ಬಾಲಿವುಡ್ ನಟಿ ನೇಹಾ ಶರ್ಮಾ ಅವರು ಶನಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನವನ್ನು ಬಳಸಿ ತಮ್ಮ ಫೋಟೋ ಮತ್ತು ವೀಡಿಯೊಗಳನ್ನು ಸೃಷ್ಟಿಸಿ ಬಳಸಿಕೊಂಡರೆ, ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
AI ಮೂಲಕ ಸೃಷ್ಟಿಸಲಾದ ಅನಧಿಕೃತ ಫೋಟೋ, ವಿಡಿಯೋಗಳನ್ನು "ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ತಮ್ಮ 'ಎಕ್ಸ್' (X) ಖಾತೆಯಲ್ಲಿ ನೇಹಾ ಶರ್ಮಾ ಬರೆದುಕೊಂಡಿದ್ದಾರೆ. ಅಲ್ಲದೆ, ಇಂತಹ ವಿಷಯಗಳನ್ನು ಆನ್ಲೈನ್ನಲ್ಲಿ ಹಂಚಿಕೊಳ್ಳುವುದನ್ನು ನಿಲ್ಲಿಸುವಂತೆ ಬಳಕೆದಾರರಿಗೆ ಮನವಿ ಮಾಡಿದ್ದಾರೆ.
"ನನ್ನ ಒಪ್ಪಿಗೆಯಿಲ್ಲದೆ, ನನ್ನ ಮುಖ ಅಥವಾ ರೂಪವನ್ನು ಬಳಸಿ AI ಮೂಲಕ ವಿಡಿಯೋಗಳು ಅಥವಾ ಚಿತ್ರಗಳನ್ನು ಸೃಷ್ಟಿಸುವ ಪ್ರತಿಯೊಬ್ಬರಿಗೂ, ತಕ್ಷಣವೇ ಅದನ್ನು ನಿಲ್ಲಿಸುವಂತೆ ಎಚ್ಚರಿಕೆ ನೀಡುತ್ತಿದ್ದೇನೆ. ಈಗಾಗಲೇ ಪೋಸ್ಟ್ ಮಾಡಲಾದ ಇಂತಹ ಎಲ್ಲಾ ವಿಷಯಗಳನ್ನು ತೆಗೆದುಹಾಕಿ. ನನ್ನ ಗುರುತನ್ನು ಬಳಸಿಕೊಂಡು AI ಮೂಲಕ ಯಾವುದೇ ವಿಡಿಯೋ ಅಥವಾ ಚಿತ್ರಗಳನ್ನು ಸೃಷ್ಟಿಸುವುದು, ಎಡಿಟ್ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸಿ" ಎಂದು ನಟಿ ಬರೆದಿದ್ದಾರೆ.
"ನನ್ನನ್ನು ತಪ್ಪಾಗಿ ಬಿಂಬಿಸಲು ಅಥವಾ ನನ್ನ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ನನ್ನ ಮುಖವನ್ನು ಈ ರೀತಿ ಬಳಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ನನ್ನ ಮುಖ ಅಥವಾ ರೂಪವನ್ನು ಅನಧಿಕೃತವಾಗಿ ಬಳಸಲು ನಾನು ಯಾವುದೇ ಅನುಮತಿ ನೀಡಿಲ್ಲ" ಎಂದು ನಟಿ ಸ್ಪಷ್ಟಪಡಿಸಿದ್ದಾರೆ.
ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿರುವ ನಟಿ, "ಇದನ್ನು ಒಂದು ಔಪಚಾರಿಕ ಎಚ್ಚರಿಕೆ ಎಂದು ಪರಿಗಣಿಸಿ: ಇಂತಹ ವಿಷಯಗಳನ್ನು ಸೃಷ್ಟಿಸುವ, ಪೋಸ್ಟ್ ಮಾಡುವ ಅಥವಾ ಹಂಚಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ವಿರುದ್ಧವೂ ನಾನು ಕಾನೂನು ಕ್ರಮ ಕೈಗೊಳ್ಳುತ್ತೇನೆ. ನಕಲಿ ಖಾತೆಗಳ ಹಿಂದೆ ಅಡಗಿಕೊಳ್ಳುವುದರಿಂದ ಅಥವಾ AI ತಂತ್ರಜ್ಞಾನವನ್ನು ಬಳಸುವುದರಿಂದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಯಾರೂ ಭಾವಿಸಬೇಡಿ. ಕೂಡಲೇ ಇವುಗಳನ್ನು ತೆಗೆದುಹಾಕಿ. ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ" ಎಂದು ನೇಹಾ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.