ನೈಸ್ ದಿಲ್ ವಾಲಾ
'ದಿಲ್‌ವಾಲಾ' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿ. ಸುಮಂತ್ ಶೈಲೇಂದ್ರ ಮತ್ತು ರಾಧಿಕಾ ಪಂಡಿತ್ ಅಭಿನಯದ ಹಾಡೊಂದಕ್ಕೆ ಅನಿಲ್‌ಕುಮಾರ್ ನೈಸ್‌ರೋಡ್‌ನ ಸಮೀಪ...
ಮಾಲಾಶ್ರೀ ಅಭಿನಯದ 'ಶಕ್ತಿ' ಚಿತ್ರದ ನಿರ್ದೇಶಕ ಅನಿಲ್‌ಕುಮಾರ್ ಈಗ ತಮ್ಮ 'ದಿಲ್‌ವಾಲಾ' ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಬ್ಯುಸಿ.
ಸುಮಂತ್ ಶೈಲೇಂದ್ರ ಮತ್ತು ರಾಧಿಕಾ ಪಂಡಿತ್ ಅಭಿನಯದ ಹಾಡೊಂದಕ್ಕೆ ಅನಿಲ್‌ಕುಮಾರ್ ನೈಸ್‌ರೋಡ್‌ನ ಸಮೀಪ ಭರ್ಜರಿ ಸೆಟ್ ಹಾಕಿಸಿದ್ದರು. ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಹೊಸಕೆರೆಹಳ್ಳಿಯ ಸಮೀಪ ಈ ಸೆಟ್ ಹಾಕಲು ತೆಗೆದುಕೊಂಡ ಸಮಯ ಬರೋಬ್ಬರಿ 25 ದಿನಗಳು. ಅದಕ್ಕೆ ಕೆಲಸ ಮಾಡಿದ್ದು 40 ಮಂದಿ.
ಕಾಲೇಜಿನ ದಾರಿ, ಕೆಲವು ಅಂಗಡಿಗಳು, ಬಸ್‌ಸ್ಟಾಪ್ ಎಲ್ಲವನ್ನೂ ಒಳಗೊಂಡ ಈ ಸೆಟ್‌ನಲ್ಲಿ ಸುಮಂತ್, ರಾಧಿಕಾ ಕುಣಿದಿದ್ದು ಅರ್ಜುನ್ ಜನ್ಯ ಸಂಗೀತಕ್ಕೆ ಯೋಗರಾಜ್ ಭಟ್ ಅವರು ಬರೆದ ಹಾಡಿಗೆ. ಅದೇ ಜಾಗದಲ್ಲಿ ಇನ್ನೂ ಹದಿನೈದು ದಿನಗಳ ಕಾಲ ಶೂಟಿಂಗ್ ಪ್ಲ್ಯಾನ್ ಹಾಕಿಕೊಂಡಿರುವ ಅನಿಲ್, ಅಲ್ಲಿ ಚಿತ್ರದ ಕೆಲವು ದೃಶ್ಯಗಳನ್ನೂ ಚಿತ್ರೀಕರಿಸಲಿದ್ದಾರಂತೆ.
'ಆಟ'ದ ನಂತರ ಸುಮಂತ್ ನಟನೆಯಲ್ಲಿ ಸಾಕಷ್ಟು ಸುಧಾರಿಸಿದ್ದಾರೆ, ಇನ್ನು ರಾಧಿಕಾ ಪಂಡಿತ್‌ರ ಪ್ರತಿಭೆಯ ಬಗ್ಗೆ ಹೇಳುವುದೇ ಬೇಡ ಎಂದ ಅನಿಲ್ ಈಗಾಗಲೇ 'ದಿಲ್‌ವಾಲಾ' ಚಿತ್ರದ ಶೇಕಡಾ 30ರಷ್ಟು ಚಿತ್ರೀಕರಣ ಮುಗಿಸಿದ್ದಾರೆ.
ಸುಮಂತ್‌ರೊಂದಿಗೆ ಎಲ್ಲವೂ ಸ್ಮೂತ್ ಆಗಿ ಹೋಗುತ್ತಿದೆ ಎಂದ ರಾಧಿಕಾ ಪಂಡಿತ್ ಹೊಸ ಪ್ರತಿಭೆಗಳೊಂದಿಗೆ ಕೆಲಸ ಮಾಡುವ ಖುಷಿಯನ್ನು ಆನಂದಿಸುತ್ತಿದ್ದಾರಂತೆ. ಈ ಚಿತ್ರ ಸುಮಂತ್‌ಗೆ ಖಂಡಿತಾ ಬ್ರೇಕ್ ಕೊಡುತ್ತದೆ ಎಂಬ ವಿಶ್ವಾಸ ಅವರದ್ದು. ಇಷ್ಟು ದಿನದ ಚಿತ್ರೀಕರಣದ ನಂತರ ನನ್ನ ಆತ್ಮವಿಶ್ವಾಸ ಹೆಚ್ಚಿದೆ ಎನ್ನುವ ಸುಮಂತ್ ಕೂಡಾ, ಚಿತ್ರ ಹಿಟ್ ಆಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸುತ್ತಾರೆ.