ಸಿನಿಮಾ ಸುದ್ದಿ

ದುನಿಯಾ ರಶ್ಮಿ ಲವ್ ಸ್ಟೋರಿ

Mainashree

ತುಂಬಾ ದಿನಗಳ ನಂತರ ದುನಿಯಾ ರಶ್ಮಿ ಮತ್ತೆ ಸ್ಕ್ರೀನ್‌ಗೆ ಮರಳಿದ್ದಾರೆ. ವಿಶೇಷ ಅಂದರೆ ಇದು ರಶ್ಮಿಯದ್ದೇ ಲವ್ ಸ್ಟೋರಿ ಎಂದರೆ ಅಚ್ಚರಿ ಪಡಬೇಕಿಲ್ಲ. ಯಾಕೆಂದರೆ ಇದು ರಶ್ಮಿಯಾಗಿರುವುದರಿಂದ ಇದು ನಟಿ ರಶ್ಮಿ ಲವ್ ಸ್ಟೋರಿ ಅಂದುಕೊಳ್ಳಬುಹುದು.

ಅಂದಹಾಗೆ ಚಿತ್ರದ ಹೆಸರು 'ಪ್ರೀತಿ ಕಿತಾಬು' ಕಿತಾಬು ಎಂದರೆ ಪುಸ್ತಕ ಎಂದರ್ಥ. ಇನ್ನ ನಟಿ ರಶ್ಮಿಯ 'ಪ್ರೀತಿ ಕಿತಾಬು'ಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು ವಿಠ್ಠಲ್ ಭಟ್. ಈ ಹಿಂದೆ ಇವರು ಈಟಿವಿ ಹಾಗೂ ಸುವರ್ಣ ವಾಹಿನಿಗಳಲ್ಲಿ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡಿದವರು. ಇದಕ್ಕೂ ಮೊದಲು ತೆಲಗು ಫೋಕ್ ಸಾಂಗ್‌ಗಳನ್ನು ಒಳಗೊಂಡ ನಾಲ್ಕೈದು ಆಲ್ಬಂಗಳನ್ನು ನಿರ್ದೇಶಿದ್ದಾರೆ. ಜೊತೆಗೆ ಎರಡು ಸಾಕ್ಷ್ಯ ಚಿತ್ರಗಳನ್ನು ನಿರ್ದೇಶಿಸಿರುವ ವಿಠ್ಠಲ್, ಪತ್ರಿಕೋದ್ಯಮಕ್ಕೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ಸಿನಿಮಾ ನಿರ್ದೇಶನದ ಕಡೆ ಮುಖ ಮಾಡಿದವರು.

ಇದರ ನಡುವೆ ಹೊಸ ನಟ, ನಟಿಯರಿಗೆ ಅಭಿನಯ ತರಬೇತಿ ಹೇಳಿಕೊಡುವ ಉದ್ದೇಶದಿಂದ ಬೆಂಗಳೂರಿನ ನಾಗರಭಾವಿಯಲ್ಲಿ ಅಭಿನಯ ತರಬೇತಿ ಸಂಸ್ಥೆ ಆರಂಭಿಸಿದ್ದಾರೆ. ಈಗ ಒಂದು ಕಮಿರ್ಷಿಯಲ್ ಸಿನಿಮಾ ನಿರ್ದೇಶಿಸುವ ಮೂಲಕ ವಿಠ್ಠಲ್ ಮತ್ತೊಂದು ದಾರಿಯಲ್ಲಿ ಕಾಲಿಟ್ಟಿದ್ದಾರೆ.

ತಮ್ಮ ಮೊದಲ ಚಿತ್ರಕ್ಕೆ 'ಪ್ರೀತಿ ಕಿತಾಬು' ಎನ್ನುವ ಶೀರ್ಷಿಕೆ ಇಟ್ಟಿರುವ ವಿಠ್ಠಲ್, ಕಥೆ ಕೂಡ ತುಂಬಾ ಭಿನ್ನವಾಗಿ ಮಾಡಿಕೊಂಡಿದ್ದಾರೆ. 'ಪ್ರೀತಿ ಕಿತಾಬು' ಅಂದರೆ ಹುಡುಗಿಯ ಪ್ರೇಮ ಪುಸ್ತಕ. ಒಂದರ್ಥದಲ್ಲಿ ಅವಳ ಪುಸ್ತಕ ಅಂತಲೂ ಆಗುತ್ತದೆ.

