ಯಾರಿವನು?... ಈ ಮನ್ಮಥನು...
'ನಾನು ಹೇಳಿದ್ದು ಸುಳ್ಳಾದರೆ ನನ್ನ ಹೆಸರು ಬದಲಾಯಿಸಿಕೊಳ್ತೀನಿ' ಅನ್ನೋದು ಸಿನಿಮಾ ಹೀರೋಗಳ ಡೈಲಾಗು. ಆದರೆ ಇದು ಆ ಕೇಸಲ್ಲ. 'ಚಾರ್ಮಿನಾರ್' ಚಿತ್ರ ನೋಡಿ...
'ನಾನು ಹೇಳಿದ್ದು ಸುಳ್ಳಾದರೆ ನನ್ನ ಹೆಸರು ಬದಲಾಯಿಸಿಕೊಳ್ತೀನಿ' ಅನ್ನೋದು ಸಿನಿಮಾ ಹೀರೋಗಳ ಡೈಲಾಗು. ಆದರೆ ಇದು ಆ ಕೇಸಲ್ಲ. 'ಚಾರ್ಮಿನಾರ್' ಚಿತ್ರ ನೋಡಿ ಎಲ್ಲರೂ 'ಇದು ನಂದೇ ಚಿತ್ರ' ಎನ್ನುತ್ತಿರುವುದಕ್ಕೂ ಇದಕ್ಕೂ ಬಹಳ ವ್ಯತ್ಯಾಸ ಇದೆ. ಆದರೆ ಈ ಚಿತ್ರದ ವಿಷಯದಲ್ಲೂ ಕೆಲವು ಜನ 'ಇದು ನಂದು' ಎಂದಿದ್ದಕ್ಕೆ ಮದನ್ಪಟೇಲ್ ತಮ್ಮ 'ಸತ್ಯಾನಂದ' ಚಿತ್ರದ ಹೆಸರು ಬದಲಾಯಿಸಿದ್ದಾರೆ. 'ಇವನಾರವ ಇವನಾರವ' ಎಂದು 'ಸತ್ಯಾನಂದ' ಚಿತ್ರದ ಶೀರ್ಷಿಕೆ ನೋಡಿದವರು ತಲೆಕೆಡಿಸಿಕೊಳ್ಳುತ್ತಿದ್ದರೆ, ಕೆಲವರಿಗೆ 'ಇವ ನಮ್ಮವ ಇವ ನಮ್ಮವ' ಎನಿಸಿದ್ದೇ ಸಮಸ್ಯೆಯಾಗಿ, ಚಿತ್ರದ ಹೆಸರು ಬದಲಾವಣೆಗೆ ಒತ್ತಾಯ ತಂದು ಕೇಸು ಹಾಕಿದ್ದರಿಂದ, ತಮ್ಮ ಚಿತ್ರದ ಶೀರ್ಷಿಕೆ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಬಂದಿತ್ತು ಮದನ್ಪಟೇಲರಿಗೆ. ಹಾಗಾಗಿ ತಮ್ಮ ಸತ್ಯಾನಂದನನ್ನು 'ಯಾರಿವನು?' ಎಂದು ಮರುನಾಮಕರಣ ಮಾಡಿದ್ದಾರೆ ಮದನ್ಪಟೇಲ್. ಆದರೆ 'ಸತ್ಯಾನಂದ ಯಾರು?' ಎಂಬ ಸತ್ಯ ಯಾರಿಗೂ ಗೊತ್ತಿಲ್ಲದಂಥದ್ದೇನಲ್ಲ ಬಿಡಿ. ಆದರೂ 'ಯಾರಿವನು?' ಎಂಬ ಶೀರ್ಷಿಕೆ ಕೊಟ್ಟು ಕೆಳಗೆ 'ನೀವೇ ಹೇಳಿ' ಎಂಬ ಅಡಿಬರಹ ಕೊಟ್ಟು ತೃಪ್ತಿಪಟ್ಟುಕೊಂಡಿದ್ದಾರೆ ಮದನ್. ಅಂತೂ 'ಬಿಟ್ಟರೂ ಬಿಡದಿ ಮಾಯೆ' ಎನ್ನುವಂಥ ಹಿಸ್ಟರಿ ಇರುವ ಚಿತ್ರ ಮಾಡಿ ತಮ್ಮ ಶೀರ್ಷಿಕೆಯನ್ನು ಮಾತ್ರ ಬಿಟ್ಟುಕೊಟ್ಟಿದ್ದಾರೆ ಅವರು. ಆದರೆ ಸತ್ಯಾನಂದನ ಎಲ್ಲ ಲೀಲೆಗಳನ್ನು ಬಲ್ಲವರು 'ಯಾರಿವನು?' ಎಂಬ ಶೀರ್ಷಿಕೆಗೆ 'ನೀವೇ ಹೇಳಿ' ಎನ್ನುವುದಕ್ಕಿಂತ 'ಈ ಮನ್ಮಥನು' ಎಂಬ ಅಡಿಬರಹ ಹೆಚ್ಚು ಸೂಕ್ತವಾಗಿರುತ್ತಿತ್ತೇನೋ ಎನ್ನುತ್ತಿರುವುದು ಸುಳ್ಳಲ್ಲ.
