ನಟ ರವಿಚಂದ್ರನ್ ಅಂದ್ರೆ ಸಿನಿಮಾ, ಸಿನಿಮಾ ಅಂದ್ರೆ ರವಿಚಂದ್ರನ್ ಎನ್ನುವಷ್ಟರ ಮಟ್ಟಿಗೆ ಸಿನಿಮಾ ಸಂಸ್ಕೃತಿಯನ್ನೇ ತಮ್ಮ ಬದುಕು ಎಂದುಕೊಂಡಿರುವ ಕ್ರೇಜಿಸ್ಟಾರ್, ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಬಾರಿ ತಮ್ಮ ಪುತ್ರನನ್ನೂ ಹೆಗಲಿಗೆ ಕಟ್ಟಿಕೊಂಡಿದ್ದಾರೆ. 'ಪ್ರೇಮಲೋಕ'ದಲ್ಲಿ ಈ 'ರಣಧೀರ'ನ ಪಯಣ ಶುರುವಾಗಿದೆ.
'ನಾನು ಒಂದು ಅದ್ಧೂರಿ ಕನಸು ಕಟ್ಟಿಕೊಂಡು ಹೊರಟಿದ್ದೇನೆ. ಆದರೆ, ಈ ಕನಸು ಎಂದು ಸಾಕಾರಗೊಳ್ಳುತ್ತದೋ ಗೊತ್ತಿಲ್ಲ' ಹೀಗೆ ಪದೇ ಪದೆ ಮಾಧ್ಯಮಗಳ ಮುಂದೆ ತಮ್ಮ ಸಿನಿಮಾ ಹಸಿವನ್ನು ಹೇಳಿಕೊಳ್ಳುತ್ತಿದ್ದವರು ಕ್ರೇಜಿಸ್ಟಾರ್ ರವಿಚಂದ್ರನ್. ಸೋತಾಗ ಹೆದರಲಿಲ್ಲ, ಗೆದ್ದಾಗ ಮತ್ತಷ್ಟು ಸಿನಿಮಾ ಕನಸು ಕಟ್ಟಿಕೊಂಡರು. ಯಾವಗಳಿಗೆಯಲ್ಲಿ ಇವರಿಗೆ 'ಕನಸುಗಾರ' ಎನ್ನುವ ಬಿರುದು ದಕ್ಕಿತೋ ತಿಳಿಯದು. ಪ್ರತಿ ದಿನ, ಪ್ರತಿ ಸೆಕೆಂಡು, ಪ್ರತಿ ಕ್ಷಣವೂ ಸಿನಿಮಾ... ಸಿನಿಮಾ... ಸಿನಿಮಾ. ಹೀಗೆ ಮೂರು ಹೊತ್ತು ಸಿನಿಮಾ ಬಗ್ಗೆಯೇ ಚಿಂತಿಸುವ ಅಪ್ಪಟ ಸಿನಿಮಾ ಮಾಂತ್ರಿಕರನ್ನು ಪಟ್ಟಿ ಮಾಡಲು ಹೊರಟರೆ ಖಂಡಿತ ಕ್ರೇಜಿಸ್ಟಾರ್ ಅವರಿಗೆ ಮೊದಲ ಸ್ಥಾನ.
ಮೊನ್ನೆಯಷ್ಟೆ ವೈಭವದಿಂದ ಸೆಟ್ಟೇರಿದ 'ರಣಧೀರ' ಚಿತ್ರದ ಮುಹೂರ್ತ ಸಮಾರಂಭಕ್ಕೆ ನೈಸ್ ರಸ್ತೆ ಮಾತ್ರವಲ್ಲ, ಇಡೀ ಚಿತ್ರೋದ್ಯಮ, ಕ್ರೇಜಿಸ್ಟಾರ್ ಅವರ ಅಭಿಮಾನಿಗಳ ದಂಡು ಸಾಕ್ಷಿಯಾದರು. ಅಪ್ಪನ ಕನಸಿನ ಲೋಕದಲ್ಲಿ ತನ್ನ ಸಿನಿಮಾ ಹಂಗಾಮ ಶುರು ಮಾಡಿರುವ ಆರ್. ಮನೋರಂಜನ್‌ರಿಗೂ ಈ ಪರಿ ಜನ ಸಂಖ್ಯೆ ಸೇರುತ್ತದೆ ಅಂತ ನಿರೀಕ್ಷೆ ಇರಲಿಲ್ಲ. ಒಂದು ಕಡೆ ಕ್ರೇಜಿಸ್ಟಾರ್ ಅವರ ಹುಟ್ಟಹಬ್ಬ, ಇನ್ನೊಂದೆಡೆ ಪುತ್ರ ಮನೋರಂಜನ್‌ರ ಮೊದಲ ಚಿತ್ರದ ಮುಹೂರ್ತ. ಈ ಎರಡೂ ಕಾರ್ಯಕ್ರಮಗಳ ವೇದಿಕೆ ಒಂದೇ ಆಗಿದ್ದ ಕಾರಣ, ಮೂರು ಜಾತ್ರೆಗಳು ಒಂದು ಕಡೆ ಸೇರಿದರೆ ಹೇಗಿರುತ್ತದೆ ಹಾಗಿತ್ತು, ನೈಸ್ ರಸ್ತೆಯ ದರ್ಬಾರ್.
