ಗೋಲ್ಡನ್ ಸ್ಟಾರ್ ಗಣೇಶ್ರ ತಮ್ಮ ಹೀರೋ ಆಗ್ತಾರಂತೆ ಅನ್ನೋ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಅದಕ್ಕೆ ತಕ್ಕಂತೆ ಗಣೇಶ್ ತಮ್ಮ ಮಹೇಶ್ ಹೀರೋ ಆಗಲು ಪ್ರಯತ್ನ ಮಾಡುತ್ತಲೇ ಇದ್ದರು. ಆದರೆ ಈಗ ಈ ಸುದ್ದಿಗೆ ಅಧಿಕೃತ ಮುದ್ರೆ ದೊರೆತಿದೆ. ಮಹೇಶ್ ಕಡೆಗೂ ಹೀರೋ ಆಗಿದ್ದಾರೆ. ಅವರ ನಾಯಕತ್ವದ ಮೊದಲ ಚಿತ್ರ 'ನಮಕ್ ಹರಾಮ್'.
'ಪದೇ ಪದೇ' ಚಿತ್ರದ ನಿರ್ದೇಶಕ ನಾಗರಾಜ್ ಪೀಣ್ಯ ಮಹೇಶ್ರನ್ನು ನಮಕ್ ಹರಾಮ್ ಆಗಿಸಲು ಹೊರಟಿದ್ದಾರೆ. ಅವರಿಗೆ ಮಳವಳ್ಳಿ ಸಾಯಿಕೃಷ್ಣ ಜೊತೆಯಾಗಿದ್ದಾರೆ. ಇದೊಂದು ರೌಡಿಸಂ ಆಧಾರಿತ ಚಿತ್ರವಾಗಿದ್ದು ರೌಡಿಯೊಬ್ಬನಿಗೆ ನಾನು ರೌಡಿ ಆಗಬಾರದಿತ್ತು ಎಂದು ಫೀಲ್ಡಿಗೆ ಇಳಿಯುವ ಮುನ್ನವೇ ಅನ್ನಿಸಿದ್ದರೆ ಏನಾಗುತ್ತಿತ್ತು ಎಂಬುದು ಚಿತ್ರದ ತಿರುಳಂತೆ. ಹಾಗಾಗಿ ನಮಕ್ ತಿಂದವನು ನೀರು ಕುಡಿಯೇ ಬೇಕು ಎಂಬುದೇ ಚಿತ್ರದ ಕಥೆ ಎಂದುಕೊಂಡರೆ ತಪ್ಪಿಲ್ಲ. ಚಿತ್ರದ ಪ್ರಮುಖ ಅಂಶ ಎಂದರೆ ಮಳೆ ಮತ್ತು ಬೆಂಕಿ, ಹಾಗಾಗಿ ಮುಖದ ಮೇಲೆ ನೀರು ಬಿದ್ದರೆ ಒರೆಸಿಕೊಳ್ಳಬಹುದು, ಆದರೆ ಬೆಂಕಿ ಬಿದ್ದರೆ ಏನು ಮಾಡುತ್ತೀರಿ ಎನ್ನುತ್ತಾ ಚಿತ್ರದ ಸಾರಾಂಶ ಹೇಳಿದ್ದು ಮಳವಳ್ಳಿ ಸಾಯಿಕೃಷ್ಣ. ಜೋಗಿ ಚಿತ್ರದಲ್ಲಿ ಇಂಥದ್ದೇ ರೌಡಿಸಂ ಹಿನ್ನೆಲೆ ಇರುವ ಕಥೆಗೆ ಕೆಲಸ ಮಾಡಿದ್ದ ಅನುಭವ ಇರುವುದರಿಂದ ಮಳವಳ್ಳಿ ಜೀವ ತೆಗೆಯುವ ರೌಡಿಯ ಚಿತ್ರಕ್ಕೆ ಅವರು ಜೀವತುಂಬುತ್ತಾರೆ ಎಂಬ ಆತ್ಮವಿಶ್ವಾಸ ಚಿತ್ರತಂಡದ್ದು.
ಚಿತ್ರದಲ್ಲಿ ಮಹೇಶ್ರಿಗೆ ಯಾರು ನಾಯಕಿಯಾಗುತ್ತಾರೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲವಾದರೂ ಸದ್ಯಕ್ಕೆ ಚಿತ್ರ ಪೀಣ್ಯದ ಗಣಪತಿ ದೇವಸ್ಥಾನದಲ್ಲಿ ಸೆಟ್ಟೇರಿದೆ. ನಂದಕುಮಾರ್ ಚಿತ್ರಕ್ಕೆ ಛಾಯಾಗ್ರಾಹಕರಾಗಿದ್ದಾರೆ. ಚಿತ್ರದ ಚಿತ್ರೀಕರಣದಲ್ಲಿ ನಾಯಕನಿಗೆ ಬೆಂಕಿಯ ಹಿನ್ನೆಲೆ ಮತ್ತು ನಾಯಕಿಗೆ ಮಳೆಯ ಹಿನ್ನೆಲೆಯನ್ನು ಅವರು ಬಳಸಲಿದ್ದಾರಂತೆ.
ಒಟ್ಟು 45 ದಿನಗಳ ಶೆಡ್ಯೂಲ್ನಲ್ಲಿ ಚಿತ್ರವನ್ನು ಮುಗಿಸುವ ಪ್ಲ್ಯಾನ್ ನಿರ್ಮಾಪಕರಾದ ಬೆಳ್ಳಿ ಗಂಗಾಧರ್, ಶಂಕರ್ ಮತ್ತು ರಾಜು ಅವರದ್ದು. ಸುಮಾರು ಒಂದು ವರ್ಷದ ಮುನ್ನವೇ ಚಿತ್ರದ ಕಥೆ ಕೇಳಿ ಅದಕ್ಕಾಗಿ ಇಲ್ಲಿಯವರೆಗೆ ತಯಾರಿ ನಡೆಸಿದ್ದಾರಂತೆ ನಾಯಕ ಮಹೇಶ್.
ಪದೇ ಪದೇ ಚಿತ್ರಕ್ಕೆ ಸಂಗೀತ ನೀಡಿದ್ದ ಸತೀಶ್ ಆರ್ಯನ್ ಈ ಚಿತ್ರಕ್ಕೆ ಐದು ಹಾಡುಗಳನ್ನು ಕಂಪೋಸ್ ಮಾಡಿದ್ದು, ನಿರ್ದೇಶಕರಾದ ಸಂತು, ಮಳವಳ್ಳಿ ಸಾಯಿಕೃಷ್ಣ, ಪೀಣ್ಯ ನಾಗರಾಜ್ ಹಾಡುಗಳನ್ನು ಬರೆದಿದ್ದಾರೆ. ಇನ್ನು ಸದ್ಯಕ್ಕೆ ಚಿತ್ರರಂಗದಲ್ಲೇ ಬ್ಯುಸಿಯಾಗಿರುವ ಋಷಿಕುಮಾರ ಸ್ವಾಮೀಜಿ ನಮಕ್ ಹರಾಮ್ ಚಿತ್ರಕ್ಕೆ ಹಾಡೊಂದನ್ನು ಹಾಡಲಿದ್ದಾರೆ. ಚಿತ್ರದಲ್ಲಿ ಪತ್ರಕರ್ತ ಗೌರೀಶ್ ಅಕ್ಕಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಅದರ ಜೊತೆ ಸುಮಾರು 18 ನಟರು ಈ ಚಿತ್ರದ ನೆಗೆಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಇನ್ನೊಂದು ವಿಶೇಷ.
= ಹ್ಯಾರಿ