ಕನಕದಾಸ ಧಾರಾವಾಹಿ ಚಿತ್ರೀಕರಣದ ಸಾಂಧರ್ಭಿಕ ಚಿತ್ರ 
ಸಿನಿಮಾ ಸುದ್ದಿ

ಶಿವಣ್ಣ ಮಾಡಬೇಕಿದ್ದ ಚಿತ್ರ ಈಗ ಧಾರಾವಾಹಿ

ಧಾರಾವಾಹಿಗಳಲ್ಲಿ ವಿಭಿನ್ನತೆಯ ಕೊರತೆ ಕಾಡ್ತಾ ಇದೆ. ಸುತ್ತಿ ಬಳಸಿ....

ಧಾರಾವಾಹಿಗಳಲ್ಲಿ ವಿಭಿನ್ನತೆಯ ಕೊರತೆ ಕಾಡ್ತಾ ಇದೆ. ಸುತ್ತಿ ಬಳಸಿ ಮತ್ತೆ ನಾಲ್ಕು ಗೋಡೆಗಳ ಮಧ್ಯೆ ಅತ್ತೆ ಸೊಸೆ ಜಗಳ, ಅನೈತಿಕ ಸಂಬಂಧಗಳು, ಹೆಂಗಸರ ವಿಲನಿಸಮ್ಮು....ಇವು ಬಿಟ್ರೆ ಕೋರ್ಟು, ಕಟಕಟೆ, ವ್ಯಾಜ್ಯ ಇವೇ ಆಗೋಯ್ತು ಎಂದು ಗೊಣಗಿಕೊಳ್ಳುತ್ತಲೇ ಅವವೇ ಸೀರಿಯಲ್ಲುಗಳನ್ನು ನೋಡುವ ಅನಿವಾರ್ಯತೆಗೆ ಒಳಗಾಗಿರುವ ವೀಕ್ಷಕರಿಗೆ ರಿಯಾಲಿಟಿ ಶೋಗಳತ್ತ ಮುಖ ಮಾಡಿದರೂ ಬರೀ ಟಾಸ್ಕು, ಕಿರಿಕ್ಕು, ಡ್ರಾಮಾಗಳ ಕಿರಿಕಿರಿ.

ಇಂಥ ಸಮಯದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಮನಸಿಗೆ ಮುದಕೊಡುವ ಪೌರಾಣಿಕ, ಐತಿಹಾಸಿಕ ಅಥವಾ ಹಳೆಯ ಕಾಲದ ಕಟ್ಟುಕತೆಗಳ ಧಾರಾವಾಹೀಗಳು ತಂಗಾಳಿಯಂತೆ ಬೀಸಿ ಬರುವುದುಂಟು. ಸುವರ್ಣವಾಹಿನಿಯ ರಾಘವೇಂದ್ರ ವೈಭವ, ಈ ಟಿವಿಯ ಹೆಳವನಕಟ್ಟೆ ಗಿರಿಯಮ್ಮ ಥರದ ಧಾರಾವಾಹಿಗಳು ಪರಿಪೂರ್ಣವಾಗಿ ವೀಕ್ಷಕರಿಗೆ ತೃಪ್ತಿ ನೀಡಿದ್ದರೆ, ಸೀತೆ, ಮಹಾಭಾರತ, ಶ್ರೀನಿವಾಸ ಕಲ್ಯಾಣ ಥರದ ಧಾರಾವಾಹಿಗಳು ಮೇಕಿಂಗ್ ದೃಷ್ಟಿಯಿಂದಲೋ, ಕಥೆಯಲ್ಲಿ ಲೋಪದೋಷಗಳಿಂದಲೋ, ಸಮರ್ಥ ನಟನೆಯ ಕೊರತೆಯಿಂದಲೋ ವೀಕ್ಷಕರ ವಿರೋಧಕ್ಕೂ ಒಳಗಾಗಿದ್ದಿದೆ. ಸಾಯಿಬಾಬಾ ಥರದ ಧಾರಾವಾಹಿಗಳು ಸಾಯಿಬಾಬಾಗೆ ಅಪಾರ ಸಂಖ್ಯೆಯ ಭಕ್ತರಿದ್ದಾಗ್ಯೂ ಜನರನ್ನು ಸೆಳೆಯದೇ ಹೋದದ್ದಕ್ಕೆ ಕಾರಣಗಳು ಹಲವಿದ್ದವು. ಹಾಗಾಗಿ ಸಾಮಾಜಿಕ ಧಾರಾವಾಹಿ ಮಾಡೋದರ ಹತ್ತು ಪಟ್ಟು ಹೆಚ್ಚು ಸವಾಲು ಪೌರಾಣಿಕ-ಐತಿಹಾಸಿಕ ಧಾರಾವಾಹಿ ಮಾಡುವುದಕ್ಕೆ ಇದೆ. ಇಷ್ಟೆಲ್ಲ ಪೀಠಿಕೆ ಯಾಕಂದ್ರೆ, ವೀಕ್ಷಕರನ್ನು ಹದಿನಾರನೇ ಶತಮಾನಕ್ಕೆ ಕರೆದೊಯ್ಯಲು ಕನಕದಾಸರು ಮರುಜನ್ಮ ತಾಳಿ ಬರುತ್ತಿದ್ದಾರೆ.

