ವಾದ 1
ಇಂಗ್ಲಿಷಿನ ಹಿಸ್ಟರಿ ವಾಹಿನಿ, ನ್ಯಾಷನಲ್ ಜಿಯೋಗ್ರಫಿ, ಪೋಗೋ ಚಾನಲ್, ಡಿಸ್ಕವರಿ, ಸತ್ಯಮೇವ ಜಯತೆ ಇತ್ಯಾದಿ ಕಿರುತೆರೆ ಕಾರ್ಯಕ್ರಮಗಳು ಸಾಮಾನ್ಯರ ಪಾಲಿಗೆ ದಕ್ಕುತ್ತಿಲ್ಲ. ಅವು ಜ್ಞಾನದ ಕಿಂಡಿಗಳು. ಈ ಕಿಟಕಿಗಳನ್ನು ಮುಚ್ಚಬೇಡಿ.
ಇದು ನಿಜಕ್ಕೂ ಸಿಕ್ಕಾಪಟ್ಟೆ ಕಾಮಿಡಿ ವಾದ ಅನಿಸುತ್ತದೆ. ಹೌದು, ನೀವು ಮಾತನಾಡುತ್ತಿರುವುದು ಡಬ್ ವಿಚಾರವೋ, ಹಿನ್ನೆಲೆ ಧ್ವನಿಯ (ವಾಯ್ಸ್ ಓವರ್) ಬಗ್ಗೆಯೋ? ಹಿಸ್ಟರಿ ವಾಹಿನಿ , ನ್ಯಾಷನಲ್ ಜಿಯೋಗ್ರಫಿ, ಡಿಸ್ಕವರಿ ಹೆಚ್ಚಾಗಿ ವಾಯ್ಸ್ ಓವರ್ ತಂತ್ರವನ್ನು ಆಧರಿಸಿದ್ದು. ಹೀಗಾಗಿ ಅದಕ್ಕೂ ಡಬ್ಗೂ ಸಂಬಂಧವಿದೆಯೇ?. ಇನ್ನು ಪೋಗೋ ಚಾನಲ್ ವಿಚಾರ. ಕಾರ್ಟೂನ್ ನೋಡುವ ಮಕ್ಕಳು ಇದು ಇಂಗ್ಲಿಷು, ಅದು ಕನ್ನಡ ಅಂತ ಗುರುತಿಸುವಷ್ಟು ತಿಳವಳಿಕೆ ಬಂದುಬಿಟ್ಟಿರುತ್ತದೆಯೇ? ನೆಟ್ಟಗೆ ಮಾತನಾಡುಕ್ಕೂ ಬಾರದ ಈ ಕಾರ್ಟೂನ್ ಪ್ರೇಕ್ಷಕ ಮಕ್ಕಳು ಹಾಗೇನಾದ್ರು ಇದು ಫ್ರೆಂಚ್, ಇಟಲಿ, ಇಂಗ್ಲಿಷು, ಕೊರಿಯಾ, ತೆಲುಗು, ತಮಿಳು ಅಂತ ಹೇಳುವುದಾದರೆ ಕೂಡಲೇ ಅವರನ್ನು ಗಿನ್ನೀಸ್ ಬುಕ್ಗೆ ಸೇರಿಸಿಬಿಡಿ! ಕನ್ನಡದಲ್ಲೇ ಸಾಕಷ್ಟು ಕಾರ್ಟೂನ್ ಕಾರ್ಯಕ್ರಮಗಳು ಬರುತ್ತಿವೆ. ಅದರಲ್ಲಿ ಚಿಂಟೂ ವಾಹಿನಿ ಕೂಡ ಒಂದು. ಎಷ್ಟು ಮಂದಿ ಈ ಚಿಂಟೂ ವಾಹಿನಿ ನೋಡುತ್ತಿದ್ದಾರೆ? ನಿಮ್ಮ ಪ್ರಕಾರ ಆರು ಕೋಟಿ ಕನ್ನಡಿಗರ ಮಕ್ಕಳಿಗೆ ಕನ್ನಡದಲ್ಲೇ ಕಾರ್ಟೂನ್ ಬೇಕು ಎನ್ನುವಂತಾಗಿದ್ದರೆ ಚಿಂಟೂ ವಾಹಿನಿ ದೇಶದಲ್ಲಿ ನಂ.1 ಟಿಆರ್ಪಿನಲ್ಲಿರಬೇಕಿತ್ತು.
