ನವದೆಹಲಿ: 'ಧುರಂಧರ್' ಚಿತ್ರದಲ್ಲಿ 'ಅತಿಯಾದ ಪ್ರಪಗಾಂಡ' ಮತ್ತು 'ಭೀಕರ ಹಿಂಸಾಚಾರ' ಇದೆ. ಅದೇ ವೇಳೆ, ಚಿತ್ರದ ಕಥಾಹಂದರ ಮತ್ತು ಕಥೆಯಲ್ಲಿನ ತಿರುವುಗಳು ಅದ್ಭುತವಾಗಿವೆ. ಮೊದಲ ಭಾಗಕ್ಕಿಂತ ಎರಡನೇ ಭಾಗದಲ್ಲಿ ಇವು ಉತ್ತಮವಾಗಿವೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ವಿಡಿಯೋವೊಂದರಲ್ಲಿ 'ಧುರಂಧರ್' ಚಿತ್ರದ ಕುರಿತು ತಮ್ಮ ವಿಶ್ಲೇಷಣೆ ಮತ್ತು ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. 'ಧುರಂಧರ್' ಚಿತ್ರದ ಮೊದಲ ಮತ್ತು ಎರಡನೇ ಭಾಗಗಳ ಪ್ರದರ್ಶನಕ್ಕೆ ಸಂಬಂಧಿಸಿದ 6.20 ನಿಮಿಷಗಳ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
'ನನಗೆ ಇಷ್ಟವಾಗದ ವಿಷಯಗಳೆಂದರೆ - ಇದರಲ್ಲಿ ಅತಿಯಾದ, ಭಯಾನಕ ಹಿಂಸಾಚಾರವಿದೆ. ಇದು ಸಂಪೂರ್ಣವಾಗಿ ಮಿತಿಮೀರಿದೆ. ಇಷ್ಟೊಂದು ಹಿಂಸಾಚಾರ, ರಕ್ತಪಾತ, ಅರಾಜಕತೆ, ಕ್ರೌರ್ಯ ಮತ್ತು ಭಾರತೀಯ ಚಿತ್ರರಂಗದಲ್ಲೇ ಕಂಡರಿಯದಷ್ಟು ಭಯಾನಕ ದೃಶ್ಯಗಳನ್ನು ತೋರಿಸುವ ಅಗತ್ಯವೇ ಇರಲಿಲ್ಲ' ಎಂದು ಶಶಿ ತರೂರ್ ವಿಡಿಯೋದಲ್ಲಿ ಹೇಳುತ್ತಾರೆ. ಈ ವಿಡಿಯೋದಲ್ಲಿ ಅವರು ತಮ್ಮ ಸಿಬ್ಬಂದಿಯೊಂದಿಗೆ ಈ ಚಿತ್ರವನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು.
'ಇದರಲ್ಲಿ ಸಾಕಷ್ಟು ಪ್ರಪಗಾಂಡದ ಅಂಶಗಳು ಅಡಗಿವೆ ಎಂಬುದು ಸ್ಪಷ್ಟ. ಪಾಕಿಸ್ತಾನವಷ್ಟೇ ಅಲ್ಲದೆ, ಗಲ್ಫ್ ರಾಷ್ಟ್ರಗಳ ಪೈಕಿ ಹಲವು ದೇಶಗಳಲ್ಲಿಯೂ ಈ ಚಿತ್ರವನ್ನು ನಿಷೇಧಿಸಲಾಗಿದೆ ಎಂದು ನನಗೆ ತಿಳಿದುಬಂದಿದೆ. ಭಾರತೀಯರು ಮತ್ತು ಪಾಕಿಸ್ತಾನಿಯರ ನಡುವೆ ಅನಗತ್ಯವಾಗಿ ದ್ವೇಷ ಅಥವಾ ಕಹಿ ಭಾವನೆಗಳನ್ನು ಉಂಟುಮಾಡಬಹುದು ಎಂಬ ಕಾರಣಕ್ಕೆ ಈ ನಿಷೇಧ ಹೇರಲಾಗಿದೆ; ಹೀಗಾಗಿ, ಅವರ ಆ ಭಾವನೆಗಳನ್ನು ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ' ಎಂದಿದ್ದಾರೆ.
