

ಬೆಂಗಳೂರು: ಕೆಲವೇ ತಿಂಗಳ ಡೇಟಿಂಗ್ ಬಳಿಕ ಮದುವೆಗೆ ಸಿದ್ಧಳಾದ ಬೆಂಗಳೂರಿನ ಸಾಫ್ಟ್ ವೇರ್ ಎಂಜಿನಿಯರ್ ಉದ್ಯೋಗಿ ಯುವತಿ ತಾಯಿಯ ಸಲಹೆ ಬಳಿಕ ಮದುವೆ ನಿರ್ಧಾರದಿಂದ ಹಿಂದೆ ಸರಿದಿರುವ ಘಟನೆ ವರದಿಯಾಗಿದೆ.
ಪ್ರೀತಿಸಿ ಮದುವೆಯಾಗಬೇಕೋ ಅಥವಾ ಕುಟುಂಬದವರು ಸೂಚಿಸುವ ಹುಡುಗನನ್ನು ಮದುವೆಯಾಗಬೇಕೋ ಎಂಬ ಗೊಂದಲಕ್ಕೆ ಸಿಲುಕಿದ ಬೆಂಗಳೂರಿನ 27 ವರ್ಷದ ಮಹಿಳಾ ಟೆಕ್ಕಿಯೊಬ್ಬರು ರೆಡ್ಡಿಟ್ನಲ್ಲಿ ತಮ್ಮ ಮನದಾಳದ ವಿಚಾರ ಹಂಚಿಕೊಂಡಿದ್ದಾರೆ. ಬೇರೆ ರಾಜ್ಯ, ಭಾಷೆ ಮತ್ತು ಸಂಸ್ಕೃತಿಯ ಹಿನ್ನೆಲೆಯ ಯುವಕನನ್ನು ಪ್ರೀತಿಸುತ್ತಿರುವ ಆಕೆಗೆ, ತಾಯಿಯ ಕಳಕಳಿಯ ಮಾತುಗಳು ಇದೀಗ ಮದುವೆಯ ನಿರ್ಧಾರವನ್ನೇ ಮರುಪರಿಶೀಲಿಸುವಂತೆ ಮಾಡಿವೆ.
ಪ್ರಮುಖ ಟೆಕ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿ, ಬಿಹಾರ ಮೂಲದ 30 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಾರೆ. ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಬೇರೆ ಬೇರೆ ತಂಡಗಳಲ್ಲಿದ್ದಾರೆ. ಕೆಲವೇ ತಿಂಗಳುಗಳ ಕಾಲ ಡೇಟಿಂಗ್ ಮಾಡಿದ ಬಳಿಕ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು. ಇಬ್ಬರೂ ಪರಸ್ಪರರ ಪೋಷಕರನ್ನು ಭೇಟಿಯಾಗಿದ್ದು, ಕುಟುಂಬಗಳೂ ಈ ಸಂಬಂಧಕ್ಕೆ ಬಹುತೇಕ ಒಪ್ಪಿಗೆ ಸೂಚಿಸಿದ್ದವು. ಆದರೆ, ಯುವತಿಯ ತಾಯಿಗೆ ಮಾತ್ರ ಈ ಮದುವೆಯ ಬಗ್ಗೆ ಇನ್ನೂ ಕೆಲವು ಆತಂಕಗಳಿದ್ದವು ಎನ್ನಲಾಗಿದೆ.
ಭಾಷೆ, ಸಂಸ್ಕೃತಿಯ ವ್ಯತ್ಯಾಸದ ಬಗ್ಗೆ ತಾಯಿ ಆತಂಕ
'ನಾನು ನನ್ನ ಬಾಯ್ಫ್ರೆಂಡ್ನನ್ನು ಪ್ರೀತಿಸಿ ಮದುವೆಯಾಗಬೇಕೇ ಅಥವಾ ಅಮ್ಮ ಹೇಳಿದಂತೆ ಕುಟುಂಬದವರು ನೋಡುವ ಮದುವೆಗೆ ಒಪ್ಪಿಕೊಳ್ಳಬೇಕೇ?' ಎಂಬ ಅರ್ಥದ ಪ್ರಶ್ನೆಯನ್ನು ಯುವತಿ ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ತಾಯಿ ವ್ಯಕ್ತಪಡಿಸಿದ ಆತಂಕವನ್ನು ವಿವರಿಸಿರುವ ಯುವತಿ, ಬೇರೆ ಬೇರೆ ಸಾಂಸ್ಕೃತಿಕ ಹಿನ್ನೆಲೆಯವರನ್ನು ಮದುವೆಯಾದಾಗ ಭವಿಷ್ಯದಲ್ಲಿ ಎದುರಾಗಬಹುದಾದ ಸವಾಲುಗಳ ಬಗ್ಗೆ ತಾಯಿ ಎಚ್ಚರಿಸಿದ್ದಾರೆ ಎಂದು ಹೇಳಿದ್ದಾರೆ.
