ಕೋಲ್ಕತ್ತಾ: ಕಿರುತೆರೆ ನಟ ಹಾಗೂ ನಟಿ ರಶ್ಮಿ ದೇಸಾಯಿ ಅವರ ಮಾಜಿ ಪತಿ ನಂದೀಶ್ ಸಂಧು 2ನೇ ಮದುವೆಯಾಗಿದ್ದಾರೆ.
ಟಿವಿ ನಟಿ ಕವಿತಾ ಬ್ಯಾನರ್ಜಿ ಅವರನ್ನು ನವೆಂಬರ್ 14ರಂದು ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಸಾಂಪ್ರದಾಯಿಕ ಬಂಗಾಳಿ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಸಮಾರಂಭ ನೆರವೇರಿದೆ.
ಇದೀಗ ಮದುವೆಯ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ನಂದೀಶ್ ಮತ್ತು ಕವಿತಾ ಅವರ ಮದುವೆ ಸಂಭ್ರಮ ನವೆಂಬರ್ 13ರಂದು ಆರಂಭವಾಗಿತ್ತು.
ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮಗಳಲ್ಲಿ ನಿಶ್ಚಿತಾರ್ಥ, ಸಂಗೀತ್ ಮತ್ತು ಅರಿಶಿನ ಶಾಸ್ತ್ರ ಸೇರಿದಂತೆ ಹಲವು ಸಂಪ್ರದಾಯಗಳು ನಡೆದಿವೆ.
ಮದುವೆಯ ಸಂಭ್ರಮದ ಫೋಟೊ ಮತ್ತು ವಿಡಿಯೊಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ವಧು ಕವಿತಾ ಸಾಂಪ್ರದಾಯಿಕ ಬನಾರಸ್ ಸೀರೆಯಲ್ಲಿ ಕಂಗೊಳಿಸಿದರೆ, ನಂದೀಶ್ ಕ್ರೀಮ್ ಬಣ್ಣದ ರೇಷ್ಮೆ ಧೋತಿ ಮತ್ತು ಕುರ್ತಾ ಧರಿಸಿ ಗಮನ ಸೆಳೆದಿದ್ದಾರೆ.
ಕವಿತಾ ಕೆಂಪು ಮತ್ತು ಬಂಗಾರದ ಬಣ್ಣದ ಬನಾರಸ್ ಸೀರೆಯಲ್ಲಿ ಸಾಂಪ್ರದಾಯಿಕ ಬಂಗಾಳಿ ವಧುವಿನಂತೆ ಮಿಂಚಿದ್ದಾರೆ. ಇಬ್ಬರ ಮದುವೆಯ ಫೋಟೊಗಳಿಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ.
ಸೆಪ್ಟೆಂಬರ್ 2025ರಲ್ಲಿ ಈ ಜೋಡಿಯ ರೋಕಾ (ಮದುವೆ ನಿಶ್ಚಯ) ಸಮಾರಂಭ ನಡೆದಿತ್ತು. ಬಳಿಕ ಇಬ್ಬರೂ ತಮ್ಮ ನಿಶ್ಚಿತಾರ್ಥದ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.
ರಶ್ಮಿ ದೇಸಾಯಿ ಜೊತೆ ಮೊದಲ ಮದುವೆ
1981ರ ಡಿಸೆಂಬರ್ 25ರಂದು ರಾಜಸ್ಥಾನದ ಧೋಲ್‌ಪುರದಲ್ಲಿ ಜನಿಸಿದ ನಂದೀಶ್ ಸಂಧು ಅವರಿಗೆ ಈಗ 44 ವರ್ಷ. 1992ರ ಜುಲೈ 12ರಂದು ಜನಿಸಿದ ಕವಿತಾ ಬ್ಯಾನರ್ಜಿ ಅವರಿಗೆ 34 ವರ್ಷ. ಇಬ್ಬರ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ.
ಇದು ನಂದೀಶ್ ಅವರ ಎರಡನೇ ಮದುವೆ. ಈ ಹಿಂದೆ ಅವರು ಕಿರುತೆರೆ ನಟಿ ರಶ್ಮಿ ದೇಸಾಯಿ ಅವರನ್ನು ವಿವಾಹವಾಗಿದ್ದರು. ಜನಪ್ರಿಯ ಧಾರಾವಾಹಿ 'ಉತ್ತರನ್' ಚಿತ್ರೀಕರಣದ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು.
2012ರ ಫೆಬ್ರವರಿ 12ರಂದು ರಾಜಸ್ಥಾನದ ಧೋಲ್‌ಪುರದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ, ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ 2014ರಲ್ಲಿ ಪ್ರತ್ಯೇಕವಾಗಿರುವುದಾಗಿ ಘೋಷಿಸಿದ್ದರು. 2016ರಲ್ಲಿ ಇವರ ವಿಚ್ಛೇದನ ಅಧಿಕೃತವಾಗಿ ಪೂರ್ಣಗೊಂಡಿತ್ತು.
ನಂದೀಶ್ ಮತ್ತು ಕವಿತಾ ಕಿರುತೆರೆ ಪಯಣ
ನಂದೀಶ್ ಸಂಧು ಮತ್ತು ಕವಿತಾ ಬ್ಯಾನರ್ಜಿ ಇಬ್ಬರೂ ಕಿರುತೆರೆ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕವಿತಾ 'ತೇರಿ ಮೇರಿ ಇಕ್ಕ್ ಜಿಂದ್ರಿ' ಮತ್ತು 'ಭಾಗ್ಯಲಕ್ಷ್ಮಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ನಂದೀಶ್ 'ಫಿರ್ ಸುಬಹ್ ಹೋಗಿ', 'ಗ್ರಹಣ', 'ಅನ್‌ದೇಖಿ', 'ಜುಬಿಲಿ' ಮತ್ತು 'ಟಸ್ಕರಿ' ಸೇರಿದಂತೆ ಹಲವು ಟಿವಿ ಹಾಗೂ ಡಿಜಿಟಲ್ ಸರಣಿಗಳಲ್ಲಿ ಅಭಿನಯಿಸಿದ್ದಾರೆ.
2019ರಲ್ಲಿ ಹೃತಿಕ್ ರೋಷನ್ ನಟನೆಯ 'ಸೂಪರ್ 30' ಚಿತ್ರದ ಮೂಲಕ ಹಿಂದಿ ಸಿನಿಮಾರಂಗಕ್ಕೂ ಕಾಲಿಟ್ಟಿದ್ದರು. ಬಳಿಕ 'ಫ್ಯಾಮಿಲಿ ಆಫ್ ಠಾಕೂರ್‌ಗಂಜ್' ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು.