ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಆಸ್ತಿ ಕಲಹ ಬೀದಿಗೆ ಬಂದಿದೆ. ಅಮಿತಾಬ್ ಬಚ್ಚನ್ ವಾಸಿಸುತ್ತಿರುವ 'ಜಲ್ಸಾ' ಬಂಗಲೆ ತನಗೆ ಸೇರಿದ್ದು ಎಂದು ಅವರ ನಾದಿನಿ ಹೇಳಿಕೊಂಡಿದ್ದಾರೆ.
1993ರಲ್ಲಿ ಮಾಡಲಾದ ಒಂದು 'ಗಿಫ್ಟ್ ಡೀಡ್' (ಉಡುಗೊರೆ ಪತ್ರ) ಅನ್ನು ಅಮಿತಾಭ್ ಬಚ್ಚನ್ ಅವರ ತಮ್ಮ, ಅಜಿತಾಭ್ ಬಚ್ಚನ್ ಅವರ ಪತ್ನಿ ರಮೋಲಾ ಬಚ್ಚನ್ ಪ್ರಶ್ನಿಸಿದ್ದಾರೆ.
ಈ ಪತ್ರದ ಮೂಲಕ 'ಜಲ್ಸಾ' ನಿವಾಸದ ಒಡೆತನವು ರಮೋಲಾ ಅವರಿಂದ ಜಯಾ ಬಚ್ಚನ್ ಅವರಿಗೆ ವರ್ಗಾವಣೆಯಾಗಿತ್ತು. 'ಮುಂಬೈ ಮಿರರ್' ಪತ್ರಿಕೆಯ ವರದಿಯ ಪ್ರಕಾರ, ತಮಗೆ ಇಂತಹ ಪತ್ರದ ಬಗ್ಗೆ ಅರಿವೇ ಇರಲಿಲ್ಲ, ತಾವು ಇದಕ್ಕೆ ಸಮ್ಮತಿ ನೀಡಿರಲಿಲ್ಲ ಅಥವಾ ಈ ವ್ಯವಹಾರವನ್ನು ನಡೆಸಿಕೊಟ್ಟಿರಲಿಲ್ಲವೆಂದೂ ರಮೋಲಾ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
'ಜಲ್ಸಾ' ಆಸ್ತಿಯ ದಾಖಲೆ ಪತ್ರದಲ್ಲಿ (property card) ಇನ್ನೂ ರಮೋಲಾ ಅವರ ಹೆಸರೇ ಇದೆ. ಆಸ್ತಿ ದಾಖಲೆ ಪತ್ರದಿಂದ ರಮೋಲಾ ಅವರ ಹೆಸರನ್ನು ತೆಗೆದುಹಾಕಿ, ಆ ಜಾಗದಲ್ಲಿ ಜಯಾ ಬಚ್ಚನ್ ಅವರ ಹೆಸರನ್ನು ಸೇರಿಸಲು ಪ್ರಯತ್ನಗಳು ನಡೆದ ಹಿನ್ನೆಲೆಯಲ್ಲಿ ಈ ವಿವಾದ ಹುಟ್ಟಿಕೊಂಡಿದೆ ಎಂದು 'ಮುಂಬೈ ಮಿರರ್' ತಿಳಿಸಿದೆ.
ಒಂದು ಕಾಲದಲ್ಲಿ 'ಜಲ್ಸಾ' ಚಲನಚಿತ್ರ ನಿರ್ಮಾಪಕ ಎನ್. ಸಿ. ಸಿಪ್ಪಿ ಅವರಿಗೆ ಸೇರಿತ್ತು. ಸಿಪ್ಪಿ ನಿರ್ಮಿಸಿದ 1982ರ 'ಸತ್ತೆ ಪೆ ಸತ್ತಾ' ಚಿತ್ರದಲ್ಲಿ ನಟಿಸಿದ್ದಕ್ಕಾಗಿ, ಸಂಭಾವನೆಯ ರೂಪದಲ್ಲಿ ಈ ಆಸ್ತಿಯನ್ನು ಅಮಿತಾಬ್ ಬಚ್ಚನ್ ಅವರಿಗೆ ನೀಡಲಾಗಿತ್ತು ಎಂದು ಹಿಂದಿನ ವರದಿಗಳು ತಿಳಿಸಿದ್ದವು. ಆದರೆ, ಈ ಆಸ್ತಿಯ ಒಡೆತನ ರಮೋಲಾ ಬಚ್ಚನ್ ಅವರಿಗೆ ಹೇಗೆ ಬಂತು ಎಂಬುದು ತಿಳಿದುಬಂದಿಲ್ಲ.
ಅಮಿತಾಬ್ ಬಚ್ಚನ್ ಅವರು ಕಳೆದ ವರ್ಷ ಜುಹುವಿನಲ್ಲಿರುವ ತಮ್ಮ ಮೂಲ ಬಂಗಲೆ 'ಪ್ರತೀಕ್ಷಾ'ವನ್ನು ತಮ್ಮ ಮಗಳು ಶ್ವೇತಾ ಬಚ್ಚನ್ ನಂದಾ ಅವರಿಗೆ ಉಡುಗೊರೆಯಾಗಿ ನೀಡಿದ್ದರು.