ತಾಯಿ ಹೇಳಿದ್ದೇನು?
“ಈಗ ನೀನು ಅವನನ್ನು ಪ್ರೀತಿಸಿ ಮದುವೆಯಾಗಬಹುದು. ಆದರೆ, ಮುಂದೆ ನಿಮ್ಮಿಬ್ಬರ ನಡುವಿನ ಸಾಂಸ್ಕೃತಿಕ ವ್ಯತ್ಯಾಸಗಳು ದೊಡ್ಡ ಸವಾಲಾಗಿ ಪರಿಣಮಿಸಬಹುದು. ಭವಿಷ್ಯದಲ್ಲಿ ನಿಮ್ಮಿಬ್ಬರಲ್ಲಿ ಯಾರಿಗಾದರೂ ಕೆಲಸ ಹೋದರೆ ಅಥವಾ ಬೇರೆ ನಗರಕ್ಕೆ ಸ್ಥಳಾಂತರ ಆಗಬೇಕಾದರೆ, ಅವನ ಊರಿಗೆ ಹೋಗಿ ನೆಲೆಸುವ ಪರಿಸ್ಥಿತಿ ಬರಬಹುದು. ಆಗ ನಿನಗೆ ಪರಿಚಯವಿಲ್ಲದ ಊರು, ಸರಿಯಾಗಿ ಮಾತನಾಡಲು ಬಾರದ ಭಾಷೆ ಮತ್ತು ನೀನು ಎಂದಿಗೂ ಭಾಗವಾಗಿರದ ಸಂಸ್ಕೃತಿಗೆ ಹೊಂದಿಕೊಳ್ಳಬೇಕಾಗಬಹುದು.
ನಿನಗೆ ಇಷ್ಟವಿಲ್ಲದ ಕೆಲವು ಪದ್ಧತಿಗಳನ್ನೂ ಅನುಸರಿಸಬೇಕಾಗಬಹುದು. ಕಾಲಕ್ರಮೇಣ ಅವನ ಮೇಲಿನ ಪ್ರೀತಿ ಕಡಿಮೆಯಾಗಿ, ನಿನ್ನವರ ನಡುವೆ ಇರಬೇಕೆಂಬ ಹಂಬಲ ಹೆಚ್ಚಾಗಬಹುದು. ಹಾಗಾಗಿ, ನಿನಗೆ ಇಷ್ಟವಾಗುವ ಮತ್ತು ನಿನ್ನದೇ ಸಮುದಾಯದ ಹುಡುಗನೊಂದಿಗೆ ಮದುವೆಯಾಗುವ ಆಯ್ಕೆಯನ್ನೂ ಪರಿಗಣಿಸು. ಈಗ ತೆಗೆದುಕೊಳ್ಳುವ ನಿರ್ಧಾರಕ್ಕಾಗಿ ಮುಂದೆ ಪಶ್ಚಾತ್ತಾಪ ಪಡಬೇಡ” ಎಂದು ತಾಯಿ ಸಲಹೆ ನೀಡಿದ್ದಾರೆ ಎಂದು ಯುವತಿ ತನ್ನ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮದುವೆ ನಿರ್ಧಾರದಿಂದ ಯೂಟರ್ನ್ ಹೊಡೆದ ಯುವತಿ!
ತಾಯಿಯ ಈ ಮಾತುಗಳು ಯುವತಿಯನ್ನು ಆಲೋಚನೆಗೆ ದೂಡಿವೆ. ಅಷ್ಟೇ ಅಲ್ಲ, ತನ್ನ ಬಾಯ್ಫ್ರೆಂಡ್ ಬಗ್ಗೆ ತನಗೆ ಗಾಢವಾದ ಪ್ರೀತಿಯಿಲ್ಲ ಎಂಬುದನ್ನೂ ಆಕೆ ಒಪ್ಪಿಕೊಂಡಿದ್ದಾರೆ. ಆದರೆ, ಆತನೊಂದಿಗೆ ಮಾತನಾಡುವುದು ಸುಲಭವಾಗಿದ್ದು, ಆತ ತನ್ನ ಪಾಲಿಗೆ ಸುರಕ್ಷಿತ ವ್ಯಕ್ತಿ ಎನಿಸುತ್ತಾನೆ ಎಂದು ತಿಳಿಸಿದ್ದಾರೆ.
