ಅಂತೂ ಇತರ ಬ್ಯಾನರ್ಗಳ ಚಿತ್ರಗಳನ್ನೆಲ್ಲಾ ಮುಗಿಸಿಕೊಟ್ಟು ನಟ ಉಪೇಂದ್ರ ಮತ್ತೆ ನಿರ್ದೇಶಕರಾಗುವತ್ತ ಗಮನ ಕೊಡುತ್ತಿದ್ದಾರೆ. ಇನ್ನು ಆರು ತಿಂಗಳು ನಾನು ನಿಮ್ ಗಂಡ ಅಲ್ಲ ಅಂದ್ಕೊಳಿ ಅಂತ ಪತ್ನಿ ಪ್ರಿಯಾಂಕಾಗೆ ಹೇಳಿದ್ದಾಗಿದೆ. ಅದರರ್ಥ ಇನ್ನಾರು ತಿಂಗಳು ನಾನು ನಿರ್ದೇಶನದಲ್ಲಿ ಬ್ಯುಸಿಯಾಗಿರುತ್ತೇನೆ. ನೀವು ನಿಮ್ಮ ಸಹಕಾರದ ಮೂಲಕ ಈ ನಿರ್ದೇಶಕನಿಗೆ ಜೊತೆಯಾಗಿರಿ ಎಂಬರ್ಥದಲ್ಲಿ.
ಉಪೇಂದ್ರ ಚಿತ್ರ ನೋಡಿದಾಗಲೇ ಇದು ಮಾಮೂಲಿ ಸಿನಿಮಾ ಅಲ್ಲ. ಸಾಮಾನ್ಯ ನಿರ್ದೇಶಕರು ಇಂಥ ಸಿನಿಮಾ ಮಾಡಲು ಸಾಧ್ಯವಿಲ್ಲ ಎನಿಸಿತ್ತು ಎನ್ನುವ ಪತ್ನಿ ಪ್ರಿಯಾಂಕಾ ಈಗ ತಮ್ಮ ಪತಿ ಉಪ್ಪಿ 2 ಚಿತ್ರದ ಮೂಲಕ ಇನ್ನೂ ದೊಡ್ಡ ಹೆಸರು ಮಾಡುತ್ತಾರೆ ಎಂಬ ನಂಬಿಕೆಯೊಂದಿಗೆ ಉಪೇಂದ್ರರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದಾರಂತೆ.
ಈ ಮೊದಲೇ ಉಪ್ಪಿ 2 ಚಿತ್ರದ ಘೋಷಣೆ ಮಾಡಿದ್ದರೂ ಅದಕ್ಕೆ ನಿಜವಾಗಿಯೂ ಚಾಲನೆ ದೊರೆಯುವುದು ಯಾವಾಗ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಉಪ್ಪಿ 2 ಶುರುವಾಗಿದೆ. ಮೊನ್ನೆ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಮನೆ ಕಮ್ ಸ್ಟುಡಿಯೋದಲ್ಲಿ ಉಪ್ಪಿ 2 ಹಾಡುಗಳ ಮೂಲಕ ಆರಂಗೇಟ್ರಂ ಮಾಡಿದೆ. ಎ, ಉಪೇಂದ್ರ ಚಿತ್ರಗಳಲ್ಲಿ ಈಗಾಗಲೇ ಉಪ್ಪಿ ಗುರುಕಿರಣ್ ಜೋಡಿ ಯಶಸ್ಸು ಕಂಡಿದೆ. ಈಗ ಅದೇ ದೊಡ್ಡ ಮಟ್ಟದ ಯಶಸ್ಸಿಗೆ ಈ ಜೋಡಿ ಮತ್ತೊಮ್ಮೆ ತಯಾರಾಗಿದೆ. ಕುಟುಂಬ ಸಮೇತರಾಗಿ ಮೊನ್ನೆ ಗುರುಕಿರಣ್ ಸ್ಟುಡಿಯೋದಲ್ಲಿ ಹಾಜರಿದ್ದ ಉಪ್ಪಿ 'ಉಪ್ಪಿ 2' ಚಿತ್ರಕ್ಕೆ ಕಿಕ್ ಸ್ಟಾರ್ಟ್ ನೀಡಿದರು. ಅಂದಹಾಗೆ ಈ ಉಪ್ಪಿ 2 ಚಿತ್ರಕ್ಕೆ ಉಪ್ಪಿ ್ಡಟ್ಞಿಟ್ಟಿಢಿಟ್ಡಿ ಎಂಬ ಸೀಲ್ ಕೂಡ ಇದೆ. ಈ ಚಿತ್ರಕ್ಕೂ ಸೂಪರ್ ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಅಶೋಕ್ ಕಶ್ಯಪ್ ಕ್ಯಾಮರಾ ಹಿಡಿಯಲಿದ್ದಾರೆ. ಏಪ್ರಿಲ್ 15ರಿಂದ ಜುಲೈ ಅಂತ್ಯದವರೆಗೆ ಸತತ ಚಿತ್ರೀಕರಣ ನಡೆಯಲಿದೆ. ಉಪೇಂದ್ರ ಅವರ ಜೊತೆಗೆ ಕೆಲಸ ಮಾಡುವಾದ ನನ್ನ ಸಾಮರ್ಥ್ಯ 20 ಪಟ್ಟು ಹೆಚ್ಚಾಗುತ್ತದೆ ಎನ್ನುವ ಗುರುಕಿರಣ್ ಚಿತ್ರಕ್ಕೆ ಆರು ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದಾರೆ.
ಉಪೇಂದ್ರ ಚಿತ್ರಕ್ಕಿಂತ ಸಂಪೂರ್ಣ ಭಿನ್ನವಾದ ಚಿತ್ರ ಕೊಡಬೇಕೆಂದು ನಿರ್ಧರಿಸಿದ್ದೇನೆ ಎಂದ ಉಪ್ಪಿ ಎಂದಿನಂತೆ ಉಪ್ಪಿ 2 ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡಲಿಲ್ಲ.