ಸತ್ಯಮೇಮ ಜಯತೆ ವಿಚಾರಕ್ಕೆ ಬರೋಣ. ಕನ್ನಡದಲ್ಲೂ ಸಾಮಾನ್ಯರ ಬದುಕಿನ ವ್ಯಥೆಯನ್ನು ತೆರೆದಿಡುವ ಕಾರ್ಯಕ್ರಮಗಳು ಬಂದಿವೆ. (ಉದಾ: ದುನಿಯಾ, ನನ್ನ ಕಥೆ, ಕಥೆಯಲ್ಲ ಜೀವನ, ಬಣ್ಣ ಮಾಸಿದ ಬದುಕು) ಎಷ್ಟು ಮಂದಿ ಈ ಕಾರ್ಯಕ್ರಮಗಳನ್ನು ನೋಡಿದ್ದೀರಿ. ಅಮೀರ್ಖಾನ್ ಸತ್ಯಮೇವಕ್ಕೆ ಪ್ರೀತಿ ತೋರಿಸುತ್ತೀರಿ, ಕನ್ನಡದವರ ಬದುಕಿನ ಸತ್ಯ ಕಥೆಗಳನ್ನು ಕೇಳಿದರೆ, ಗಿಮಿಕ್ಕು, ರಿಯಾಲಿಟಿ, ಕೃತಕ ಅಂತ ಮಾತನಾಡುತ್ತೀರಿ.
ವಾದ 2
ಈಗಿನ ಕನ್ನಡ ಚಿತ್ರಗಳಲ್ಲಿ ಯಾವ ಸೃಜನಶೀಲತೆ ಇದೆ? ನಮ್ಮಲ್ಲಿ ಒಂದೇ ಒಂದು ಪ್ರಯೋಗಾತ್ಮಕ ಸಿನಿಮಾ ತೋರಿಸಿ? ಅದೇ ಹಾಲಿವುಡ್, ಬಾಲಿವುಡ್, ಟಾಲಿವುಡ್ ಹಾಗೂ ತಮಿಳಿನಲ್ಲಿ ಅಂಥ ಪ್ರಯೋಗಗಳು ಬರುತ್ತಿವೆ. ಆ ಸಿನಿಮಾಗಳನ್ನು ನಾವು ನೋಡಬಾರದೆ?
ಪರಭಾಷೆಯ ಸಿನಿಮಾಗಳಲ್ಲಿ ಸೃಜನಶೀಲತೆ ಇದಿಯೋ, ಇಲ್ಲವೋ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ. ಕನ್ನಡದಲ್ಲಿ ಹೊಸ ರೀತಿಯ ಚಿತ್ರಗಳೇ ಬರುತ್ತಿಲ್ಲ ಎನ್ನುವುದು ಕುರುಡುತನ. ತುಂಬಾ ಹಿಂದಕ್ಕೆ ಹೋಗುವುದು ಬೇಡ. ತೀರಾ ಇತ್ತೀಚೆಗೆ ರು. 35 ಸಾವಿರದಲ್ಲಿ ತಯಾರಾದ ಒಂದು ಅಪರೂಪ ಎನಿಸುವ ಸಿನಿಮಾ (ನವಿಲಾದವರು) ದಿಂದ ಹಿಡಿದು 'ಗೊಂಬೆಗಳ ಲವ್' ಹಾಗೂ '6-52' ಚಿತ್ರಗಳವರೆಗೂ ಎಷ್ಟು ಪ್ರಯೋಗಗಳನ್ನು ನಮ್ಮವರು ಮಾಡಿಲ್ಲ. ಪ್ರಮಾಣದಲ್ಲಿ ಕಡಿಮೆ ಇರಬಹುದು. ಆದರೆ, ಪ್ರಯೋಗಗಳಂತೂ ಆಗುತ್ತಿವೆ. ಇನ್ನು ಈ ಪ್ರಯೋಗ ಚಿತ್ರಗಳನ್ನೂ ಸೇರಿದಂತೆ ನಮ್ಮಲ್ಲಿ ಬರುವ ಉತ್ತಮ ಸಿನಿಮಾಗಳನ್ನು ಎಷ್ಟು ಮಂದಿ ನೋಡಿದ್ದೇವೆ. ಅಂಥ ಚಿತ್ರಗಳನ್ನು ಅವಾರ್ಡ್ ಸಿನಿಮಾಗಳೆಂದು ಗೇಲಿ ಮಾಡುತ್ತೇವೆ. ಅದೇ ಚಿತ್ರಗಳು ಬೇರೆ ಭಾಷೆಯಲ್ಲಿ ಕಂಡಾಗ ಸೂಪರ್ ಎನ್ನುತ್ತೇವೆ. ಕನ್ನಡ ಸಾಹಿತಿಯ ಕಥೆಯನ್ನು ಒಳಗೊಂಡ 'ಕೂರ್ಮಾವತಾರ' ಚಿತ್ರ ಬಂದಿದೆ ಅದಕ್ಕೆ ಚಿತ್ರಮಂದಿರ ಕೊಡಿ ಅಂತ ಯಾವ ಕನ್ನಡ ಹೋರಾಟಗಾರರೂ ಬೀದಿಗೆ ಇಳಿಯಲ್ಲ. 'ಜಟ್ಟ'ದಂಥ ಅತ್ಯುತ್ತಮ ಸಿನಿಮಾ ನಮಗೆ ಬೇಕಿಲ್ಲ. ಆದರೆ, ಅಲ್ಲೆಲ್ಲೋ ಜಗತ್ತು ಕಂಡರಿಯದ ಸಿನಿಮಾ ಬಂದಿದೆ, ಅದನ್ನು ನಮಗೆ ಕೊಡಿ ಅಂತ ಹಠಕ್ಕೆ ಬಿದ್ದಿದ್ದೇವೆ.
ವಾದ 3
ಡಬ್ಬಿಂಗ್ ಬಂದರೆ ಯಾವ ರೀತಿ ಸಂಸ್ಕೃತಿ ನಾಶವಾಗುತ್ತದೆ ಹೇಳಿ. ಮೂಲ ಭಾಷೆಗಿಂತ ನಮ್ಮದೇ ಭಾಷೆಯಲ್ಲಿ ಸಿನಿಮಾ ಬಂದರೆ ಕನ್ನಡ ಮಾರುಕಟ್ಟೆ ವಿಸ್ತರಣೆಯಾಗಲ್ವೆ?
ಡಬ್ಬಿಂಗ್ ಎನ್ನುವುದು ಮಾತು, ಮಾರುಕಟ್ಟೆಗೆ ಮಾತ್ರ ಸೀಮಿತವಲ್ಲ. ಮತ್ತೊಬ್ಬನ ತುಂಟಿಗೆ ಇನ್ನೊಬ್ಬನಿಂದ ಬಾಯಿ 'ಅಲ್ಲಾಡಿಸುವ' ಕೆಟ್ಟ ಕಲೆಗಿಂತ ಮತ್ತೊಂದು ಸಂಸ್ಕೃತಿ ಇಲ್ಲ. ಈ ಅಲ್ಲಾಡಿಸುವ ಸಂಸ್ಕೃತಿಗೂ ಕಟ್ಟುವ ಕಲೆಗೂ ಸಾಕಷ್ಟು ವ್ಯತ್ಯಾಸ ಇದೆ. ಹಿಂದಿ ಧಾರಾವಾಹಿಗಳಲ್ಲಿ ಗಂಡಸರು ಹೆಂಗಸರ ಸೊಂಟ ಹಿಡಿದು ಕುಣಿಯುತ್ತಾರೆ. ಅದನ್ನು ನಾವು ಮನೆಯಲ್ಲೇ ಕೂತು ನೋಡಬೇಕು. ಇಂಗ್ಲಿಷ್ ಸಿನಿಮಾಗಳಲ್ಲಿ ಅಪ್ಪಿಕೋ ಚಳವಳಿ, ಕಿಸಿಂಗ್ ಗಮ್ಮತ್ತು ಕಾಮನ್. ಇನ್ನು ಹಿಂದಿ, ತೆಲುಗು, ತಮಿಳಿನಲ್ಲಿ ನಟಿಯರ ಬಟ್ಟೆಗಳು ಕನ್ನಡಗಿಂತ ತುಸು ಕಡಿಮೆ. ಆ ಸಂಸ್ಕೃತಿ ನಮಗೆ ಬೇಕೇ ಬೇಕಪ್ಪ!