ಕಸ್ತೂರಿ ವಾಹಿನಿಗಾಗಿ, ಹಿರಿಯ ನಟ ಶ್ರೀನಿವಾಸಮೂರ್ತಿ ಕನಕದಾಸ ಧಾರಾವಾಹಿ ನಿರ್ದೇಶಿಸುತ್ತಿರುವ ಸುದ್ದಿ ಪ್ರಕಟವಾದಾಗ ಹಲವು ವೀಕ್ಷಕರು ಅದನ್ನು ಸ್ವಾಗತಿಸಿ ಪ್ರತಿಕ್ರಿಯಿಸಿದ್ದರು. ಧಾರಾವಾಹಿಯ ಕುರಿತು ಶ್ರೀನಿವಾಸಮೂರ್ತಿಯವರೊಂದಿಗೆ ಒಂದು ಮಾತುಕತೆ.

ಕನಕದಾಸ ಧಾರಾವಾಹಿ ಶುರುಮಾಡಿದ ಸಿಹಿಸುದ್ದಿ ಪ್ರಕಟವಾಗಿ ಬಹಳ ದಿನಗಳಾಯ್ತು. ಪ್ರಸಾರ ಯಾಕಿನ್ನೂ ಶುರುವಾಗಿಲ್ಲ? ಹೌದು, ಆಗಸ್ಟ್ ಒಂದರಿಂದ ಚಿತ್ರೀಕರಣ ಶುರುಮಾಡಿದೆ. ಪ್ರತಿ ಎಪಿಸೋಡ್ ಕೂಡ ಅಚ್ಚುಕಟ್ಟಾಗಿ, ಲೋಪದೋಷಗಳಿಲ್ಲದೆ ಬಂದಿದೆ ಅನ್ನೋದು ಖಾತ್ರಿಯೆನಿಸಿದ ಮೇಲೆಯೇ ಅದನ್ನು ಅಂತಿಮಗೊಳಿಸುತ್ತಾ ಇದ್ದೇನೆ.

ಕಡೆಯಪಕ್ಷ ನೂರೈವತ್ತು ಕಂತುಗಳನ್ನು ಕೈಲಿಟ್ಟುಕೊಂಡು ನಂತರ ಪ್ರಸಾರ ಮಾಡೋಣ ಎಂಬುದು ನನ್ನ ಐಡಿಯ. ವೀಕ್ಷಕರನ್ನು ಹೆಚ್ಚು ಕಾಯಿಸುವುದಿಲ್ಲ. ಜನವರಿ ತಿಂಗಳಿಂದ ಪ್ರಸಾರ ಖಂಡಿತ. ಈಗಾಗಲೇ ಅರವತ್ತೈದು ಕಂತುಗಳಷ್ಟು ಚಿತ್ರೀಕರಣವಾಗಿ ಪರಿಶಷ್ಕರಣೆಯೂ ಆಗಿದೆ.