'ಈ ಚಿತ್ರವನ್ನು ನೋಡಿದರೆ ಪಾಕಿಸ್ತಾನದವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ನನಗೆ ಗೊತ್ತಿಲ್ಲ. ಇದರಲ್ಲಿರುವ ಕೆಲವು ವಿಷಯಗಳು ಅಥವಾ ಸಂಭಾಷಣೆಗಳನ್ನು ನೋಡಿ ಪಾಕಿಸ್ತಾನಿಗಳು ನಗಬಹುದು; ಆದರೆ ಇನ್ನು ಕೆಲವು ವಿಷಯಗಳನ್ನು ಗಮನಿಸಿದಾಗ, ತಮ್ಮ ಹೆಸರಿನಲ್ಲಿ ಎಷ್ಟೊಂದು ತಪ್ಪುಗಳು ನಡೆದಿವೆ ಎಂಬುದನ್ನು ಅವರು ಅರಿತುಕೊಳ್ಳಬಹುದು ಎಂದು ನನಗನ್ನಿಸುತ್ತದೆ ಎಂದರು.
ಈ ಚಿತ್ರದ ನಿರೂಪಣಾ ಶೈಲಿಯನ್ನು ಶ್ಲಾಘಿಸಿದ ತರೂರ್, 'ಇದರ ಕಥಾಹಂದರ, ಕಥೆಯ ರಚನೆ, ಕಥೆಯಲ್ಲಿನ ತಿರುವುಗಳು ಹೀಗೆ ಎಲ್ಲವೂ ಅದ್ಭುತವಾಗಿವೆ. ಮೊದಲ ಭಾಗದಲ್ಲಿ ಹಲವು ವಿಷಯಗಳು ಅಪೂರ್ಣವಾಗಿಯೇ ಉಳಿದಿದ್ದರಿಂದ, ಎರಡನೇ ಭಾಗವು ಹೆಚ್ಚು ಮನರಂಜನಾತ್ಮಕವಾಗಿತ್ತು' ಎಂದು ತಿಳಿಸಿದರು.
'ಎರಡೂ ಚಿತ್ರಗಳಲ್ಲಿ ಖಳನಾಯಕರು ಅದ್ಭುತವಾಗಿ ನಟಿಸಿದ್ದಾರೆ. ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಇಬ್ಬರೂ ಅತ್ಯುನ್ನತ ಮಟ್ಟದ ಅಭಿನಯ ನೀಡಿದ್ದಾರೆ; ಅವರು ನಿಜಕ್ಕೂ ಅದ್ಭುತ, ಮನವರಿಕೆಯಾಗುವಂತಹ ಮತ್ತು ಪರಿಣಾಮಕಾರಿ ಖಳನಾಯಕರು' ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
'ಖಂಡಿತವಾಗಿಯೂ, ನಾನು ನಮ್ಮ ಗುಪ್ತಚರ ವಿಭಾಗದ ಅನೇಕ ಅಧಿಕಾರಿಗಳೊಂದಿಗೆ ವ್ಯವಹರಿಸಿದ್ದೇನೆ. ಆದರೆ, ಅದು ಅತ್ಯಂತ ನಾಗರಿಕ ರೀತಿಯಲ್ಲಿತ್ತು; ಅಂದರೆ ವಿಶ್ಲೇಷಣೆಗಳು, ಮಾತುಕತೆಗಳು ಮತ್ತು ಮಾಹಿತಿ ವಿನಿಮಯಗಳಷ್ಟೇ ಹೊರತು, ಎಂದಿಗೂ ಯಾವುದೇ ರೀತಿಯ ರಹಸ್ಯ ಕಾರ್ಯಾಚರಣೆಗಳಲ್ಲಿ (cloak-and-dagger stuff) ನಾನು ತೊಡಗಿಸಿಕೊಂಡಿಲ್ಲ. ದೂರದ ರಾಜಧಾನಿಗಳಲ್ಲಿ ಸ್ಫೋಟಗಳನ್ನು ಉಂಟುಮಾಡುವಂತಹ ಆದೇಶಗಳನ್ನು ನೀಡುವುದರ ಬಗ್ಗೆಯೂ ನನಗೆ ತಿಳಿದಿಲ್ಲ; ನಾನು ಬದುಕಿರುವ ಜಗತ್ತು ಅಂತಹದ್ದಲ್ಲ. ದೇಶಕ್ಕೆ ಸೇವೆ ಸಲ್ಲಿಸಲು 'ಧುರಂಧರ್' ಶೈಲಿಯು ಒಂದೇ ಮಾರ್ಗ ಎಂದು ತಾನು ಭಾವಿಸುವುದಿಲ್ಲ' ಎಂದು ತರೂರ್ ಹೇಳಿದರು.