ವಾದ 4
ತಮ್ಮ ಬೇಡಿಕೆ ಕುಸಿಯುತ್ತದೆ ಅಂತ ಕನ್ನಡ ಸಿನಿಮಾ ಸ್ಟಾರ್ಗಳು ಡಬ್ಬಿಂಗ್ ಅನ್ನು ವಿರೋಧಿಸುತ್ತಿದ್ದಾರೆ. ಇವರಿಗೆ ಕನ್ನಡ ಕಾಳಜಿ ಇಲ್ಲ.
ನೀವು ಅಂದುಕೊಂಡಂತೆ ಯಾವ ಸ್ಟಾರ್ಗಳ ಬೇಡಿಕೆಯೂ ಕುಸಿಯಲ್ಲ. ನೀವು ಅಲ್ಲ ಅಂದ್ರೆ ಇನ್ನೊಬ್ಬರು. ಅವರೂ ಇಲ್ಲ ಅಂದ್ರೆ ಮಗದೊಬ್ಬರು ಸಿನಿಮಾ ನಿರ್ಮಾಣ ಮಾಡುತ್ತಾರೆ. ಸ್ಟಾರ್ಗಳು ಚೆನ್ನಾಗಿಯೇ ಇದ್ದಾರೆ. ಆರ್ಥಿಕವಾಗಿಯೂ ಕೂಡ. ಬೇರೆ ಭಾಷೆಗೆ ಹೋದ್ರೆ ಬೇಡ ಅನ್ನೋರಿಲ್ಲ. ಕನ್ನಡ ಕಾಳಜಿ ಬಗ್ಗೆ ಮಾತನಾಡುವುದಾದರೆ ಸಿನಿಮಾದವರು ಮಾತ್ರವಲ್ಲ, ನಾವು ಎಲ್ಲರೂ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ. ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಬೇಕು ಎನ್ನುತ್ತಿರುವ ವಾತಾವರಣದಲ್ಲಿ ಕನ್ನಡಿಗರಾದ ನಾವು ಬದುಕಿದ್ದೇವೆ ನೋಡಿ!
ವಾದ 5
ಹೌದು, ತೆಲುಗು, ತಮಿಳು, ಹಿಂದಿಯಲ್ಲಿ ಈಗಾಗಲೇ ಡಬ್ಬಿಂಗ್ ಇದೆ. ಹಾಗಾದರೆ ಅಲ್ಲಿ ಚಿತ್ರರಂಗ ಬಾಗಿಲು ಮುಚ್ಚಿದೆಯೇ?
ನಿಜ ಕಣ್ರಪ್ಪ ಮುಚ್ಚಿಲ್ಲ. ನಿಮ್ಮ ಮಾತು ಒಪ್ಪೋಣ. ಆದರೂ ಅಲ್ಲಿ (ತೆಲುಗು, ತಮಿಳು) ಡಬ್ಬಿಂಗ್ ವಿರುದ್ಧ ಕಳೆದ ವರ್ಷವೇ ಹೋರಾಟ ಆರಂಭಿಸಿರುವುದು ಯಾಕೆ? ಅಲ್ಲದೆ, ನಮ್ಮ ಊರಿನಂತೆ ಗಲ್ಲಿ ಗಲ್ಲಿಗೂ ಪರ ಊರಿನವರು ಅಲ್ಲಿಲ್ಲ. ಇಲ್ಲಿ ಮಲೆಯಾಳಿ ಮಲ್ಲುಗಳು, ತೆಲುಗು ರೆಡ್ಡಿಗಳು, ಬಾಲಿವುಡ್ ಖಾನ್ಗಳು, ಹಾಲಿವುಡ್ ಬಿಳಿ ಜಿರಲೆಗಳು ಎಲ್ಲರೂ ವಕ್ಕರಿಸಿಕೊಂಡಿದ್ದಾರೆ. ಇದರ ನಡುವೆ ನಿಮಗೆ ಡಬ್ಬಿಂಗ್ಗೂ ಬೇಕು. ಈ ಎಲ್ಲರ ಮಧ್ಯೆ ಕನ್ನಡ ಉದ್ದಾರ ಆಗಬೇಕು. ಈ ವಾದವನ್ನು ಯಾರಾದರು ಒಪ್ಪಲು ಸಾಧ್ಯವೇ?
