ರಾಮಾಯಣ ಚಿತ್ರದಲ್ಲಿ ರಾಮನಾಗಿ ನಟ ರಣಬೀರ್ ಕಪೂರ್ 
ಬಾಲಿವುಡ್

'ರಾಮಾಯಣ'ದಲ್ಲಿ ರಾಮನ ಪಾತ್ರ ನಿರ್ವಹಿಸುವುದು ನನಗೆ ಉತ್ತಮ ಮನುಷ್ಯನಾಗಲು ಅವಕಾಶ ನೀಡಿತು: ರಣಬೀರ್ ಕಪೂರ್

ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟ ಯಶ್, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್, ಶೂರ್ಪನಖಿಯ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಹಾಗೂ ಇತರರು ನಟಿಸಿದ್ದಾರೆ.

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ರವಿ ದುಬೆ, ತಮ್ಮ ಮುಂಬರುವ 'ರಾಮಾಯಣ' ಚಲನಚಿತ್ರದ ಪ್ರಚಾರಕ್ಕಾಗಿ 'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ, ಶ್ರೀರಾಮ, ಸೀತಾ ಮಾತೆ ಮತ್ತು ಲಕ್ಷ್ಮಣ ಪಾತ್ರಗಳಲ್ಲಿ ನಟಿಸಲು ಅವಕಾಶ ಬಂದಾಗ ಅವರಲ್ಲಿ ಮೊದಲು ಮೂಡಿದ ಭಾವನೆ ಏನು ಎಂದು ಅಮಿತಾಭ್ ಬಚ್ಚನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಣಬೀರ್, ತಮಗೆ ಮೊದಲು ಭಯ ಉಂಟಾಯಿತು; ಆದರೆ, ಆ ಭಾವನೆಯು ಶೀಘ್ರದಲ್ಲೇ ಕೃತಜ್ಞತೆಯಾಗಿ ಬದಲಾಯಿತು ಎಂದು ತಿಳಿಸಿದರು.

'ಕೌನ್ ಬನೇಗಾ ಕರೋಡ್‌ಪತಿ' ಕಾರ್ಯಕ್ರಮದ ತಂಡ ಈ ಸಂಚಿಕೆಯ ಹೊಸ ಪ್ರಮೋಷನಲ್ ತುಣುಕೊಂದನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಪಾತ್ರದ ಕುರಿತು ಮಾತನಾಡುತ್ತಾ ರಣಬೀರ್, 'ಈ ಪಾತ್ರವನ್ನು ನನಗೆ ನೀಡಿದಾಗ, ಇದೊಂದು ಸಾಮಾನ್ಯ ಪಾತ್ರವಲ್ಲ, ಬದಲಾಗಿ ದೊಡ್ಡ ಜವಾಬ್ದಾರಿ ಎಂಬುದು ನನಗೆ ಅರಿವಾಯಿತು. ಮೊದಲಿಗೆ ನನ್ನ ಮನಸ್ಸಿನಲ್ಲಿ ಭಯ ಮೂಡಿತು; ಈ ಪಾತ್ರವನ್ನು ನಿರ್ವಹಿಸಲು ನಾನು ಅರ್ಹನೇ? ನನ್ನಿಂದ ಈ ಪಾತ್ರವನ್ನು ನಿಭಾಯಿಸಲು ಸಾಧ್ಯವೇ? ಎಂದು ಯೋಚಿಸಿದೆ. ಏಕೆಂದರೆ, ಕೋಟ್ಯಂತರ ಜನರ ನಂಬಿಕೆಯು ಭಗವಾನ್ ಶ್ರೀರಾಮನೊಂದಿಗೆ ಬೆಸೆದುಕೊಂಡಿದೆ. ಆದರೆ, ಕೆಲವೇ ಕ್ಷಣಗಳಲ್ಲಿ ಈ ಭಯವು ಕೃತಜ್ಞತೆಯ ಭಾವನೆಯಾಗಿ ಬದಲಾಯಿತು' ಎಂದರು.

ತಾನು ತಂದೆಯಾದ ಸಮಯದಲ್ಲೇ ಈ ಪಾತ್ರ ತನಗೆ ಸಿಕ್ಕಿದ್ದರಿಂದ, ಈ ಅವಕಾಶವು ಇನ್ನಷ್ಟು ವಿಶೇಷವೆನಿಸಿತು. 'ನನ್ನ ಜೀವನದ ಈ ಹಂತದಲ್ಲಿ ನನಗೆ ಇಂತಹ ಅವಕಾಶ ಸಿಕ್ಕಿದ್ದಕ್ಕಾಗಿ ಮತ್ತು ಒಬ್ಬ ಉತ್ತಮ ಮನುಷ್ಯನಾಗುವ ದಾರಿ ಸಿಕ್ಕಿದ್ದಕ್ಕಾಗಿ ನನಗೆ ಕೃತಜ್ಞತಾ ಭಾವ ಮೂಡಿತು. ಇದೇ ಸಮಯದಲ್ಲಿ ನಾನು ತಂದೆಯಾದೆ. ಒಬ್ಬ ಉತ್ತಮ ಮನುಷ್ಯನಾಗಲು, ರಾಮಾಯಣವನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಇಂತಹ ಅದ್ಭುತ ವ್ಯಕ್ತಿಗಳೊಂದಿಗೆ ಕೆಲಸ ಮಾಡಲು ನನಗೆ ಸಿಕ್ಕಿರುವ ಈ ಅವಕಾಶವು, ದೇವರೇ ನೀಡಿದ ವರ ಎಂದು ನಾನು ನಂಬುತ್ತೇನೆ. ಶ್ರೀರಾಮನಂತೆಯೇ ಆಗುವುದು ಅಸಾಧ್ಯವಿರಬಹುದು, ಆದರೆ ಅವರಿಂದ ಏನನ್ನಾದರೂ ಕಲಿಯುವುದು ನಮ್ಮೆಲ್ಲರಿಗೂ ಬಹಳ ದೊಡ್ಡ ವಿಷಯವಾಗಿದೆ' ಎಂದರು.

