ಚಿತ್ರಕಥಾಸಾಗರ
ಪತ್ರಿಕಾಗೋಷ್ಠಿಗೆ ತಾವು ಬರೆದ ಚಿತ್ರಕಥೆಗಳನ್ನು ಹೊತ್ತು ತರುವ ಇಂಥವರು ಅಪರೂಪವೇ ಬಿಡಿ. ತಮ್ಮ ಸಿನಿಮಾದ ಆರಂಭದಲ್ಲಿ ನಿರ್ದೇಶಕರು ಚಿತ್ರದ ಎಲ್ಲಾ ವಿವರಗಳನ್ನೂ...
ಚಿತ್ರರಂಗಕ್ಕೆ ಕನಸುಗಳನ್ನು ಹೊತ್ತು ಬರುವ ಹಲವು ಜನರನ್ನು ಕಾಣಬಹುದು. ಆದರೆ ಪತ್ರಿಕಾಗೋಷ್ಠಿಗೆ ತಾವು ಬರೆದ ಚಿತ್ರಕಥೆಗಳನ್ನು ಹೊತ್ತು ತರುವ ಇಂಥವರು ಅಪರೂಪವೇ ಬಿಡಿ. ತಮ್ಮ ಸಿನಿಮಾದ ಆರಂಭದಲ್ಲಿ ನಿರ್ದೇಶಕರು ಚಿತ್ರದ ಎಲ್ಲಾ ವಿವರಗಳನ್ನೂ ಕೊಟ್ಟು, ಇವರು ನಮ್ಮ ನಿರ್ಮಾಪಕರು ಎಂದು ಹೇಳುವುದು ವಾಡಿಕೆ. ಆದರೆ 'ನಿಯಮಗಳಿರುವುದೇ ಮುರಿಯಲಿಕ್ಕೆ' ಎಂಬ ಹುಮ್ಮಸ್ಸಿನಲ್ಲೋ ಏನೋ ಈ ಚಿತ್ರದ ನಿರ್ದೇಶಕ ಶಿವಕುಮಾರ್ ನಿರ್ಮಾಪಕರಿಲ್ಲದೆ 'ಸಾಗುವ ದಾರಿಯಲ್ಲಿ' ಎಂಬ ತಮ್ಮ ಚಿತ್ರವನ್ನು ಘೋಷಣೆ ಮಾಡಿದ್ದಾರೆ.
ಅಂದಹಾಗೆ ಶಿವಕುಮಾರ್ ತಮ್ಮ ಚಿತ್ರದ ಆರಂಭವನ್ನು ಘೋಷಣೆ ಮಾಡಲು ಬಳಸಿಕೊಂಡಿರುವುದು ತಮ್ಮ ಚಿತ್ರದ ಹಾಡುಗಳನ್ನು. ಅದೂ ಕೂಡ ಚಿತ್ರದ ಎಲ್ಲಾ ಹಾಡುಗಳನ್ನು ಸಿಡಿ ರೂಪದಲ್ಲಿ ತಂದಿಲ್ಲ ಅವರು. ಅದಕ್ಕೆ ಬದಲಾಗಿ ಹಾಡುಗಳ ಹೈಲೈಟ್ಸ್ ಎನ್ನುವಂತೆ ಸಿಡಿಯಲ್ಲಿ ಕೆಲವು ಹಾಡುಗಳ ಕೊಡುಗೆ ನೀಡಿದ್ದಾರೆ. ಈ ಹಾಡುಗಳನ್ನು ಕೇಳಿದವರು ಅವು ಇಷ್ಟವಾದರೆ ಅವರೇ ಈ ಚಿತ್ರದಲ್ಲಿ ಹಣ ಹೂಡಿ ನಿರ್ಮಾಪಕರಾಗಿ, ತಮ್ಮ ದಾರಿಗೆ ದೀಪವಾಗುತ್ತಾರೆ ಎಂಬ ನಂಬಿಕೆ ಶಿವಕುಮಾರ್ ಅವರದು.