'ನೀವು ಒಬ್ಬ 'ಧುರಂಧರ್' ಆಗಿರಬೇಕೆಂದೇನಿಲ್ಲ; ನೀವು ಬೇರೆ ಅನೇಕ ವಿಧಗಳಲ್ಲಿ ದೇಶಸೇವೆ ಮಾಡಬಹುದು. ಹಾಗೆ ಮಾಡಲು ಇರುವ ಇತರ ಮಾರ್ಗಗಳನ್ನು ತೋರಿಸಿಕೊಡುವಂತಹ ಅನೇಕ ಸ್ಫೂರ್ತಿದಾಯಕ ಚಲನಚಿತ್ರಗಳೂ ಇವೆ' ಎಂದು ಅವರು ತಿಳಿಸಿದರು.
ಅಜಯ್ ಸನ್ಯಾಲ್ ಎಂಬ ಪಾತ್ರವು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಆಧರಿಸಿದೆ ಎಂದು ಉಲ್ಲೇಖಿಸುವ ಶರೂರ್, ದೋವಲ್ ಅವರು 1998ರಿಂದ (ಅಥವಾ ಚಿತ್ರದಲ್ಲಿ ತೋರಿಸಲಾದ ಸಮಯದಿಂದ) ಇಂದಿನವರೆಗೂ ಸತತವಾಗಿ ಆ ಹುದ್ದೆಯಲ್ಲಿರಲು ಸಾಧ್ಯವಿಲ್ಲ; ಏಕೆಂದರೆ ಸರ್ಕಾರಿ ಆಡಳಿತ ವ್ಯವಸ್ಥೆಗಳು (ಬ್ಯೂರೋಕ್ರಸಿ) ಆ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ, ಈ ಅವಧಿಯಲ್ಲಿ ಬೇರೆ ಬೇರೆ ಸಮಯಗಳಲ್ಲಿ ನಮ್ಮ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯ ಉಸ್ತುವಾರಿಯಲ್ಲಿ ಬೇರೆ ಬೇರೆ ವ್ಯಕ್ತಿಗಳೇ ಇದ್ದಿರಬಹುದು ಎಂದು ಅವರು ಹೇಳಿದರು.
'ಆದರೆ, ಒಂದು ಕಾಲ್ಪನಿಕ ಚಿತ್ರಕ್ಕಾಗಿ, ಪ್ರೇಕ್ಷಕರಿಗೆ ಸುಲಭವಾಗಿ ಗುರುತಿಸಬಲ್ಲಂತಹ ಮತ್ತು ಇಡೀ ಚಿತ್ರದುದ್ದಕ್ಕೂ ಸಾಗುತ್ತಾ, ಅಂತಹ ಆಲೋಚನಾ ಧೋರಣೆಯ ಕೇಂದ್ರಬಿಂದುವಾಗಬಲ್ಲ ಪಾತ್ರವೊಂದನ್ನು ಸೃಷ್ಟಿಸಿ, ಆ ಪಾತ್ರ ನಿರ್ವಹಿಸಲು ಅವಕಾಶ ನೀಡಲಾಗುತ್ತದೆ. ಇದು ವಾಸ್ತವವೇ ಎಂದು ಭಾವಿಸುವುದು ಅತಿಶಯೋಕ್ತಿಯಾಗುತ್ತದೆ; ಆದ್ದರಿಂದ, ಇದೊಂದು ಕಥೆಯನ್ನು ಹೇಳುವ ಕಾಲ್ಪನಿಕ ಚಿತ್ರ ಎಂದು ನಾನು ಭಾವಿಸುತ್ತೇನೆ. ಸಹಜವಾಗಿಯೇ, ಇಂತಹ ಚಿತ್ರಗಳು ಒಂದಿಷ್ಟು ಪಾಠಗಳನ್ನು ಕಲಿಸುವ ಉದ್ದೇಶವನ್ನೂ ಹೊಂದಿರುತ್ತವೆ' ಎಂದೂ ಅವರು ಹೇಳಿದರು.