ಕನಕನ ಕನಸು ಶುರುವಾಗಿದ್ದು ಹೇಗೆ?

ಇದು ನಿನ್ನೆಮೊನ್ನೆಯ ಕನಸಲ್ಲ. ಕನಕದಾಸರ ಕೀರ್ತನೆಗಳು ಮತ್ತು ಬದುಕಿದ ರೀತಿ ಎರಡೂ ಆದರಣೀಯ ಹಾಗೂ ಅನುಕರಣಈಯ. ನಾನು ಹಿಂದೆ ಉದಯಟಿವಿಗೆ ಬಸವಣ್ಣ ಧಾರಾವಾಹಿ ನಿರ್ದೇಶಿಸಿ ಬಸವಣ್ಣನ ಪಾತ್ರ ಮಾಡಿದ್ದೆ. ಕ್ರಾಂತಿಯೋಗಿ ಬಸವಣ್ಣ ಚಿತ್ರದಲ್ಲಿ ನನಗೆ ಬಸವಣ್ಣನ ಪಾತ್ರ. ಮಿಸ್ ಆಗಿ ಬಿಜಳನ ಪಾತ್ರ ಮಾಡುವಂತಾಗಿತ್ತು. ಆಗ ಆದ ನಿರಾಸೆಯನ್ನು ನಾನು ಈ ಧಾರಾವಾಹಿಯ ಮೂಲಕ ನೀಗಿಸಿಕೊಂಡಿದ್ದೆ. ಅದು ಕಲಾವಿದನೊಬ್ಬ ಹಸಿವು ನೀಗಿಸಿಕೊಳ್ಲುವ ಪರಿ. ಅದೇ ರೀತಿ ಕನಕದಾಸರನ್ನು ತೆರೆಗೆ ತರುವ ಕನಸೂ ಕೂಡ.

ನೀವು ಕನಕದಾಸ ಸಿನಿಮಾ ಮಾಡಬೇಕೆಂದಿದ್ದು ಅಲ್ವೇ?

ಹೌದು. ಶಿವರಾಜ್ ಕುಮಾರ್ ಕನಕದಸರ ಪಾತ್ರದಲ್ಲಿ ನಟಿಸಬೇಕು ಎಂಬುದು ನನ್ನ ಹಿರಿದಾಸೆ ಆಗಿತ್ತು. ಅವರು ಈ ಪಾತ್ರವನ್ನು ಅದ್ಭುತವಾಗಿ ಪೋಷಿಸಬಲ್ಲರಾಗಿದ್ದರು. ಆಗಲೇ ಸ್ಕ್ರಿಪ್ಟ್ ರೆಡಿ ಮಾಡಿ ಅವರಿಗೆ ಕಥೆ ವಿವರಿಸಿದ್ದೆ. ತುಂಬ ಇಷ್ಟ ಪಟ್ಟು ಶಿವರಾಜ್ ಕುಮಾರ್ ಸಿನಿಮಾ ಮಾಡೋಕೆ ಒಪ್ಪಿದ್ದರು ಕೂಡ. ಆದರೆ ಒಂದು ಗಂಡುಗಲಿ ಕುಮಾರರಾಮ ಚಿತ್ರದ ಸೋಲು ಅವರನ್ನು ಹೆಜ್ಜೆ ಹಿಂದಿಡುವಂತೆ ಮಾಡಿಬಿಟ್ಟಿತ್ತು. ಅನಿವಾರ್ಯವಾಗಿ ಸಿನಿಮಾದ ಆಸೆ ಕೈ ಬಿಡುವಂತಾಯ್ತು. ಈಗ ಧಾರಾವಾಹಿಯಾಗಿ ಸಾಕಾರಗೊಳ್ಳುತ್ತಿದೆ.