ವಾದ 6
ಪುನೀತ್ರಾಜ್ಕುಮಾರ್, ಶಿವರಾಜ್ಕುಮಾರ್, ಸುದೀಪ್ ಅಭಿನಯದ ಚಿತ್ರಗಳನ್ನು ಮಾತ್ರ ತೆಲುಗು, ತಮಿಳಿಗೆ ಡಬ್ ಮಾಡುವುದರಿಂದ ಅವರ ಭಾಷೆ ನಾಶವಾಗಲ್ಲ. ಆದರೆ, ಅವರ ಚಿತ್ರಗಳು ನಮ್ಮ ಭಾಷೆಗೆ ಬಂದ್ರೆ ಮಾತ್ರ ನಮ್ಮ ಸಂಸ್ಕೃತಿ ಮಾತ್ರ ಹೇಗೆ ಹಾಳಾಗುತ್ತದೆ?
ನೀವು ಹೇಳಿದ ನಟರ ಸಿನಿಮಾಗಳು ಪರಭಾಷೆಯಲ್ಲಿ ಎಷ್ಟು ಚಿತ್ರಮಂದಿರಗಳಲ್ಲಿ, ಎಷ್ಟರ ಪ್ರಮಾಣದಲ್ಲಿ ಹಾವಳಿ ಮಾಡಿವೆ. ಆದರೆ, ಅವರ ಚಿತ್ರಗಳು ಮಾತ್ರ ನೂರಾರು ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತವೆ. ನಮ್ಮವರು ಕಾದು ಕಾದು ಅವರಿಗೆ ಚಿತ್ರಮಂದಿರ ಕೊಡುತ್ತಾರೆ. ಅದನ್ನು ಕೇಳಿದರೆ, ಕೋರ್ಟ್ ಹೋಗ್ತಾರೆ. (ಕೈಟ್ಸ್ ಸಿನಿಮಾ ಗಲಾಟೆ ನೆನಪಿಸಿಕೊಳ್ಳಿ). ಹೀಗಾಗಿ ವಾದಕ್ಕಾಗಿ ಈ ವಾದವನ್ನು ಮುಂದೆ ತರಬೇಡಿ.
ವಾದ 7
ಪರಭಾಷೆಯ ನಟ, ನಟಿಯರು, ತಂತ್ರಜ್ಞರು ಕನ್ನಡಕ್ಕೆ ಬಂದರೆ ಇಲ್ಲಿನ ಕಾರ್ಮಿಕರು ಬೀದಿಗೆ ಬೀಳಲ್ಲ. ರಿಮೇಕ್ನಿಂದ ಸೃಜನಶೀಲತೆ ನಾಶವಾಗಲ್ಲ. ಆದರೂ ಡಬ್ಬಿಂಗ್ ಬಂದರೆ ಮಾತ್ರ ಈ ಸಮಸ್ಯೆಗಳನ್ನು ಹುಟ್ಟಿಕೊಳ್ಳುತ್ತವೆ.
ಪರಭಾಷೆಯ ಕಲಾವಿದರು, ತಂತ್ರಜ್ಞರು ಬರಬಾರದು. ನಮ್ಮ ಕನ್ನಡಿಗರಿಗೆ ಕೆಲಸ ಕೊಡಬೇಕು ಎನ್ನುವುದು ಎಲ್ಲರು ಒಪ್ಪುವ ಮಾತು. ಹಾಗೆ ರಿಮೇಕ್ ಎಂಬ ತಂಗಳನ್ನ ಕೂಡ ಬೇಡ ಅಂತ ಒತ್ತಾಯಿಸುತ್ತಲೇ ಒಳ್ಳೆಯ ಸಿನಿಮಾಗಳನ್ನು ಮಾಡಿ ಅಂತ ಹೇಳಬೇಕಿದೆ. ಆದರೆ, ಡಬ್ಬಿಂಗ್ ಪರವಾಗಿ ಈ ವಾದವನ್ನು ಕತ್ತಿಯಂತೆ ಜಳಪಿಸಬೇಡಿ. ಯಾಕೆಂದರೆ ಡಬ್ಬಿಂಗ್ ಸಮಸ್ಯೆ ಚರ್ಚೆಗೂ ಬರುವ ಮುನ್ನ ಯಾವೊಬ್ಬನು ಈ ಕಾರ್ಮಿಕರ ಬಗ್ಗೆ, ಕಲಾವಿದರ ಬಗ್ಗೆ ಮಾತನಾಡಿಲ್ಲ. ಈಗ ನಮ್ಮ ಸೋಕಾಲ್ಡ್ ಸಿನಿಮಾ ಆಸಕ್ತರಿಗೆ, ಕನ್ನಡದ ಹುಟ್ಟು ಹೋರಾಟಗಾರರಿಗೆ ಇವರೆಲ್ಲ ನೆನಪಾಗಿಬಿಟ್ಟಿದ್ದಾರೆ.
