ಪ್ರತಿ ದಿನ ನಮ್ಮ ರಾಜ್ಯಕ್ಕೆ ಬರುವವರು, ಇಲ್ಲಿಂದ ಹೊರ ರಾಜ್ಯಕ್ಕೆ ಹೋಗುವವರು ಸಾವಿರಾರು ಜನ. ಅವರಿಂದ ನಮಗೇನು ಲಾಭವಾಗಿದೆ, ನಮ್ಮಿಂದ ಅವರಿಗೇನು ಅನುಕೂಲವಾಗಿದೆ. ನಮ್ಮ ಪಕ್ಕದಲ್ಲೇ ಇರುವವರ ಬಗ್ಗೆ ವಿಚಾರಿಸದಿದ್ದರೆ ಏನಾಗುತ್ತದೆ? ಎಂಬಿತ್ಯಾದಿ ಅಂಶಗಳಿಂದ ಕೂಡಿದ ಚಿತ್ರ 'ಪಗಡೆ'. ಇದು ಈ ವಾರ ತೆರೆಕಾಣುತ್ತಿದೆ. ನಾಲ್ಕೈದು ಪೌರಾಣಿಕ ಚಿತ್ರಗಳನ್ನು ನಿರ್ದೇಶಿಸಿದ್ದ ಪುರುಷೋತ್ತಮ್ ಈ ಚಿತ್ರ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದಲ್ಲಿ ನಟ ವಿಶ್ವಾಸ್ ಭಾರದ್ವಜ್ ಹಾಗೂ ಗಮ್ಯ ಜೋಡಿಯಾಗಿ ನಟಿಸಿದ್ದಾರೆ. 'ಆಡಿಯೋ ರಿಲೀಸ್ ಆದರೆ ಚಿತ್ರ ಸಮಿಫೈನಲ್ಗೆ ಬಂದಂತೆ. ಅಲ್ಲಿಂದ ನೇರ ಬಿಡುಗಡೆಗೆ. ಅಂದರೆ ಫೈನಲ್ ಹಂತಕ್ಕೆ. ಈಗ ನಾವು ಫೈನಲ್ ಹಂತಕ್ಕೆ ಬಂದಿದ್ದೇವೆ. ಗೆಲುವು ನಿಮ್ಮ ಕೈಯಲ್ಲಿದೆ' ಎಂದು ಥೇಟು ಕ್ರಿಕೆಟ್ ಕಾಮೆಂಟ್ರಿಯಂತೆ ತಮ್ಮ ಚಿತ್ರದ ಬಗ್ಗೆ ಹೇಳಿಕೊಂಡವರು ನಿರ್ದೇಶಕ ಪುರುಷೋತ್ತಮ್. ಸಸ್ಪೆನ್ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಪ್ರೀತಿಯ ಎಳೆ ಇದೆ. ಆದರೆ ಡ್ಯುಯೆಟ್ ಇಲ್ಲ, ನಾಯಕ-ನಾಯಕಿ ಮರ ಸುತ್ತೋಲ್ಲ. ಕಥೆಗೋಸ್ಕರ ಪಾತ್ರಗಳನ್ನು ಸೃಷ್ಟಿಸಲಾಗಿದೆ ಹೊರತು ಪಾತ್ರಗಳಿಗಾಗಿ ಕಥೆ ಹೆಣೆದಿಲ್ಲವಂತೆ.
ಹೆಚ್.ವಿ. ಅಣ್ಣಪ್ಪ ಚಿತ್ರದ ನಿರ್ಮಾಪಕರು. 'ತಾಂತ್ರಿಕ ಕಾರಣಗಳಿಂದ ಬಿಡುಗಡೆ ತಡವಾಯ್ತು. ಚಿತ್ರದಲ್ಲಿ ಕುತೂಹಲಕರವಾದ ಕಥೆ ಇದೆ. ಸಿನಿಮಾ ಪೂರ್ತಿ ನೋಡಿದ ಮೇಲೆ ಚಿತ್ರ ಅರ್ಥವಾಗುತ್ತದೆ' ಎಂದು ಕೊನೆನತಕ ಕೂತು ನೋಡಿ ಎನ್ನುವ ಮನವಿ ಮಾಡಿದರು. ನಾಯಕಿ ಗಮ್ಯಗೆ 3ನೇ ಚಿತ್ರ. 'ನನ್ನ ಹಿಂದಿನ ಚಿತ್ರಗಳಿಗಿಂತ ಇದು ಭಿನ್ನವಾದ ಪಾತ್ರ. ದೇಶಪ್ರೇಮದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಬೇರೆಯವರು ನಮ್ಮಲ್ಲಿಗೆ ಬಂದಾಗ ನಮ್ಮವರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ತೋರಿಸಿದ್ದೇವೆ' ಎಂದರು ಗಮ್ಯ.
ಚಿತ್ರದ ನಾಯಕ ವಿಶ್ವಾಸ್ಗೆ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ವಿಶ್ವಾಸವಿದೆ. ಇವರಿಗೆ ಹಿರಿತೆರೆ ಮೊದಲ ಹೆಜ್ಜೆ ಇದು. 'ಚಿತ್ರದಲ್ಲಿ ನನ್ನ ಪಾತ್ರ ಎಂಥದ್ದೆಂದು ಹೇಳಲಾರೆ. ನೋಡಿದ ಮೇಲೆ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಕಿರುತೆರೆಯಲ್ಲಿ ಜನ ನನ್ನನ್ನು ಮೆಚ್ಚಿದ ಹಾಗೆ ಬೆಳ್ಳಿತೆರೆಯಲ್ಲೂ ಒಪ್ಪಿಕೊಳ್ಳುತ್ತಾರೆಂಬ ನಂಬಿಕೆ ಇದೆ' ಎಂಬುದು ನಾಯಕನ ವಿಶ್ವಾಸದ ಮಾತು. ಧರ್ಮ, ಅಚ್ಯುತ್ ಕುಮಾರ್, ರವಿಶಂಕರ್ ಮತ್ತಿತರು ಅಭಿನಯಿಸಿದ್ದಾರೆ. ಗೌರಿವೆಂಕಟೇಶ್ ಛಾಯಾಗ್ರಹಣ, ಸಾಗರ್ ಭೂಷಣ್ ಸಂಗೀತ ಚಿತ್ರಕ್ಕಿದೆ.