ಜೀ ಕನ್ನಡ ವಾಹಿನಿ ವಿಭಿನ್ನ ಶೈಲಿಯ ಪತಿ ಪತ್ನಿಯರಿಗೆ, ಅತ್ತೆ, ಸೊಸೆಯಂದಿರಿಗೆ, ಹಿರಿಯರಿಗೆ, ಕಿರಿಯರಿಗೆ ಹೀಗೆ ಎಲ್ಲಾ ವರ್ಗದ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೇರೆ ಬೇರೆ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸುವುದರಲ್ಲಿ ಮುಂದು. ಈಗ ಮಕ್ಕಳ ಹಾಗೂ ಪೋಷಕರ ನಡುವಿನ ಬಾಂಧವ್ಯವನ್ನು ಓರೆಗೆ ಹಚ್ಚುವ ಪ್ರಯತ್ನಕ್ಕೆ ಜೀ ಕೈಹಾಕಿದೆ. ಛೋಟಾ ಚಾಂಪಿಯನ್ ಹೆಸರಿನ ಈ ಷೋನಲ್ಲಿ ತಮ್ಮ ಮಕ್ಕಳ ಮನಸ್ಸನ್ನು ಪೋಷಕರು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿರುತ್ತಾರೆ. ಆ ಮಕ್ಕಳು ಅದೆಷ್ಟು ಚುರುಕಾಗಿರುತ್ತಾರೆ ಎಂಬುದನ್ನು ಮನರಂಜನಾತ್ಮಕವಾಗಿ ನಿರೂಪಿಸುವ ಜವಾಬ್ದಾರಿಯನ್ನು ನಟ ಸೃಜನ್ ಲೋಕೇಶ್ ಅವರಿಗೆ ವಹಿಸಿಕೊಡಲಾಗಿದೆ. ಹಾಗಾಗಿ ವೀಕ್ಷಕರು ಜೀ ಹುಜೂರ್ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ ಎನ್ನುತ್ತಿದೆ ಜೀ ಟಿವಿ.
ಮೊನ್ನೆ ನಡೆದ ಪತ್ರಿಕಾಗೋಷ್ಟಿಯಲ್ಲಿ ಸೃಜನ್ ಈ ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ಕೇವಲ 2 ರಿಂದ ಮೂರೂವರೆ ವರ್ಷದೊಳಗಿನ ಮಕ್ಕಳು ಮಾತ್ರ ಈ ಷೋನಲ್ಲಿ ಭಾಗವಹಿಸಲಿದ್ದು, ಬರುವ 14 ರಿಂದ ಪ್ರತಿ ಶನಿವಾರ ಮತ್ತು ಭಾನುವಾರಗಳಂದು ರಾತ್ರಿ 9 ಘಂಟೆಗೆ ಈ ಶೋ ಪ್ರಸಾರಗೊಳ್ಳಲಿದೆ. 3 ತಿಂಗಳ ಅವಧಿಯಲ್ಲಿ ಪ್ರದರ್ಶನಗೊಳ್ಳಲಿರುವ ಈ ಶೋಗೆ ನಡೆಸಿದ ಆಡಿಷನ್‌ನಲ್ಲಿ ರಾಜ್ಯಾದ್ಯಂತ ಸುಮಾರು 150 ಕ್ಕೂ ಹೆಚ್ಚು ಮಕ್ಕಳು ಬಂದಿದ್ದರಂತೆ. ಅದರಲ್ಲಿ ಚುರುಕಾದ 30 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇದೇ 7 ರಿಂದ ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದ್ದು ಮಕ್ಕಳಿಗಾಗಿ ಪ್ಲೇಹೋಂ ವಾತಾವರಣವನ್ನು ಸೃಷ್ಟಿಸಲಾಗಿದೆ. ಒಟ್ಟು 3 ಹಂತಗಳಲ್ಲಿ ಈ ಟೆಸ್ಟ್ ಶೋ ನಡೆಯಲಿದ್ದು ಮೊದಲು ಹಾಗೂ ಎರಡನೇ ಹಂತಗಳಲ್ಲಿ ಐವರು ಪೋಷಕರು ಹಾಗು ಅವರ ಮಕ್ಕಳನ್ನು ಬಿಡಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ವಿದ್ಯಾರ್ಥಿ ವೇತನ ಮತ್ತು ಫಿಕ್ಸೆಡ್ ಡಿಪಾಸಿಟ್ ಇಡುವುದರ ಮೂಲಕ ಮಕ್ಕಳಿಗೆ ಅನುಕೂಲಕರವಾದ ಯೋಜನೆಗಳನ್ನು ಜೀವಾಹಿನಿ ಹಮ್ಮಿಕೊಂಡಿದೆ. ಕಿರುತೆರೆ ಇತಿಹಾಸದಲ್ಲೇ 3 ವರ್ಷದೊಳಗಿನ ಮಕ್ಕಳಿಗಾಗಿ ನಡೆಸುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ ಎಂಬುದು ಮಕ್ಕಳ ತೊದಲ ಮಾತು, ಅಚ್ಚರಿಗೊಳಿಸುವ ಪ್ರತಿಭೆಯನ್ನು ವೀಕ್ಷಕರಿಗೆ ಪರಿಚಯಿಸಲು ನಾನು ಕೂಡ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದೇನೆ ಎನ್ನುವ ಸೃಜನ್ ಅವರ ಮಾತು.