ಮುಂಬೈ: ಬಹು ನಿರೀಕ್ಷಿತ 'ಪಿಕೆ' ಚಲನಚಿತ್ರ ನಾಳೆ ದೇಶಾದ್ಯಂತ ದಾಖಲೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ. ನಟ ಅಮೀರ್ ಖಾನ್ ಆಗಲಿ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಆಗಲಿ ತಮ್ಮ ಕೆಲಸದಲ್ಲಿ ಕಲಾತ್ಮಕವಾಗಿ ವಿಶಿಷ್ಟವಾದದ್ದನ್ನು ರೂಪಿಸುವಲ್ಲಿ ನಿಸ್ಸೀಮರು. ಇದಕ್ಕಾಗಿ ಕೆಲವೊಮ್ಮೆ ಅವರು ಬೇರೆ ಕಡೆಗಳಿಂದ ಸ್ಪೂರ್ತಿ ಪಡೆಯುವುದುಂಟು. ಇವರಿಬ್ಬರೂ ಒಟ್ಟಿಗೆ ಸೇರಿರುವ 'ಪಿಕೆ' ಚಲನಚಿತ್ರದಲ್ಲಿ, ಸಿನೆಮಾದ ಭಿತ್ತಿ ಚಿತ್ರ ಹಲವರ ಗಮನ ಸೆಳೆದಿತ್ತು. ಅಮೀರ್ ಖಾನ್ ಬಹುತೇಕ ನಗ್ನವಾಗಿ ಕಾಣಿಸಿಕೊಂಡಿದ್ದ ದೃಶ್ಯದ ಪೋಸ್ಟರ್ ಅಂತರ್ಜಾಲ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿತ್ತು. ಈಗ ಈ ಪೋಸ್ಟರ್ ಹಿಂದಿನ ಸ್ಫೂರ್ತಿ ಹೊರಬಿದ್ದಿದೆ.
೧೯೭೩ ರಲ್ಲಿ ಪೋರ್ಚುಗೀಸ್ ನ ಸಂಗೀತಕಾರ ಕ್ವಿಂ ಬರ್ರೆಇರೋಸ್ ತನ್ನ ಸಂಗೀತದ ಆಲ್ಬಂ ನನ್ನು ಪ್ರಚಾರ ಮಾಡಲು ಇಂತ ಭಿತ್ತಿಚಿತ್ರವನ್ನು ಸಿದ್ಧಪಡಿಸಿದ್ದ. ಒಂದು ಸಂಗೀತ ವಾದ್ಯವನ್ನಷ್ಟೆ ಅಡ್ಡಮಾಡಿ ಬಹುತೇಕ ನಗ್ನವಾಗಿ ನಿಂತಿರುವ ಕ್ವಿಂ ಪೋಸ್ಟರ್ ಅನ್ನೇ 'ಪಿಕೆ' ಪೋಸ್ಟರ್ ಹೋಲುತ್ತಿರುವುದು ಅನಿರೀಕ್ಷಿತ ಅಥವಾ ಕಾಕತಾಳಿಯವೇನಲ್ಲ ಎಂದುದು ಸಿನೆಮಾ ಪಂಡಿತರ ವಿಶ್ಲೇಷಣೆ. ಇಲ್ಲಿ ಕೂಡ ಅಮೀರ್ ಖಾನ್ ರೇಡಿಯೋ ಒಂದನ್ನು ಅಡ್ಡ ಹಿಡಿದು ನಗ್ನವಾಗಿದ್ದಾರೆ. ಒಟ್ಟಿನಲ್ಲಿ ಈ ಪೋಸ್ಟರ್ ನಿಂದ ಸಿನೆಮಾ ಪ್ರಚಾರ ಗಿಟ್ಟಿಸಿದೆ. ಚಲನಚಿತ್ರದಲ್ಲಿ ಕಥೆ-ಸಂಗೀತ ಇತ್ಯಾದಿ ಬೇರೆ ಯವ್ಯಾವುದರಿಂದ ಸ್ಫೂರ್ತಿ ಪಡೆದಿವೆಯೊ ಕಾದು ನೋಡಬೇಕಷ್ಟೇ!