ದ್ರುವ ಸರ್ಜಾ (ಸಂಗ್ರಹ ಚಿತ್ರ) 
ಸಿನಿಮಾ ಸುದ್ದಿ

ಭರ್ಜರಿ-ಪೊಗರು ನಡುವೆ ದ್ರುವ ಕಣ್ಣಾಮುಚ್ಚಾಲೆ

ಸ್ಯಾಂಡಲ್ ವುಡ್ ನಟ ಮತ್ತು ಸರ್ಜಾ ಕುಟುಂಬದ ಕುಡಿ ದ್ರುವ ಸರ್ಜಾ ಏಕಕಾಲದಲ್ಲಿ ಎರಡೆರಡು ಚಿತ್ರಗಳಿಗೆ ಸಹಿ ಹಾಕುವ ಮೂಲಕ ಇಕ್ಕಟ್ಟಿಗೆ ಸಿಲುಕಿದ್ದಾರೆ...

ಬೆಂಗಳೂರು: ಸ್ಯಾಂಡಲ್ ವುಡ್ ನಟ ಮತ್ತು ಸರ್ಜಾ ಕುಟುಂಬದ ಕುಡಿ ದ್ರುವ ಸರ್ಜಾ ಏಕಕಾಲದಲ್ಲಿ ಎರಡೆರಡು ಚಿತ್ರಗಳಿಗೆ ಸಹಿ ಹಾಕುವ ಮೂಲಕ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಅದ್ಧೂರಿ-ಬಹದ್ದೂರ್ ಚಿತ್ರಗಳ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ದ್ರುವ ಸರ್ಜಾ, ತಮ್ಮ ಮೂರನೇ ಚಿತ್ರದ ಆಯ್ಕೆಯಲ್ಲಿ ಕೊಂಚ ಯಡವಟ್ಟು ಮಾಡಿಕೊಂಡಿದ್ದಾರಂತೆ. ಈ ಮೊದಲು ಬಿಕೆ ಗಂಗಾಧರ್ ಅವರ ನಿರ್ಮಾಣದ ತೆಲುಗಿನ ಸೂಪರ್ ಹಿಟ್ ಚಿತ್ರ "ಕಂದಿರೀಗ" ಚಿತ್ರದ ಕನ್ನಡದ ಅವತರಣಿಕೆ "ಪೊಗರು"ಗೆ ಸಹಿ ಮಾಡಿದ್ದ ದ್ರುವ ಸರ್ಜಾ, ಆ ಬಳಿಕ ಅದೇಕೋ ತಮ್ಮ ಮನಸ್ಸು ಬದಲಿಸಿದಂತಿದೆ. ತಮ್ಮ ಮೂರನೇ ಚಿತ್ರ ಕೂಡ ರಿಮೇಕ್ ಅಲ್ಲದ ಚಿತ್ರವಾಗಿರಬೇಕು ಎಂಬ ಕಾರಣದಿಂದ "ಬಹದ್ದೂರ್" ಖ್ಯಾತಿಯ ಚೇತನ್ ಕುಮಾರ್ ಅವರ ನಿರ್ದೇಶನದ "ಭರ್ಜರಿ" ಚಿತ್ರಕ್ಕೆ ಸಹಿ ಹಾಕುವ ಮೂಲಕ ದ್ರುವ ತಾವಾಗಿಯೇ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇದೀಗ ಎರಡೂ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರವನ್ನು ದ್ರುವ ಮೊದಲ ಪೂರ್ಣಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. "ಪೊಗರು" ಚಿತ್ರ ನಿರ್ಮಾಪಕ ಗಂಗಾಧರ್ ಅವರು ಈ ಬಗ್ಗೆ ಮಾತನಾಡಿದ್ದು, ದ್ರುವ ಅವರ ಇತರೆ ಚಿತ್ರಗಳ ಕುರಿತು ನಮಗೆ ತಿಳಿದಿಲ್ಲ. ಆದರೆ ಅವರು ನಮ್ಮ ಚಿತ್ರವನ್ನು ಮೊದಲು ಒಪ್ಪಿಕೊಂಡಿದ್ದು, ನಿಗದಿತ ದಿನಾಂಕದಲ್ಲಿ ಅದನ್ನು ಪೂರ್ಣಗೊಳಿಸಬೇಕಿದೆ.

