ಇಷ್ಟು ದಿನ ಕೇವಲ ಗಾಳಿ ಸುದ್ದಿಗಳಿಗೆ ಮತ್ತು ಯೂ ಟ್ಯೂಬ್‌ನಲ್ಲಿರುವ ಚಿತ್ರದ ಸಂಭಾಷಣೆಗಳ ಮೂಲಕ ಪೋಲಿಸುದ್ದಿಗಳಿಂದ ಕಾಣಿಸಿಕೊಂಡಿದ್ದ 'ಗಾಲಿ' ಚಿತ್ರತಂಡ ಇತ್ತೀಚೆಗೆ ಮಾಧ್ಯಮಗಳ ಮುಂದೆ ಅಧಿಕೃತವಾಗಿ ಕಾಣಿಸಿಕೊಂಡಿತ್ತು. ಅದು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ನಡೆದ ಈ ಸಮಾರಂಭದಲ್ಲಿ ಗಾಲಿಗೆ ಬೆಂಬಲವಾಗಿ ನಟ ದಿಗಂತ್ ಕೂಡ ಹಾಜರಿದ್ದರು. ಅವರ ಜೊತೆಗೆ ವಾಣಿಜ್ಯ ಮಂಡಳಿಯ ಅಧ್ಯಕ್ಷ ವಿಜಯ್‌ಕುಮಾರ್ ಕೂಡ.
ಚಿತ್ರದ ಆಡಿಯೋ ಬಿಡುಗಡೆಗೆ ಮುನ್ನ ಚಿತ್ರದ ನಿರ್ದೇಶಕರ ಬಗೆಗಿನ ಸಣ್ಣ ಟ್ರೈಲರ್ ಒಂದು ಪ್ರದರ್ಶಿತವಾಗಿದ್ದು ವಿಶೇಷ. ನಮ್ಮ ಚಿತ್ರದಲ್ಲಿ ಒಂದಷ್ಟು ಡಬಲ್‌ಮೀನಿಂಗ್ ಸಂಭಾಷಣೆಗಳಿವೆ ಎಂಬ ಕಾರಣಕ್ಕೆ ನಮ್ಮನ್ನು ಕೀಳಾಗಿ ನೋಡಬೇಡಿ ಎನ್ನುವಂತೆ ನಿರ್ದೇಶಕ ಲಕ್ಕಿ ಒಂದು ಸಿನಿಮಾ ಮಾಡುವ ಮುಂಚಿನ ತಮ್ಮ ಸಂಕಷ್ಟಗಳನ್ನು ಈ ವಿಡಿಯೋ ತುಣುಕಿನಲ್ಲಿ ತೆರೆದಿಟ್ಟರು. ಎಲ್ಲೆಲ್ಲೋ ಕೂತು ಸಿನಿಮಾ ಸಾಹಿತ್ಯ ಬರೆದಿದ್ದು, ಅವಕಾಶ ಕೇಳಿ ಹೋದಾಗ ಅನುಭವಿಸಿದ ಅವಮಾನಗಳು, ಕೊನೆಗೆ ಅವರ ತಾಯಿ ತಾವು ಕೂಡಿಟ್ಟ ಹಣದಿಂದ ಇವರ ಸಿನಿಮಾ ಕನಸು ಶುರುವಾಗಿದ್ದು ಹೀಗೆ ಎಲ್ಲ ವಿವರಗಳೂ ಅಲ್ಲಿದ್ದವು.
ಅದಾದನಂತರ ವೇದಿಕೆಯಲ್ಲಿದ್ದ ನಿರ್ಮಾಪಕರಾದ ಕೆ.ಮಂಜು, ಉಮೇಶ್ ಬಣಕಾರ್, ದಿನೇಶ್ ಗಾಂಧಿ ಮತ್ತಿತರ ಗಣ್ಯರ ಜೊತೆ ಚಿತ್ರದ ಆಡಿಯೋ ಬಿಡುಗಡೆ ಮಾಡಿದ ಕುಮಾರಸ್ವಾಮಿ ಚಿತ್ರತಂಡಕ್ಕೆ ಶುಭಹಾರೈಸಿದರು. ಡಬಲ್‌ಮೀನಿಂಗ್ ಸಂಭಾಷಣೆಗಳು ಕೇವಲ ನಮ್ಮ ಸಿನಿಮಾದ ಒಂದು ಭಾಗ ಅಷ್ಟೇ ಹೊರತು ಅದೇ ಸಿನಿಮಾ ಅಲ್ಲ ಎನ್ನುವ ಲಕ್ಕಿ ನಿರ್ದೇಶನದ ಗಾಲಿ ಚಿತ್ರದ ನಾಯಕ ನಾಯಕಿ ಜೀವನ್ ಮತ್ತು ರೂಪಾ ನಟರಾಜ್.
ೈಈ ಹಿಂದೆ ಬಿಸಿಲೇ ಎನ್ನುವ ಚಿತ್ರಕ್ಕೆ ಅತಿ ಸದಭಿರುಚಿಯ ಸಂಭಾಷಣೆ ಬರೆದಿದ್ದೆ ಎನ್ನುವ ಲಕ್ಕಿ ಅಂಥ ಪ್ರಯತ್ನವನ್ನು ಯಾರೂ ನೋಡದೇ ಇದ್ದುದರಿಂದ ಹತಾಶರಾಗಿ ಇಂಥ ಸಾಹಿತ್ಯದ ಮೊರೆಹೋಗಿದ್ದೇನೆ ಎಂಬ ಹಿಂಟ್ ನೀಡಿದರು. ಇನ್ನು ತಮ್ಮ ನಾಯಕತ್ವದ ಮೊದಲ ಚಿತ್ರ ತಮಗೆ ಜೀವನ ಕೊಡುತ್ತದೆ ಎಂಬ ನಂಬಿಕೆ ಚಿತ್ರದ ನಾಯಕ ಜೀವನ್ ಅವರದ್ದು.
ಅವರೂ ಕೂಡ ಗಾಲಿ ಚಿತ್ರದ ಬಗ್ಗೆ ಮಾತನಾಡುತ್ತ ತಮ್ಮ ಚಿತ್ರದಲ್ಲಿ ಪ್ರೀತಿ, ಪ್ರೇಮ, ಯುವಕನೊಬ್ಬನ ಸಾಧನೆಯ ಹಾದಿ ಎಲ್ಲವೂ ಇವೆ. ಅದರ ಜೊತೆಗೆ ಒಂದಿಷ್ಟು ತುಂಟ ಸಂಭಾಷಣೆಗಳಿವೆ ಎಂಬ ವಿವರ ಕೊಡುತ್ತಾರೆ. ಡೇನಿಯಲ್ ಮತ್ತು ಸ್ಪರ್ಶ್ ಸಂಗೀತ ನಿರ್ದೇಶನದ ಗಾಲಿ ಚಿತ್ರದ ಹಾಡುಗಳು ಚಿತ್ರಕ್ಕೆ ಈಗಾಗಲೇ ಸಿಗುತ್ತಿರುವ ಪ್ರತಿಕ್ರಿಯೆನ್ನು ಇಮ್ಮಡಿಗೊಳಿಸುತ್ತವೆ ಎಂಬ ನಂಬಿಕೆ ಚಿತ್ರತಂಡದ್ದು.