ಅಂದ್ರೆ ಕನಕದಾಸರ ಪಾತ್ರ ನೀವೇ ಮಾಡುತ್ತಿದ್ದೀರಾ?
ಈ ಧಾರಾವಾಹಿಯಲ್ಲಿ ಕನಕರ ಬದುಕಿನ ನಾಲ್ಕು ಘಟ್ಟಗಳ ಚಿತ್ರಣವಿರುತ್ತದೆ. ಬಾಲ್ಯದ ಪಾತ್ರದಲ್ಲಿ ನನ್ನ ಮೊಮ್ಮಗ ಅಂದ್ರೆ ನವೀನ್ ಕೃಷ್ಣನ ಪುತ್ರ ಹರ್ಷಿತ್ ಇದ್ದರೆ, ಫ್ರೌಢಾವಸ್ಥೆಯ ಪಾತ್ರ ನನ್ನ ಎರಡನೇ ಮಗ ನಿಟಿಲ್ ಕೃಷ್ಣ ನಿರ್ವಹಿಸುತ್ತಿದ್ದಾನೆ. ನಂತರದ ಯೌವ್ವನಾವಸ್ಥೆ ಮತ್ತು ಗೃಹಸ್ಥಾಶ್ರಮದ ಪಾತ್ರದಲ್ಲಿ ನವೀನ್ಕೃಷ್ಣ ಕಾಣಿಸಿಕೊಂಡರೆ, ಕನಕರ ಕೊನೆಯ ಹಂತದ ಬದುಕು ನನ್ನ ಅಭಿನಯದಲ್ಲಿ ಅನಾವರಣವಾಗಲಿದೆ. ತೆರೆಯ ಮೇಲೆ ನನ್ನದು ದ್ವಿಪಾತ್ರ. ನಾನು ಶುರುವಿನಲ್ಲಿ ಇನ್ನೊಂದು ಮಹತ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಸುಮಾರು ಇನ್ನೂರೈವತ್ತು ಕಂತುಗಳ ನಂತರ ಕನಕರಾಗಿ ಬರಲಿದ್ದೇನೆ. ತೆರೆಯ ಹಿಂದೆ ನಿರ್ದೇಶನ ಸೇರಿದಂತೆ ಹಲವು ಜವಾಬ್ದಾರಿಗಳಿದ್ದೇ ಇದೆ.

ಚಿತ್ರೀಕರಣ ಹೇಗೆ ಮೂಡಿಬರುತ್ತಿದೆ?

ಇದು ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿಯವರೇ ನಿರ್ಮಾಣ ಮಾಡುತ್ತಿರುವ ಪ್ರಾಜೆಕ್ಟು. ಎಲ್ಲೂ ಕ್ವಾಲಿಟಿ ವಿಚಾರವಾಗಿ ಹೊಂದಾಣಿಕೆ ಮಾಡಿಕೊಳ್ಳದೆ ಸಾವಧಾನವಾಗಿ ವ್ಯವಸ್ಥಿತವಾಗಿ ನಡೆದುಕೊಂಡು ಹೋಗುತ್ತಿದೆ. ಒಟ್ಟಾರೆ ಐದುನೂರು ಎಪಿಸೋಡುಗಳಲ್ಲಿ ಮುಗಿಸುವ ಯೋಜನೆ. ಪ್ರತಿಕ್ರಿಯೆ ಚೆನ್ನಾಗಿದ್ದಲ್ಲಿ ಇನ್ನಷ್ಟು ಮುಂದುವರೆಯಬಹುದು. ಈ ಧಾರಾವಾಹಿ ಮಾಡುತ್ತಿರುವ ಬಗ್ಗೆ ಚಿತ್ರರಂಗದ ಎಲ್ಲ ನಾಯಕ ನಟರು, ನಿರ್ದೇಶಕರು, ರಂಗಭೂಮಿಯವರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಅದನ್ನೆಲ್ಲ ಧಾರಾವಾಹಿ ಶುರುವಾಗುವ ಕೆಲದಿನಗಳ ಮೊದಲು ಪ್ರೊಮೋಷನ್ಗಾಗಿ ಬಳಸುವ ಆಲೋಚನೆಯಿದೆ.