ತಮ್ಮ ಬಹು ವರ್ಷಗಳ ಕನಸಿಗೆ ನಟ ರವಿಚಂದ್ರನ್ ಸಾವಿರಾರು ಅಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಿದರು. ಅಪ್ಪನ ನಿರ್ದೇಶನದಲ್ಲಿ ನಾಯಕನಾಗುತ್ತಿರುವ ಆರ್. ಮನೋರಂಜನ್ ಸಂಭ್ರಮದಲ್ಲಿ ತೇಲುತ್ತಿದ್ದರು. ಅಲ್ಲದೆ, ನಟ ಆರ್. ಮನೋರಂಜನ್ ಅಪ್ಪನ ಅಭಿಮಾನಿಗಳನ್ನು ನೋಡಿ ನಿಬ್ಬೆರಗಾದರು.
ಇಂಥದೊಂದು ಅದ್ಧೂರಿ ಸಮಾರಂಭಕ್ಕೂ ಮೊದಲು ರವಿಚಂದ್ರನ್ ಮಾಧ್ಯಮಗಳ ಜತೆ ಮಾತಿಗೆ ಸಿಕ್ಕರು. ಎಂದಿನಂತೆ ಅದೇ ಸಿನಿಮಾ ಲೋಕದ ಕನಸು, ಗುರಿ, ಏನಾದರೂ ಮಾಡಬೇಕೆಂಬ ಉತ್ಸಾಹ.
ನವ ಯುವಕನಂತೆ ಅವರ ಕಣ್ಣಲ್ಲಿ ಸಿನಿಮಾ ಕನಸುಗಳು ಕಂಗೊಳಿಸುತ್ತಿದ್ದವು. ಇದರ ನಡುವೆಯೂ ರವಿಚಂದ್ರನ್ ಭಾವುಕರಾಗಿದ್ದು, ಅವರ ಸಿನಿಮಾ ಪ್ರೀತಿಗೆ ಸಾಕ್ಷಿ. 'ನನ್ನ ಮೇಲಿನ ಪ್ರೀತಿಯಿಂದಲೋ, ನನ್ನ ಮಗನ ಮೇಲಿನ ಅಭಿಮಾನದಿಂದಲೋ ಅಥವಾ ನನ್ನ ಸಿನಿಮಾ ಮೇಲಿನ ನಂಬಿಕೆಯಿಂದಲೋ ಬಂದಿರುವ ನಿಮ್ಮೆಲ್ಲರಿಗೂ ನಾನು ಋಣಿ. ಖಂಡಿತ ನಿಮಗೆ ಮೆಚ್ಚಿಗೆಯಾಗುವಂಥ ಚಿತ್ರವನ್ನೇ ಕೊಡುತ್ತೇನೆ. ಇದು ನನ್ನ ಕನಸಿನ ಕೂಸು. ಈ ಕೂಸನ್ನು ನೀವೇ ಬೆಳೆಸಬೇಕು' ಎಂದು ವಿಶಾಲವಾದ ವೇದಿಕೆ ಮೇಲೆ ಘೋಷಿಸುವ ಮೊದಲೇ 'ರಣಧೀರ'ನ ಬಗ್ಗೆ ತುಂಬಾ ಸ್ಪಷ್ಟವಾಗಿ ಮಾತನಾಡಿದರು ರವಿಚಂದ್ರನ್.
'ನಿಮಗೇ ಗೊತ್ತಿದೆ ನಾನು ಏನೇ ಮಾಡಿದರೂ ಅದು ಕಲರ್‌ಫುಲ್ ಆಗಿರುತ್ತದೆ ಅಂತ. ಅದರ ಜೊತೆ ಜನ ಮೆಚ್ಚುವ ಅಪ್ಪಟ ಸಿನಿಮಾ ಕೊಡುತ್ತೇನೆಂಬ ನಂಬಿಕೆಯನ್ನು ಇಲ್ಲಿಯವರೆಗೂ ಉಳಿಸಿಕೊಂಡು ಬಂದಿದ್ದೇನೆ. ಇನ್ನು ಮುಂದೆಯೂ ಉಳಿಸಿಕೊಳ್ಳುತ್ತೇನೆ. ಆದರೆ, ಬೆಳೆಸಬೇಕಾದವರು ನೀವೇ' ಎಂದು ಮಾಧ್ಯಮಗಳತ್ತ ನೋಡಿದರು ರವಿಚಂದ್ರನ್.
