ದುಂಡು ಮುಖ, ಮಲ್ಲಿಗೆಯ ನಗು, ಮಾತಿನ ಮಲ್ಲಿ. 'ಕ್ಯಾರೆ ಬುಲ್ ಬುಲ್' ಎಂದರೆ ಹಿಂದಿರುಗಿ ನಗೆ ಬೀರುವ ಜಾಣೆ. ಬಿಗ್ ಸ್ಕ್ರೀನ್ನಲ್ಲಿ ಸ್ಟಾರ್ ನಟಿಯಾಗುವ ಹಾದಿಯಲ್ಲಿರುವ ಸ್ಮಾಲ್ ಸ್ಕ್ರೀನ್ ಹುಡುಗಿ. ಕಿರುತೆರೆ ಬಣ್ಣದ ಮೋಹ ಹುಟ್ಟಿಸಿತು. ಯಾವ ಗಳಿಗೆಯಲ್ಲಿ ಅದೃಷ್ಟ ಕುಲಾಯಿಸಿತೋ ಗೊತ್ತಿಲ್ಲ, ಈಕೆ ಗಾಂಧಿನಗರದಲ್ಲಿ 'ಬುಲ್ ಬುಲ್' ರಾಣಿಯಾದಳು. ನಟ ದರ್ಶನ್ ಜೊತೆ ಹೆಜ್ಜೆ ಹಾಕಿದಳು. ರಚಿತಾ ರಾಮ್ ಎನ್ನುವ ಈ ಸುಂದರಿಗೆ ಮನಸೋಲದವರು ಕಡಿಮೆ. ಮೊದಲ ಚಿತ್ರವೇ ಅರ್ಧ ಶತಕ ಪೂರೈಸಿದ್ದು ಮಾತ್ರವಲ್ಲ, ದರ್ಶನ್ನಂಥ ಸ್ಟಾರ್ ನಟನ ಜೊತೆಗೆ ಕಾಣಿಸಿಕೊಂಡಿದ್ದರಿಂದ ಗಾಂಧಿನಗರದಲ್ಲಿ ಈಕೆಯ ಕಾಲ್ಶೀಟ್ ಟಿಆರ್ಪಿ ಕೊಂಚ ಹೆಚ್ಚಾಗಿದೆ ಎನ್ನುವ ಮಾತುಗಳಿವೆ. ಈಗ ಉದಯೋನ್ಮುಖ ನಟಿಯಾದರೂ ಮುಂದೆ ನಂ.1 ಖಾತೆ ತೆಗೆಯುವ ಎಲ್ಲ ಲಕ್ಷಣಗಳೂ ರಚಿತಾ ರಾಮ್ ಅವರಲ್ಲಿದೆ ಎನ್ನುತ್ತವೆ ಚಿತ್ರಗುಪ್ತಚರ ವರದಿಗಳು. 'ನನಗೆ ಪಾತ್ರ, ಕತೆ ಮುಖ್ಯ' ಎನ್ನುವ ಈ ಅರಳು ಮಲ್ಲಿಗೆ ಈಗ ಗೋಲ್ಡನ್ ಸ್ಟಾರ್ ಜೊತೆಗೆ 'ದಿಲ್ ರಂಗೀಲಾ'. ಇದರ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ರ ಕ್ಯಾಪ್ಗೆ ಹಾರಲಿದ್ದಾಳೆ. ಇಲ್ಲಿ 'ಅವಳು ಆವರಿಸಿದಾಗ' ಎನ್ನುವ ಚಿತ್ರಕ್ಕೆ ಕ್ರೇಜಿಸ್ಟಾರ್ ಪುತ್ರ ನಾಯಕ. ಅವರಿಗೆ ರಚಿತಾ ರಾಮ್ ನಾಯಕಿ. ಒಂದು ದೊಡ್ಡ ಗೆಲುವು, ಕೈಯಲ್ಲಿ ಎರಡು ಚಿತ್ರಗಳನ್ನು ಇಟ್ಟುಕೊಂಡಿರುವ ರಚಿತಾಳ ರಂಗಿನ ದುನಿಯಾ ನಿಧಾನವಾಗಿ ಸದ್ದು ಮಾಡುತ್ತಿದೆ.
- ಹರಿ
- ಆರ್. ಕೇಶವಮೂರ್ತಿ