ವಾದ 8
ಕನ್ನಡ ಸ್ಟಾರ್ಗಳು ನಮಗೆ ಕಾಲ್ಶೀಟ್ ಕೊಡುತ್ತಿಲ್ಲ. ಕನ್ನಡ ಸಿನಿಮಾ ಮಾಡಿ ಮನೆ- ಮಠ ಮಾರಿಕೊಂಡಿದ್ದೇವೆ. ಹೀಗಾಗಿ ಡಬ್ಬಿಂಗ್ ಬಂದರೆ ನಾಲ್ಕು ಕಾಸು ಮಾಡಿಕೊಳ್ಳುತ್ತೇವೆ. ಸಿನಿಮಾ ಎನ್ನುವುದು ಬ್ಯುಸಿನೆಸ್. ಹೀಗಾಗಿ ನೀವು ಇದೇ ವ್ಯಾಪಾರ ಮಾಡಿ ಅಂತ ಹೇಳುವ ಹಕ್ಕು ಇಲ್ಲ.
ಇಂಥ ವಾದ ಮಾಡುತ್ತಿರುವ ಕೆಲ ನಿರ್ಮಾಪಕರ ತಲೆಯಲ್ಲಿ ಸಗಣಿ ಕೂತಿದಿಯಾ? ಅಂತ ಒಮ್ಮೆ ಪರಿಶೀಲಿಸಬೇಕಿದೆ. ಯಾಕೆಂದರೆ ಹೀರೋಗಳು ಕಾಲ್ಶೀಟ್ ಕೊಡಲ್ಲ, ನಮಗೆ ನಷ್ಟ ಆಗುತ್ತಿದೆ ಎನ್ನುವ ನಿರ್ಮಾಪಕರಿಗೆ ಪರ ಭಾಷೆಯ ಸಿನಿಮಾಗಳ ಡಬ್ಬಿಂಗ್ ರೈಟ್ಸ್ ಅನ್ನು ನಿಮಗೇ ಕೊಡಬೇಕು ಅಂತ ಯಾವ ಕಾನೂನು ಹೇಳುತ್ತದೆ? ಕೋಟಿ ಕೋಟಿ ಹಾಕಿ ಸಿನಿಮಾ ಮಾಡುವ ಪರಭಾಷೆಯವನೇ ಡಬ್ ಮಾಡುತ್ತಾನೆ. ಇಲ್ಲಿನವರಿಗೆ ಆತ ಯಾಕೆ ಕೊಡಬೇಕು? ಇಷ್ಟಕ್ಕೂ ಡಬ್ಬಿಂಗ್ ಡಬ್ಬಾ ಪರ ಇರುವವರ ಮೂರುಮುಕ್ಕಾಲು ನಿರ್ಮಾಪಕರಿಗೆ ಲಕ್ಷಾಂತರ ರುಪಾಯಿ ಕೊಟ್ಟು ಡಬ್ಬಿಂಗ್ ಹಕ್ಕುಗಳನ್ನು ತರುವ ತಾಕತ್ತು ಇದಿಯೇ?
ವಾದ 9
ಕೊಂಡು- ಕೊಳ್ಳುವ ಸಂಸ್ಕೃತಿಯಲ್ಲಿ ಕೊಳ್ಳುವವನು ಗ್ರಾಹಕ, ಮಾರುವವನು ಮಾಲೀಕ. ಹಣ ಕೊಡುವ ಗ್ರಾಹಕನಿಗೆ ತನಗೆ ಬೇಕಿದ್ದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ.