ಈ ಕಾರ್ಯಕ್ರಮದ ವೇಳೆ, ಸೀತಾ ಮಾತೆಯ ಪಾತ್ರವನ್ನು ನಿರ್ವಹಿಸುವ ಕುರಿತು ಸಾಯಿ ಪಲ್ಲವಿ, 'ಈ ಬಾರಿ ನಾನು ಹೆಚ್ಚು ತರ್ಕಬದ್ಧವಾಗಿ ಯೋಚಿಸಲು ಬಯಸಲಿಲ್ಲ. ಸಾಮಾನ್ಯವಾಗಿ ನಾನು ಯಾವುದೇ ಪಾತ್ರವನ್ನು ನಿರ್ವಹಿಸುವಾಗ, ಆ ಪಾತ್ರಕ್ಕೆ ನಾನೇನು ನೀಡಬಲ್ಲೆ ಎಂದು ಯೋಚಿಸುತ್ತೇನೆ. ಆದರೆ, ಸೀತಾ ಮಾತೆಯಂತಹ ಪಾತ್ರವನ್ನು ನಿರ್ವಹಿಸುವಾಗ, 'ಈ ಪಾತ್ರವನ್ನು ನಿರ್ವಹಿಸುವುದರಿಂದ ನನಗೇನು ಸಿಗಬಹುದು? ಇದರಿಂದ ನಾನೇನು ಜ್ಞಾನವನ್ನು ಪಡೆದುಕೊಳ್ಳಬಹುದು?' ಎಂದು ಯೋಚಿಸಿದ್ದು ಇದೇ ಮೊದಲು. ಹಾಗಾಗಿ, ಈ ಪ್ರಕ್ರಿಯೆಯನ್ನು ನಾನು ಸರಳವಾಗಿ ಮತ್ತು ಮುಕ್ತವಾಗಿ ಇರಿಸಿಕೊಳ್ಳಲು ಬಯಸಿದೆ. ಈ ಬಗ್ಗೆ ನಾನು ಹೆಚ್ಚೇನೂ ತಲೆಕೆಡಿಸಿಕೊಳ್ಳಲು ಇಷ್ಟಪಡಲಿಲ್ಲ. ನಾನು ಸೀತಾ ಮಾತೆಗೆ ಪ್ರಾರ್ಥನೆ ಸಲ್ಲಿಸಿ, ಮುಂದುವರಿದೆ' ಎಂದರು.

ರಣಬೀರ್, ಸಾಯಿ ಪಲ್ಲವಿ ಮತ್ತು ರವಿ ದುಬೆ ಅವರಲ್ಲದೆ, ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ನಟ ಯಶ್, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್, ಶೂರ್ಪನಖಿಯ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಹಾಗೂ ಇತರರು ನಟಿಸಿದ್ದಾರೆ. ಹಿಂದೂ ಮಹಾಕಾವ್ಯವನ್ನಾಧರಿಸಿದ ಈ ಚಿತ್ರವು ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಮೊದಲ ಭಾಗವು 2026ರ ನವೆಂಬರ್ 5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಹ್ಯಾನ್ಸ್ ಝಿಮ್ಮರ್ ಮತ್ತು ಎಆರ್ ರೆಹಮಾನ್ ಅವರು ಸಂಗೀತ ಸಂಯೋಜಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2018ರ ಮಾನನಷ್ಟ ಮೊಕದ್ದಮೆ ವಜಾಗೊಳಿಸಿದ ಸುಲ್ತಾನ್‌ಪುರ ಕೋರ್ಟ್..!

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ: ಆ್ಯಂಬುಲೆನ್ಸ್ ಸೇರಿ ಹಲವರು ವಾಹನಗಳಿಗೆ ಡಿಕ್ಕಿ; ಕೂದಲೆಳೆ ಅಂತರದಲ್ಲಿ ವಿಪಕ್ಷ ನಾಯಕ ಪಾರು, ಹಲವರಿಗೆ ಗಾಯ..!

ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ: ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು!

ಬ್ರೆಜಿಲ್ ನಲ್ಲಿ ಟ್ರಂಪ್ ವಿರೋಧಿ ಲೂಯಿಜ್ ಇನಾಸಿಯೊ ಲುಲಾಗೆ ಮತ್ತೆ ಅಧಿಕಾರ; ನಾಲ್ಕನೇ ಬಾರಿಗೆ ಅಧ್ಯಕ್ಷ ಸ್ಥಾನ

ಭಾರತ 'ತೈಲ ಶುದ್ಧೀಕರಣದ ಸೂಪರ್ ಪವರ್' ರಾಷ್ಟ್ರವೆಂದು ಜಗತ್ತಿನ ಇತರ ರಾಷ್ಟ್ರಗಳಿಗೆ ಗೊತ್ತಾದದ್ದು ಹೇಗೆ?