'ರಣಧೀರ- ಪ್ರೇಮಲೋಕದಲ್ಲಿ' ಈ ಹೆಸರು ನೋಡಿ ಹಳೆ ಕಥೆಯನ್ನೇ ಮತ್ತೆ ಉಣಬಡಿಸುತ್ತಿದ್ದಾರೆ ಅಂದುಕೊಳ್ಳಬೇಡಿ. ಇಲ್ಲಿ ಶೀರ್ಷಿಕೆಯಷ್ಟೇ ಆ ದಿನಗಳದ್ದು. ಅದನ್ನೂ ಕೂಡ ಹೊಸದಾಗಿ ನಿಮ್ಮ ಮುಂದಿಟ್ಟಿದ್ದೇನೆ. ಕಥೆ ಕೂಡ ಇಷ್ಟೇ ಹೊಸತನದಿಂದ ಕೂಡಿರುತ್ತದೆ' ಎನ್ನುವುದು ಕ್ರೇಜಿಸ್ಟಾರ್‌ರ ಮಾತು. ರವಿಚಂದ್ರನ್‌ರ ಸಿನಿಮಾಗಳೆಂದರೆ ಹಾಡುಗಳಿಗೆ ಹೆಚ್ಚು ಪ್ರಾಮುಖ್ಯ ಇರುತ್ತದೆ. ಹೀಗಾಗಿ ಮಗನ ಚಿತ್ರದಲ್ಲೂ ಹಾಡುಗಳದ್ದೇ ಅಬ್ಬರ. 7 ಹಾಡುಗಳು, 33 ಬಿಟ್ ಸಾಂಗ್ಸ್ ಇವೆ. 1.30 ಗಂಟೆ ಸಿನಿಮಾ ಹಾಡಿನಲ್ಲೇ ಸಾಗುತ್ತದಂತೆ. ಮತ್ತೊಂದು ವಿಶೇಷ ಅಂದ್ರೆ, ಮುಹೂರ್ತದ ಅಹ್ವಾನ ಪತ್ರಿಕೆ ಕೊಡಲು ಹೋದಾಗ, ನಟರಾದ ಸುದೀಪ್, ದರ್ಶನ್, ಪುನೀತ್ ರಾಜ್‌ಕುಮಾರ್ 'ಈ ಚಿತ್ರದಲ್ಲಿ ನಮಗೂ ಒಂದು ಅವಕಾಶ ಕೊಡಿ' ಅಂತ ಕೇಳಿಕೊಂಡಿದ್ದಾರಂತೆ. 'ಈಗ ಅವರು ಸ್ಟಾರ್ ನಟರು. ಅವರು ಅವಕಾಶ ಕೇಳಿರುವುದೇ ದೊಡ್ಡದು. ಒಂದು ವೇಳೆ ಈ ಚಿತ್ರದಲ್ಲಿ ನಟಿಸಿದರೂ ಅಚ್ಚರಿ ಪಡಬೇಕಿಲ್ಲ' ಎಂದರು ರವಿಚಂದ್ರನ್.
ಅಭಿನಯಕ್ಕೆ ಬೇಕಾದ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಲ್ಲಲು ರೆಡಿಯಾಗಿರುವ ಆರ್. ಮನೋರಂಜನ್, ಅಪ್ಪ ಹೇಳಿದಂತೆ ನಟಿಸುವುದಾಗಿ ಹೇಳಿದರು. 'ಕಥೆ ತುಂಬಾ ಚೆನ್ನಾಗಿದೆ. ಪಾತ್ರಕ್ಕೆ ಬೇಕಾದ ತಯಾರಿ ನಡೆಸಿಕೊಂಡಿದ್ದೇನೆ. ಅಪ್ಪನ ಹೆಸರು ಉಳಿಸುವ ಜೊತೆಗೆ ನಾನೂ ಕೂಡ ಕಲಾವಿದನಾಗಿ ಸಾಬೀತು ಮಾಡುವ ಜವಾಬ್ದಾರಿ ನನ್ನ ಮೇಲಿದೆ' ಎಂದರು ಆರ್. ಮನೋರಂಜನ್. ಕ್ರೇಜಿಸ್ಟಾರ್ ಅವರ ಮಾತು ಮುಗಿದಿತ್ತು. ಆದರೆ, ಹರ್ಷೋದ್ಗಾರ, ಚಪ್ಪಾಳೆ ಹಾಗೂ ಶಿಳ್ಳೆಗಳ ಸದ್ದು ಮಾತ್ರ ನಿಂತಿರಲಿಲ್ಲ. 'ಪ್ರೇಮಲೋಕ'ದಲ್ಲಿ ಮೋಡಿ ಮಾಡಿದ ರವಿಚಂದ್ರನ್ ಹಾಗೂ ಜೂಹಿ ಚಾವ್ಲಾರ ಜೋಡಿ ಈ ಚಿತ್ರದಲ್ಲೂ ಕಮಾಲ್ ಮಾಡಲಿದೆಯೇ? ಅಂದಹಾಗೆ ನಟ ಆರ್.ಮನೋರಂಜನ್‌ರಿಗೆ ಇಬ್ಬರು ನಾಯಕಿಯರು. ಇನ್ನೂ ಆಯ್ಕೆಯಾಗಿಲ್ಲ.
-ಆರ್.ಕೇಶವಮೂರ್ತಿ