ಮುಂಬೈ: ಬಾಲಿವುಡ್‌ನ ಹಿರಿಯ ನಟಿ ಹಾಗೂ ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರವಾಗಿದ್ದು, ಪಾಪರಾಜಿ ಜೊತೆ ಮತ್ತೆ ಸಂಘರ್ಷ ನಡೆಸಿದ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಜಯಾ ಬಚ್ಚನ್ ಮತ್ತು ಪಾಪರಾಜಿ ನಡುವೆ ನಡೆದಿದೆ ಎನ್ನಲಾದ ಮಾತಿನ ಚಕಮಕಿಯ ವಿಡಿಯೋ ವೈರಲ್ ಆಗಿದ್ದು, ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ವೈರಲ್ ವಿಡಿಯೋದಲ್ಲಿ, ಪುತ್ರಿ ಶ್ವೇತಾ ಬಚ್ಚನ್ ನಂದಾ ಅವರೊಂದಿಗೆ ಕಾರ್ಯಕ್ರಮವೊಂದರಿಂದ ಹೊರಬರುತ್ತಿದ್ದ ಜಯಾ ಬಚ್ಚನ್ ಅವರತ್ತ ಫೋಟೋಗ್ರಾಫರ್‌ಗಳು ಕ್ಯಾಮೆರಾ ಹಿಡಿದಿದ್ದಾರೆ. ಈ ವೇಳೆ ಜಯಾ ಬಚ್ಚನ್ ಫೋಟೋಗ್ರಾಫರ್‌ಗಳತ್ತ ಅಸಮಾಧಾನ ವ್ಯಕ್ತಪಡಿಸುವ ರೀತಿಯಲ್ಲಿ ನೋಡಿದ್ದಾರೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಫೋಟೋಗ್ರಾಫರ್ ಒಬ್ಬರು, 'ಮೇಡಂ, ಯಾಕೆ ಹಾಗೆ ನೋಡುತ್ತಿದ್ದೀರಿ? ನೀವು ಅಮಿತಾಭ್ ಬಚ್ಚನ್ ಅವರ ಪತ್ನಿ ಎಂಬ ಕಾರಣಕ್ಕೆ ನಿಮ್ಮ ಫೋಟೋ ತೆಗೆದಿದ್ದೇನೆ. ಆ ಕಣ್ಣುಗಳನ್ನು ಅಮಿತಾಭ್ ಬಚ್ಚನ್ ಕಡೆ ತೋರಿಸಿ, ನನಗಲ್ಲ' ಎಂದು ಹೇಳಿದ್ದಾರೆ ಎನ್ನಲಾದ ಮಾತುಗಳು ವಿಡಿಯೋದಲ್ಲಿ ಕೇಳಿಬರುತ್ತವೆ.
ಈ ವೇಳೆ ಜಯಾ ಬಚ್ಚನ್ ಯಾವುದೇ ಪ್ರತಿಕ್ರಿಯೆ ನೀಡದೆ, ಗಂಭೀರ ಮುಖಭಾವದೊಂದಿಗೆ ತಮ್ಮ ವಾಹನದತ್ತ ತೆರಳಿದ್ದಾರೆ ಎಂದು ವರದಿಯಾಗಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದೆ.
ಇದೇ ಮೊದಲೇನಲ್ಲ
ಜಯಾ ಬಚ್ಚನ್ ಅವರು ಛಾಯಾಗ್ರಾಹಕರ ವರ್ತನೆ ಮತ್ತು ಸೆಲೆಬ್ರಿಟಿಗಳ ಖಾಸಗಿತನದ ವಿಚಾರವಾಗಿ ಈ ಹಿಂದೆಯೂ ಹಲವು ಬಾರಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಕರ್ತರು ಮತ್ತು ಪಾಪರಾಜಿಗಳನ್ನು ಪ್ರತ್ಯೇಕವಾಗಿ ನೋಡುವ ಅವರು, ವೃತ್ತಿಪರ ಪತ್ರಿಕೋದ್ಯಮದ ಬಗ್ಗೆ ಗೌರವವಿದೆ. ಆದರೆ, ಅನುಮತಿಯಿಲ್ಲದೆ ಚಿತ್ರಗಳನ್ನು ತೆಗೆಯುವ ಮತ್ತು ವೈಯಕ್ತಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವ ಛಾಯಾಗ್ರಾಹಕರ ವರ್ತನೆಯನ್ನು ಟೀಕಿಸಿದ್ದಾರೆ.
ಹಿರಿಯ ಪತ್ರಕರ್ತೆ ಬರ್ಖಾ ದತ್ ನಡೆಸಿಕೊಟ್ಟ ಕಾರ್ಯಕ್ರಮವೊಂದರಲ್ಲಿಯೂ ಜಯಾ ಬಚ್ಚನ್ ಅವರು ಪಾಪರಾಜಿ ಸಂಸ್ಕೃತಿಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಮೊಬೈಲ್ ಕ್ಯಾಮೆರಾ ಕೈಯಲ್ಲಿದೆ ಎಂಬ ಕಾರಣಕ್ಕೆ ಸಾರ್ವಜನಿಕ ವ್ಯಕ್ತಿಗಳ ಖಾಸಗಿತನಕ್ಕೆ ಧಕ್ಕೆ ತರುವುದನ್ನು ಅವರು ಆಕ್ಷೇಪಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆ
ವೈರಲ್ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಫೋಟೋಗ್ರಾಫರ್‌ಗಳ ಪರವಾಗಿ ಮಾತನಾಡಿದರೆ, ಇನ್ನು ಕೆಲವರು ಸೆಲೆಬ್ರಿಟಿಗಳ ವೈಯಕ್ತಿಕ ಸ್ಥಳ ಮತ್ತು ಖಾಸಗಿತನವನ್ನು ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.