ಕನಕದಾಸರ ಬದುಕಿನ ಚಿತ್ರಣ ಈ ಹಿಂದೆ ರಾಘವೇಂದ್ರ ವೈಭವ ಧಾರಾವಾಹಿಯಲ್ಲೂ ಮೂಡಿಬಂದಿತ್ತು. ಈ ಧಾರಾವಾಹಿಗೆ ಯಾವ ಪುಸ್ತಕವನ್ನು ಆಧಾರ ಮಾಡಿಕೊಂಡಿದ್ದೀರಿ?
ಹೌದು ರಾಘವೇಂದ್ರ ವೈಭವ ಧಾರಾವಾಹಿಯಲ್ಲಿ ಕನಕರಿದ್ದರು, ನಾನೂ ಅದರಲ್ಲಿ ರಾಘವೇಂದ್ರ ಸ್ವಾಮಿಗಳ ಅಜ್ಜನ ಪಾತ್ರದಲ್ಲಿ ನಟಿಸಿದ್ದೆ. ಕನಕದಾಸರ ಸಿನಿಮಾಗೆ ರುದ್ರಮೂರ್ತಿ ಶಾಸ್ತ್ರಿಗಳ ಬಳಿ ಸಂಭಾಷಣೆ ಬರೆಸಿದ್ದೆ. ಆ ನಂತರ ಅವರೇ ಸ್ವ ಇಚ್ಛೆಯಿಂದ ಕನಕದಾಸರ ಬಗ್ಗೆ ಕಾದಂಬರಿ ಬರೆದರು. ಈಗ ಅದನ್ನೇ ಆಧರಿಸಿ ಧಾರಾವಾಹಿ ಮಾಡುತ್ತಿರೋದು.

ಕಾದಂಬರಿಯನ್ನು ಕುಮಾರಸ್ವಾಮಿ ಓದಿ ತುಂಬ ಇಷ್ಟಪಟ್ಟು ಎರಡೇ ದಿನಗಳಲ್ಲಿ ಧಾರಾವಾಹಿ ಮಾಡಿ ಎಂದು ಹಸಿರು ನಿಶಾನೆ ತೋರಿಸಿದರು. ಎಲೆಕ್ಷನ್ನು ಇತ್ಯಾದಿ ಕಾರಣಗಳಿಂದ ಸ್ವಲ್ಪ ತಡವಾಗಿ ಶುರುವಾಯ್ತು. ಆದರೆ ಹೋಮ್ ವರ್ಕ್ ಮಾತ್ರ ತುಂಬ ಶ್ರದ್ಧೆಯಿಂದ ಮಾಡಿದ್ದೇವೆ. ರವೀಶ್ ಎಂಬುವವರು ಸಂಗೀತ ನೀಡಿದ್ದಾರೆ. ಕನಕದಾಸರ ಎಲ್ಲ ಕೀರ್ತನೆಗಳು ಧಾರಾವಾಹಿಯ ತುಂಬ ಆವರಿಸಿಕೊಳ್ಳಲಿವೆ. ವೀಕ್ಷಕರ ಪಾಲಿಗೆ ಇದು ಸಂಗೀತ ಸಾಹಿತ್ಯದ ರಸದೌತಣ ಕೂಡ.