ಇಬ್ಬರೂ ಒಟ್ಟಿಗೆ ವಾಸಿಸಿಲ್ಲ, ದೈಹಿಕವಾಗಿಯೂ ಆಪ್ತ ಸಂಬಂಧ ಹೊಂದಿಲ್ಲ ಎಂಬುದನ್ನೂ ಯುವತಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಕೆಲವೇ ತಿಂಗಳ ಪರಿಚಯದ ಆಧಾರದಲ್ಲಿ ಮದುವೆಯ ನಿರ್ಧಾರ ತೆಗೆದುಕೊಳ್ಳುವುದು ಸರಿಯೇ ಎಂಬ ಪ್ರಶ್ನೆ ಆಕೆಯನ್ನು ಕಾಡುತ್ತಿದೆ.
ತಮ್ಮ ಪೋಸ್ಟ್ನ ಕೊನೆಯಲ್ಲಿ, ಪುರುಷರು ಖಾಸಗಿ ಸಂದೇಶ ಕಳುಹಿಸಬಾರದು ಎಂಬ ವೈಯಕ್ತಿಕ ಮನವಿಯನ್ನೂ ಮಾಡಿದ್ದಾರೆ.
‘ಕೆಲವೇ ತಿಂಗಳ ಪರಿಚಯಕ್ಕೆ ಮದುವೆ ಬೇಡ’ ಎಂದ ನೆಟ್ಟಿಗರು
ಯುವತಿಯ ಪೋಸ್ಟ್ಗೆ ರೆಡ್ಡಿಟ್ನಲ್ಲಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆಕೆಗೆ ತನ್ನ ಬಾಯ್ಫ್ರೆಂಡ್ ಮೇಲೆ ಗಾಢವಾದ ಪ್ರೀತಿಯೇ ಇಲ್ಲದಿದ್ದರೆ ಮದುವೆಯಾಗುವ ಅಗತ್ಯವೇನಿದೆ ಎಂದು ಹಲವರು ಪ್ರಶ್ನಿಸಿದ್ದಾರೆ. ಒಬ್ಬ ಬಳಕೆದಾರರು, “ನನಗೆ ಆತನ ಮೇಲೆ ಅಷ್ಟೊಂದು ಪ್ರೀತಿಯಿಲ್ಲ ಎಂದು ನೀನೇ ಹೇಳುತ್ತಿದ್ದೀಯ. ಹಾಗಾದರೆ ಆತನನ್ನು ಮದುವೆಯಾಗುತ್ತಿರುವುದೇಕೆ? ದಯವಿಟ್ಟು ಮದುವೆಯಾಗಬೇಡ” ಎಂದು ಸಲಹೆ ನೀಡಿದ್ದಾರೆ.
ಇನ್ನೊಬ್ಬರು, “ಕೆಲವೇ ತಿಂಗಳುಗಳ ಕಾಲ ಜೊತೆಯಾಗಿ ಇದ್ದು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಕೆಲವರು ತಾಯಿಯ ಆತಂಕವನ್ನೇ ಅಂತಿಮ ನಿರ್ಧಾರಕ್ಕೆ ಆಧಾರವಾಗಿಸಿಕೊಳ್ಳಬಾರದು ಎಂದಿದ್ದಾರೆ. ಯುವತಿ ಸ್ವತಃ ನಿರ್ಧಾರ ತೆಗೆದುಕೊಳ್ಳುವ ಮೊದಲು ಬಾಯ್ಫ್ರೆಂಡ್ನ ಕುಟುಂಬವನ್ನು ಭೇಟಿ ಮಾಡಿ, ಅವರ ಜೀವನಶೈಲಿ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
“ಬೇರೆಯವರ ಸಲಹೆ ಕೇಳಿ ನಿಮ್ಮ ಸಂಬಂಧವನ್ನು ಮುರಿದುಕೊಳ್ಳಬೇಡಿ. ಆದರೆ, ಮದುವೆಯ ಸಾಧಕ-ಬಾಧಕಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ಬಳಿಕ ನಿರ್ಧಾರ ತೆಗೆದುಕೊಳ್ಳಿ. ಪ್ರೀತಿ ಅಪರೂಪದ ಸಂಗತಿ. ಅದನ್ನು ಮತ್ತೆ ಕಂಡುಕೊಳ್ಳುವುದು ಸುಲಭವಲ್ಲ” ಎಂದು ಮತ್ತೊಬ್ಬರು ಹೇಳಿದ್ದಾರೆ.