ಹೊಸ ರೆಕಾರ್ಡ್
ಹಾಡು: ಬಾನಲಿ ಬದಲಾಗೋ
ಚಿತ್ರ: ಸಿಂಪಲ್ ಆಗೊಂದ್ ಲವ್ ಸ್ಟೋರಿ
ಸಾಹಿತ್ಯ: ಸಿದ್ದು ಕೋಟೆಪುರ
ಸಂಗೀತ: ಬಿ.ಜೆ. ಭರತ್
ಗಾಯಕರು: ಸೋನು ನಿಗಮ್
ಬಾನಲಿ ಬದಲಾಗುವ ಬಣ್ಣವೇ ಭಾವನೆ
ಹೃದಯವೂ ಹಗುರಾಗಿ ಹಾರುವ ಸೂಚನೆ
ಮನದ ಹೂಬನದೀ, ನೆನಪೇ ಹೂವಾಯ್ತು
ಅದೇ ಮಾತು, ಅದೇ ನೋಟ
ಮರೆಯದೇ ಕಾಡಿದೆ
ಅದೇ ಗಾನ, ನಗೆ ಬಾಣ
ಎದೆಯಲೇ ನಾಟಿದೆ
ಈ ಹಾಡಿನ ಚಿತ್ರೀಕರಣವನ್ನು ನೋಡಿ ಅದೇ ಈ ಹಾಡಿನ ವಿಶೇಷ ಎಂದುಕೊಂಡರೆ ಅದು ನಿಜವಲ್ಲ. ಹೊಸ ಪ್ರತಿಭೆ ಸಿದ್ದು ಕೋಟೆಪುರ ಬರೆದಿರುವ ಈ ಹಾಡಿನ ಸಾಹಿತ್ಯವೇ ಆ ಚಿತ್ರೀಕರಣಕ್ಕೆ ಸ್ಫೂರ್ತಿ ನೀಡಿದೆ ಎನಿಸಿದರೆ ತಪ್ಪಿಲ್ಲ. ಹಾರುವ ವಸ್ತುಗಳ ರೂಪಕ ಬಳಸಿ, ಹೃದಯ ಹಗುರಾಗುವ ಸೂಚನೆ ಕೊಡುವ ಹಾಡಿಗೆ ಸೋನು ನಿಗಮ್ ಉಸಿರಾಗಿದ್ದಾರೆ. 'ಸರದಿಯಲ್ಲಿ ಹೊಸ ಬಯಕೆ ಸರಿದಾಡಿದೆ, ಹುಡುಕಿ ನನ್ನ ಹುಡುಕಿ, ನಟಿಸು ಕಣ್ಣ ಮಿಟುಕಿ' ಎಂಬ ಸಾಲು ನೋಡಿ ಅದು 'ಮಿಟುಕಿಸಿ' ಆಗಬೇಕಿತ ್ತಲ್ಲವೇ ಎನ್ನುವಷ್ಟರಲ್ಲೇ 'ಗಮನಿಸು ಪ್ರೇಮಭಾಷೆ, ಪದಗಳ ನೋಡದೆ' ಎಂಬ ವಿಶೇಷ ಸೂಚನೆ ಸಿಗುತ್ತದೆ. ರಕ್ಷಿತ್, ಶ್ವೇತಾ ಅಭಿನಯದ ಹಾಡಿನ ಛಾಯಾಗ್ರಹಣ ಕೂಡ ಮನೋಹರ್ ಜೋಷಿ ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಭರತ್ ಅವರ ಟ್ಯೂನ್ನಲ್ಲಿ 'ಅದೇ ಮಾತು ಅದೇ ನೋಟ, ಮರೆಯದೇ ಕಾಡಿದೆ' ಎನ್ನುವ ಸಾಲಿಗೆ ಗುಂಗು ಹಿಡಿಸುವ ಸಾಮರ್ಥ್ಯವಿದೆ. ಒಟ್ಟಾರೆ ಎಲ್ಲ ವಿಭಾಗಗಳಲ್ಲೂ ಗೆಲ್ಲುವ ಅಪರೂಪದ ಹಾಡು.