ಆದರೆ ಸಿನಿಮ್ಯಾಟಿಕ್ ಆಗಿ 'ಪ್ರೀತಿ ಕಿತಾಬು' ಅಂತ ಹೆಸರಿಟ್ಟಿದ್ದೇನೆ. ನಾಯಕಿ ಪ್ರಧಾನ ಸಿನಿಮಾ ಆಗಿರುವುದರಿಂದ ನಟಿ ರಶ್ಮಿಗೆ ಈ ಚಿತ್ರ ಮಹತ್ವವಾಗುತ್ತದೆ. ತುಂಬಾ ದಿನಗಳ ನಂತರ ಅಭಿನಯಕ್ಕೆ ಮರಳಿರುವ ರಶ್ಮಿ ಈ ಚಿತ್ರದ ಮೂಲಕ ಮತ್ತೊಂದು ತಿರುವು ಪಡೆದುಕೊಳ್ಳಲಿದ್ದಾರೆ.

ಚಿತ್ರದ ಹೆಸರೇ ಸೂಚಿಸುವಂತೆ ಹುಡುಗಿಯೊಬ್ಬಳ ಪ್ರೀತಿಯ ಪಯಣ ಇಲ್ಲಿದೆ. ಈಕೆಯ ಪಯಣದಲ್ಲಿ ನಾಯಕ ಹೇಗೆ ಸಿಗುತ್ತಾನೆ ಎಂಬುದು ಕೂಡ ಚಿತ್ರದಲ್ಲಿ ಮುಖ್ಯವಾದ ಎಪಿಸೋಡ್ ಆಗುತ್ತದೆ ಎನ್ನುತ್ತಾರೆ ಯುವ ನಿರ್ದೇಶಕ ವಿಠ್ಠಲ್ ಭಟ್.

ಇಡೀ ಚಿತ್ರ ಹಸಿರಿನ ಹಿನ್ನೆಲೆ ಇರುವ ಸಾಗರದಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ನಿಹಾಲ್ ಚಿತ್ರದ ನಾಯಕ. ಸದರಿ ಚಿತ್ರಕ್ಕೆ ನಿಹಾಲ್ ಅವರೇ ಕಥೆ ಬರೆದಿದ್ದು, ವಿಠ್ಠಲ್ ಅದಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.

ಶಮಂತ್ ನಿರ್ಮಾಣ ಮಾಡುತ್ತಿದ್ದಾರೆ. ಈ ಯುವ ಪ್ರತಿಭೆಗಳರ ಜತೆ ಹಿರಿಯ ತಲೆಯಾಗಿ ವಿ.ಮನೋಹರ್ ಇದ್ದು, ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಲಿದ್ದಾರೆ. ಡಿಸೆಂಬರ್ ತಿಂಗಳಿನಿಂದ ಚಿತ್ರೀಕರಣ ನಡೆಯಲಿದ್ದು, ಗಣೇಶ್ ಹೆಗ್ಡೆ ಛಾಯಾಗ್ರಾಹಣ ಮಾಡುತ್ತಿದ್ದಾರೆ.

ನಾಯಕಿ ಪ್ರಧಾನ ಚಿತ್ರದಲ್ಲಿ ನಾನೇ ನಾಯಕಿಯಾಗಿ ಅಭಿನಯಿಸುತ್ತಿರುವುದಕ್ಕೆ ಖುಷಿ ಇದೆ. ಅಲ್ಲದೆ ತುಂಬಾ ದಿನಗಳ ನಂತರ ಅಭಿನಯಕ್ಕೆ ಮರಳಿರುವ ನನಗೆ ಒಂದು ಮಹತ್ವವಾದ ಚಿತ್ರದಲ್ಲಿ ಪಾತ್ರ ಸಿಕ್ಕಿದೆ ಎಂಬುದು ರಶ್ಮಿ ಮಾತು.

SCROLL FOR NEXT