ಕನಕದಾಸರ ಬದುಕು ವೈಯಕ್ತಿಕವಾಗಿ ನಿಮಗೆಷ್ಟು ಹತ್ತಿರ?
ನನಗೆ ಪರ್ಸನಲಿ ಕನಕದಾಸರು ಮತ್ತು ಅವರ ಕೀರ್ತನೆಗಳು ಅಪಾರ ಪ್ರಭಾವ ಬೀರಿದೆ. ಬೇರೆಲ್ಲ ದಾಸರುಗಳಿಗಿಂತ ಕನಕದಾಸರ ಬದುಕು ಮನಸಿಗೆ ಹತ್ತಿರ. ಅವರ ಕೀರ್ತನೆಗಳು ಸರಳ. ಎಲ್ಲರಿಗೂ ಅರ್ಥವಾಗೋವಂಥದ್ದು. ಅವರ ಬದುಕು ಕೂಡ ಅತ್ಯಂತ ವೈವಿಧ್ಯಮಯವಾಗಿತ್ತು. ಅವರ ವೈರಾಗ್ಯ ಬದುಕಿನಲ್ಲೂ ಜೀವಂತಿಕೆ ಇತ್ತು. ಡಿವಿಜಿಯವರ ಕಗ್ಗಗಳಿಗಿಂತ, ವಚನಗಳಗಳಿಗಿಂತ, ಪುರಂದರದಾಸರ ಕೀರ್ತನೆಗಳಿಗಿಂತ ಹೆಚ್ಚು ಆಪ್ತತೆ ಮತ್ತು ಸರಳತೆ ನಿಮಗೆ ಕನಕರ ಸಾಲುಗಳಲ್ಲಿ ಸಿಗುತ್ತದೆ. ಅದರಲ್ಲಿನ ಅರ್ಥಗಳೂ ತುಂಬ ಚರ್ಚಾತೀತ ಎಂಬಷ್ಟು ಪರಿಪೂರ್ಣ. ಇಷ್ಟೇ ಅಲ್ಲ ಫೋಟೋಗಳಲ್ಲಷ್ಟೇ ನೋಡಿರೋದಾದರೂ ಅವರ ಮುಖಭಾವಗಳು, ದೈನ್ಯತೆ ಎಲ್ಲವೂ ನನ್ನ ಮೇಲೆ ಪ್ರಭಾವ ಬೀರಿದೆ. ರುದ್ರಮೂರ್ತಿಶಾಸ್ತ್ರಿಗಳ ಬರಹವನ್ನು ಅಷ್ಟೇ ಗಹನವಾಗಿ ತೆರೆಮೇಲೆ ತರುವುದರಲ್ಲಿ ನಾನು ತಲ್ಲೀನ. ನನ್ನ ಬದುಕಿನ ಮಹತ್ವಾಕಾಂಕ್ಷೆಯ ಧಾರಾವಾಹಿಯಿದು. ಈ ನಂತರ ನಾನು ಬೇರೇನೂ ಮಾಡದಿದ್ದರೂ ಬೇಸರವಿಲ್ಲ.

-ನವೀನ್ ಸಾಗರ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

ಪಾಕಿಸ್ತಾನ-ಅಫ್ಘಾನಿಸ್ತಾನ ಯುದ್ಧ: 58 ಪಾಕ್ ಸೈನಿಕರು ಹತ, ತಾಲಿಬಾನ್ ಸರ್ಕಾರದ 'ದೊಡ್ಡ' ಹೇಳಿಕೆ

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

ದೇಶದ ಮುಸ್ಲಿಂರನ್ನು ಗುರಿಯಾಗಿಸಿಕೊಳ್ಳುವ ಬಿಜೆಪಿ ಅಫ್ಘಾನಿಸ್ತಾನದ ಜೊತೆ ಸಂಬಂಧ ಬೆಳೆಸುವುದು 'ಬೂಟಾಟಿಕೆ': ಮೆಹಬೂಬಾ ಮುಫ್ತಿ

'ಬ್ಲೂ ಸ್ಟಾರ್ ಆಪರೇಷನ್' ಕಾರ್ಯಾಚರಣೆ ತಪ್ಪಿಗೆ ಇಂದಿರಾ ಗಾಂಧಿ ಪ್ರಾಣ ತೆತ್ತರು: ಪಿ ಚಿದಂಬರಂ

SCROLL FOR NEXT