ಹಳೆ ರೆಕಾರ್ಡ್
ಹಾಡು: ಹಾಡು ಎಂದ ಕೂಡಲೇ
ಚಿತ್ರ: ಕನಸಲೂ ನೀನೆ ಮನಸಲೂ ನೀನೆ
ಸಾಹಿತ್ಯ: ಕಲ್ಯಾಣ್
ಸಂಗೀತ: ಚೈತನ್ಯ
ಗಾಯಕರು: ಎಸ್.ಪಿ.ಬಾಲಸುಬ್ರಮಣ್ಯಂ
ಹಾಡು ಎಂದ ಕೂಡಲೇ ಹಾಡದು ಯಾವ ಕೋಗಿಲೆ
ಸ್ನೇಹದ ಚೈತ್ರದಲಿ, ಚಿಗುರುವ ಆಸೆಯಲಿ
ಪ್ರೀತಿಯ ಮಧುರ ಗಾನ ಅರಳಬೇಡವೆ?
ಪ್ರೀತಿ ಮಾಡೊ ಪ್ರವೀಣ
ತಿಳಿಯೊ ನೀನು ನಿಜಾನ
ಒಲವೆ ಕುಸುಮ ಕಿಶೋರಿ, ಅದಕೆ ಯಾಕೆ ಕಠಾರಿ
ಜಗದಾ ಪ್ರೇಮ ನಿಯಮ ಮೀರಬೇಡವೊ
ಹಾಡು ಹುಟ್ಟಿದ ಸಮಯ ಹೇಳುವುದು ಕಷ್ಟವಾಗಲಾರದು ಆದರೆ ಪ್ರೀತಿ ಹುಟ್ಟುವ ಸಮಯ ಹೇಳಲಾಗದು ಎನ್ನುವ ಹಾಡಿದು. ಹಾಡುವ ಕೋಗಿಲೆಗೆ ಮೂಡು ಬಂದಾಗ ಮಾತ್ರ ಪ್ರೇಮ ಎನ್ನುವ ಹಾಡಿಗೆ ಕೋಗಿಲೆಯಾಗಿರುವುದು ಎಸ್.ಪಿ.ಬಾಲಸುಬ್ರಮಣ್ಯಂ. ಹಿನ್ನೆಲೆ ಗಾಯನದಲ್ಲೂ ಕೂಡ ಮತ್ತು ತೆರೆಯ ಮೇಲೂ ಕೂಡಾ. 'ಕನಸಲೂ ನೀನೆ ಮನಸಲೂ ನೀನೆ' ಚಿತ್ರದಲ್ಲಿ ನಾಯಕಿಯನ್ನು ಪ್ರೀತಿಸುವ ವಿಲನ್(?)ಪ್ರಕಾಶ್ ರೈ ಗಾಯಕ ಎಸ್.ಪಿ.ಬಿ ಅವರನ್ನು ಅಪಹರಿಸಿ ಅವರ ಮೂಲಕ ನಾಯಕಿಗೆ ತನ್ನ ಪ್ರೀತಿಯ ಭಾವನೆಗಳನ್ನು ಹೇಳಿಸುವ ವಿಶೇಷ ಎನಿಸುವ ಸನ್ನಿವೇಶ ಅದು. ಜಗದಾ ಪ್ರೇಮ ನಿಯಮ ಮೀರಬೇಡವೊ ಎನ್ನುವ ಕಲ್ಯಾಣ್ ತಾವು ಬರೆದಿರುವ ಸಾಹಿತ್ಯದಲ್ಲೂ ಪ್ರೇಮಗೀತೆಗಳ ನಿಯಮ ಮೀರಿಲ್ಲ. ಅದಕ್ಕೆ ತಕ್ಕಂತಿರುವುದು ಚೈತನ್ಯ ಎಂಬ ಹೆಸರಿನಿಂದ ಸಂಗೀತ ನೀಡುತ್ತಿದ್ದ ಗಾಯಕ ಎಲ್.ಎನ್.ಶಾಸ್ತ್ರಿ ಅವರ ಸಂಗೀತ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.