯಪಟ್ಟಿದ್ದಾರೆ.
ಜೂನ್ 2026ರಲ್ಲಿ 'ಕಡಕ್' ಸಂದರ್ಶನದಲ್ಲೂ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದ ಅವರು, ಧಾರ್ಮಿಕ ವಿಚಾರಗಳಲ್ಲಿ ಉಂಟಾದ ಬದಲಾವಣೆಯೇ ತಮ್ಮ ವಿಚ್ಛೇದನಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದರು.
2002ರಲ್ಲಿ ವಿಚ್ಛೇದನ, ಮಗನಿಂದ ಆರು ತಿಂಗಳು ದೂರ!
ವಿಂದು ದಾರಾ ಸಿಂಗ್ ಮತ್ತು ಫರಾ ನಾಜ್ 1996ರಲ್ಲಿ ವಿವಾಹವಾಗಿದ್ದರು. 1997ರಲ್ಲಿ ದಂಪತಿಗೆ ಫತೇರ್ ರಾಂಧವ ಎಂಬ ಮಗ ಜನಿಸಿದ್ದ. ಆದರೆ ವೈವಾಹಿಕ ಜೀವನ ಹೆಚ್ಚು ಕಾಲ ಉಳಿಯಲಿಲ್ಲ. 2002ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ವಿಚ್ಛೇದನದ ಬಳಿಕ ಸುಮಾರು ಆರು ತಿಂಗಳ ಕಾಲ ತಮ್ಮ ಮಗನನ್ನು ಭೇಟಿಯಾಗಲು ಅವಕಾಶ ಸಿಕ್ಕಿರಲಿಲ್ಲ ಎಂದು ವಿಂದು ಹೇಳಿಕೊಂಡಿದ್ದಾರೆ.
ಆದರೂ ಫರಾ ಬಗ್ಗೆ ತಮಗೆ ಯಾವುದೇ ದ್ವೇಷವಿಲ್ಲ. ಆ ಮದುವೆಯಿಂದ ಸುಂದರ ಮಗ ಸಿಕ್ಕಿದ್ದಾನೆ. ಫರಾ ಜೊತೆಗಿನ ಅನೇಕ ಒಳ್ಳೆಯ ನೆನಪುಗಳಿವೆ. ಈಗಲೂ ನಾವು ಸ್ನೇಹಿತರಾಗಿದ್ದೇವೆ. ಆ ಮದುವೆಯ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ವಿಂದು ಹೇಳಿದ್ದಾರೆ.