ಆಯ್ತು, ಕರ್ನಾಟಕದಲ್ಲಿರುವ ತೆಲುಗು, ತಮಿಳರು, ಮಲೆಯಾಳಿಗರು ನಾಳೆ ಗ್ರಾಹಕರ ಹೆಸರಿನಲ್ಲಿ ಕನ್ನಡವೇ ಬೇಡ ಅಂತ ಕೋರ್ಟ್ಗೆ ಹೋಗ್ತಾರೆ. ನಮ್ಮ ಭಾಷೆಯಲ್ಲಿ ನಮ್ಮ ಸಿನಿಮಾ ಬೇಕು ಅಂತಾರೆ. ನಾವು ಅವರನ್ನು ವಿರೋಧಿಸಿಲಿಕ್ಕೆ ಆಗುತ್ತದೆಯೇ? ಯಾಕೆಂದರೆ ನಮ್ಮದು ಬಹುಸಂಸ್ಕೃತಿಯ ನಾಡು ನೋಡಿ. ಎಲ್ಲರನ್ನೂ ಗೌರವಿಸಬೇಕು ತಾನೆ, ಆಗ ನಿಮ್ಮ ಡಬ್ಬಿಂಗ್ ಕನ್ನಡ ಸಿನಿಮಾಗಳನ್ನು ಎಲ್ಲಿ ಬಿಡುಗಡೆ ಮಾಡುತ್ತೀರಿ? ಡಬ್ಬಿಂಗ್ ಸಿನಿಮಾ ಬೇಕು ಎನ್ನುವುದಾದರೆ ಮೂಲ ಭಾಷಿಗರ ಹಕ್ಕುಗಳನ್ನು ನೀವು ಕಸಿದುಕೊಳ್ಳುತ್ತಿಲ್ಲವೇ? ಆಗ ನಮ್ಮ ಪ್ರಜಾಪ್ರಭುತ್ವದ ಸಿದ್ಧಾಂತ ಎಲ್ಲಿ ಹೋಗುತ್ತದೆ? ಇದಕ್ಕೆ ಡಬ್ಬಿಂಗ್ ಪರರು ಉತ್ತರ ಕೊಡ್ರಪ್ಪ.
ಈ ಎಲ್ಲ ವಾದಗಳ ನಡುವೆ ಕೆಲ ನಿರ್ಮಾಪಕರು, 'ಡಬ್ಬಿಂಗ್ನಿಂದ ಯಾರಿಗೂ ಲಾಭ ಇಲ್ಲ, ನಷ್ಟವೂ ಇಲ್ಲ ಎನ್ನುವುದಾದರೆ ಡಬ್ಬಿಂಗ್ ಬರಲಿ ಬಿಡಿ' ಎನ್ನುತ್ತಿದ್ದಾರೆ. ಇಂಥ ಅಪಾಯಕಾರಿ ನಿರ್ಮಾಪಕರು ಮತ್ತೊಬ್ಬರಿಲ್ಲ. ಯಾಕೆಂದರೆ ಇವರಿಗೆ ಮಾಡಕ್ಕೆ ಬೇರೆ ಕ್ಯಾಮೆ ಇಲ್ಲದೆ ಟಿವಿಗಳಲ್ಲಿ ಕೂತು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದಾರೆ. ಇನ್ನು ಕೆಲ ನಿರ್ಮಾಪಕರು ಗಟ್ಟಿಯಾಗಿ ಡಬ್ಬಿಂಗ್ ಬೇಕು ಎನ್ನುತ್ತಿದ್ದಾರೆ. ಅವರು ಸಿನಿಮಾ ಮಾಡಿ ವರ್ಷಗಳೇ ಕಳೆದು ಹೋಗಿವೆ. ರಸ್ತೆ ರಿಪೇರಿ, ವಾರ್ಡ್ ಕಟ್ಟಡಗಳು ಅಂತ ತಿರುಗಾಡಿಕೊಂಡಿದ್ದಾರೆ. ಅವರಿಗೂ ಡಬ್ಬಿಂಗ್ ಬೇಕು. ಯಾಕೆಂದರೆ ಒಂದು ಕಾಲದಲ್ಲಿ ರಿಮೇಕ್ ರೈಟ್ಸ್ ಜೊತೆಗೆ ಡಬ್ಬಿಂಗ್ ಹಕ್ಕುಗಳನ್ನೂ ತಂದಿದ್ದಾರೆ. ಅವುಗಳನ್ನು ಮಾಡಿ ಮತ್ತೆ ಸಿನಿಮಾ ಮಾಲ್ ಕಟ್ಟಬೇಕು ಅಷ್ಟೆ.
-ಆರ್. ಕೇಶವಮೂರ್ತಿ