ದೂರದರ್ಶನದಲ್ಲಿ ನಿರೂಪಕರಾಗಿ ಕೆಲಸ ಮಾಡಿದ ಅನುಭವ ಇರುವ ಶಿವಕುಮಾರ್ ಅವರ ಸಾಗುವ ದಾರಿಯಲ್ಲಿ ಏನೇನಿದೆ ಎಂದರೆ ಅದು ಉತ್ತರಿಸಲು ಕಷ್ಟವಾಗಬಹುದಾದ ಪ್ರಶ್ನೆ. ಅಂದಿನ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಿದಾಗ ಮನುಷ್ಯ, ಪ್ರಾಣಿಗಳು ಎಲ್ಲರನ್ನೂ ಒಂದೆಡೆ ಸೇರಿಸಿದಂಥ ಒಂದು ಪೋಸ್ಟರ್ ಮಾಡಿ ಹಾಕಿದ್ದ ಅವರು ರೈತ, ಸೈನಿಕರ ಜೀವನದ ಬಗ್ಗೆ ಮತ್ತು ಅವರ ಕಷ್ಟಗಳ ಸಂಪೂರ್ಣ ವಿವರಗಳನ್ನು ಕೊಟ್ಟು ಚಿತ್ರದ ದೃಶ್ಯಗಳನ್ನು ವಿವರಿಸುವ ಉತ್ಸಾಹವನ್ನೂ ತೋರಿಸಿದರು. ಅಂದಹಾಗೆ 'ಸಾಗುವ ದಾರಿಯಲ್ಲಿ' ಪ್ರಾಯಣ ದೊಡ್ಡದಿದೆ.
ಇದು ಮೂರು ಭಾಷೆಗಳಲ್ಲಿ ತಯಾರಾಗುವ ಚಿತ್ರವಂತೆ. ಹಾಗಾಗಿ ಒಂದೇ ಸಿಡಿಯಲ್ಲಿ ಕನ್ನಡ, ತೆಲುಗು, ತಮಿಳು ಭಾಷೆಯ ಹಲವು ಹಾಡುಗಳಿವೆ. 'ಒಂದೇ ಟ್ಯೂನಿನ ನಾಲ್ಕು ಮುಖಗಳು' ಎಂದು ಕೊಂಡುಕೊಂಡವರು ಸಂತೋಷಪಡಬಹುದು. ಸದ್ಯಕ್ಕೆ ಹಿಂದಿಯಲ್ಲಿ ಸಿನಿಮಾ ಮಾಡುವ ಯೋಚನೆ ಇಲ್ಲದಿದ್ದರೂ ಸಿಡಿಯಲ್ಲಿ ಎರಡು ಹಿಂದಿ ಹಾಡು ಸೇರಿಸಿರುವ ಶಿವಕುಮಾರ್, ಈ ಸಿಡಿ ತಮಗೆ ನಿರ್ಮಾಪಕರನ್ನು ಕೊಡಿಸುತ್ತದೆ ಎಂಬ ನಂಬಿಕೆಯಲ್ಲಿದ್ದಾರೆ. ಸಿಡಿಯಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಡುಗಳೂ ಇರುವುದರಿಂದ ಶಿವಕುಮಾರ್ ಕೇವಲ ಆರುಕೋಟಿ ಕನ್ನಡಿಗರನ್ನು ಮಾತ್ರ ನಂಬಿಕೊಂಡಿಲ್ಲ ಎಂಬುದು ಸ್ಪಷ್ಟ. ಅದರರ್ಥ, ತಮಿಳು ತೆಲುಗಿನಿಂದಲೂ ಅವರು ನಿರ್ಮಾಪಕರನ್ನು ಅಪೇಕ್ಷಿಸುತ್ತಿದ್ದಾರೆ.
ಇನ್ನು, ಶಿವಕುಮಾರ್ ಬಳಿ 'ಸಾಗುವ ದಾರಿಯಲ್ಲಿ' ಒಂದೇ ಅಲ್ಲದೆ ಸುಮಾರು 80 ಚಿತ್ರಕಥೆಗಳ ಭಂಡಾರವೇ ಇದೆ. ಪತ್ರಿಕಾಗೋಷ್ಠಿಗೆ ಆ ಎಲ್ಲ ಚಿತ್ರಕಥೆಗಳನ್ನು ಹೊತ್ತು ತಂದಿದ್ದ ಶಿವಕುಮಾರ್ ಯಾರಾದರೂ ನಿರ್ಮಾಪಕರಿಗೆ ಆಸಕ್ತಿ ಇದ್ದರೆ ತಮ್ಮನ್ನು ಸಂಪರ್ಕಿಸಬಹುದು ಎಂಬ ಸಂದೇಶವನ್ನೂ ನೀಡುತ್ತಾರೆ.
- ಹ್ಯಾರಿ