'ಇದೊಂದು ಅತ್ಯಂತ ಎದ್ದುಕಾಣುವ ರೀತಿಯಲ್ಲಿ ರೂಪಿಸಲಾದ ಚಿತ್ರ. ಕಲ್ಪನಾಶಕ್ತಿ ಅಥವಾ ಆಲೋಚನಾ ಸಾಮರ್ಥ್ಯವಿರುವ ಯಾರ ಮೇಲಾದರೂ ಇದು ಖಂಡಿತವಾಗಿಯೂ ಪ್ರಭಾವ ಬೀರುತ್ತದೆ. ಹಾಗಾಗಿ, ನೀವೆಲ್ಲರೂ ಈ ಚಿತ್ರವನ್ನು ನೋಡಿದಾಗ ಅದರ ಪ್ರಭಾವವನ್ನು ಖಂಡಿತವಾಗಿಯೂ ಅನುಭವಿಸಿರುತ್ತೀರಿ ಎಂದು ನನಗೆ ಖಾತ್ರಿಯಿದೆ, ಅಲ್ಲವೇ?' ಎಂದು ಪ್ರಶ್ನಿಸಿದರು.
ಈ ಚಿತ್ರದ ಕಥೆಯ ಸಂಯೋಜನೆ, ಕಥೆಯಲ್ಲಿನ ಅನಿರೀಕ್ಷಿತ ತಿರುವುಗಳು, ಕಥೆ ಅನಾವರಣಗೊಂಡ ರೀತಿ ಹಾಗೂ ಎಲ್ಲ ಪಾತ್ರದಿಂದಲೂ ಮೂಡಿಬಂದ ಅತ್ಯುತ್ತಮ ಅಭಿನಯವನ್ನು ತಾವು ಆಸ್ವಾದಿಸಿದ್ದಾಗಿ ತರೂರ್ ತಿಳಿಸುತ್ತಾರೆ.
'ಅತ್ಯುತ್ತಮ ಸೆಟ್ಗಳು, ವಿನ್ಯಾಸ, ನಿರ್ದೇಶನ - ಹೀಗೆ ಎಲ್ಲವೂ ಬಹಳ ಮನವರಿಕೆಯಾಗುವಂತಿದ್ದವು; ಎಲ್ಲದಕ್ಕೂ ಅತ್ಯುನ್ನತ ಅಂಕಗಳು, ಅಂದರೆ 'ಎ+' ನೀಡಬಹುದು. ಒಟ್ಟಾರೆ 4 ಗಂಟೆಗಳ - ಬಹುಶಃ ಒಟ್ಟು 8 ಗಂಟೆಗಳಿರಬಹುದು - ಈ ಕಥಾನಕದ ಕೊನೆಯಲ್ಲಿ, ನೀವು ಒಂದು ಬೃಹತ್ ಚಿತ್ರ ಅನುಭವವನ್ನು ಪಡೆದಿದ್ದೀರಿ ಎಂಬ ಭಾವನೆ ಖಂಡಿತವಾಗಿಯೂ ಮೂಡುತ್ತದೆ' ಎಂದರು.
ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಮತ್ತು 'ಧುರಂಧರ್: ದಿ ರಿವೆಂಜ್' ಚಿತ್ರಗಳಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್, ಅಕ್ಷಯ್ ಖನ್ನಾ, ಸಂಜಯ್ ದತ್, ಅರ್ಜುನ್ ರಾಂಪಾಲ್ ಮತ್ತು ಆರ್. ಮಾಧವನ್ ನಟಿಸಿದ್ದಾರೆ.