ದ್ರುವ ಕೂಡ ನಿಗದಿತ ದಿನಾಂಕದಲ್ಲಿ ಚಿತ್ರವನ್ನು ಪೂರ್ಣಗೊಳಿಸುತ್ತೇನೆ ಎಂದು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ನಾವು ಚಿತ್ರವನ್ನು ನಿಧಾನವಾಗಲು ಬಿಡುವುದಿಲ್ಲ. ಚಿತ್ರಕ್ಕೆ ಸಂಬಂಧಿಸಿದಂತೆ ನಾವು ಎಲ್ಲರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ನಿರ್ದೇಶಕ ಚಿತ್ರಕಥೆಯೊಂದಿಗೆ ಸಿದ್ಧರಾಗಿದ್ದಾರೆ. ಇನ್ನು ಅರ್ಜುನ್ ಜನ್ಯಾ ಅವರು ಚಿತ್ರಕ್ಕೆ ಸಂಗೀತ ನೀಡಲಿದ್ದು, ಚಿತ್ರದ ನೆಗೆಟಿವ್ ರೋಲ್ ನಲ್ಲಿ ರವಿಶಂಕರ್ ಅವರು ಅಭಿನಯಿಸುತ್ತಿದ್ದಾರೆ. ಚಿತ್ರಕ್ಕಾಗಿ ಮೂವರು ನಾಯಕಿಯರಿಗಾಗಿ ನಾವು ಶೋಧ ನಡೆಸುತ್ತಿದ್ದು, ಮುಂದಿನ ವಾರದೊಳಗೆ ನಾವು ಇದನ್ನು ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.

ಇನ್ನು ಚಿತ್ರದ ಕೆಲ ದೃಶ್ಯಗಳನ್ನು ಮತ್ತು ಹಾಡುಗಳ ಭಾಗವನ್ನು ವಿದೇಶಗಳಲ್ಲಿ ಚಿತ್ರೀಕರಿಸಲಿದ್ದು, ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಚಿತ್ರ ಚಿತ್ರೀಕರಣ ನಡೆಯಲಿದೆ. ಚಿತ್ರದ ಉಳಿದ ಭಾಗವನ್ನು ಹೈದರಾಬಾದಿನಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿದೆ ಎಂದು ಗಂಗಾಧರ್  ಹೇಳಿದ್ದಾರೆ.

ಇದೀಗ ಹಬ್ಬಿರುವ ಈ ಗೊಂದಲಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ದ್ರುವ ಸರ್ಜಾ ಅವರು, "ನಾನು ಒಪ್ಪಿಕೊಂಡಿರುವ ಚಿತ್ರಗಳನ್ನು ನಿಗದಿತ ದಿನದಂದೇ ಪೂರ್ಣಗೊಳಿಸುತ್ತೇನೆ. ಏಕಕಾಲದಲ್ಲಿ 2 ಚಿತ್ರಗಳಲ್ಲಿ ಭಾಗಿಯಾಗುವ ಕುರಿತು ನಾನು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಗಂಗಾಧರ್ ಅವರ ಪೊಗರು ಚಿತ್ರಕ್ಕೆ ಮತ್ತು ಶ್ರೀಕಾಂತ್ ಅವರ ಭರ್ಜರಿ ಚಿತ್ರಗಳೆರಡಕ್ಕೂ ಡೇಟ್ಸ್ ಹೊಂದಾಣಿಕೆ ಮಾಡುತ್ತೇನೆ" ಎಂದು ದ್ರುವ ಸರ್ಜಾ ಹೇಳಿದ್ದಾರೆ.

ಇನ್ನು ನಂದಕಿಶೋರ್ ಅವರೊಂದಿಗಿನ ಚಿತ್ರದ ಕುರಿತು ಮಾತನಾಡಿದ ದ್ರುವ, ನಂದ ಕಿಶೋರ್ ಪ್ರಸ್ತುತ ರನ್ನ ಚಿತ್ರದಲ್ಲಿ ಬಿಸಿಯಾಗಿದ್ದು, ಅವರನ್ನು ಡಿಸ್ಟರ್ಬ್ ಮಾಡಲು ನನಗೆ ಇಷ್ಟವಿಲ್ಲ. ಅವರು  ಬಿಡುವಾದ ಬಳಿಕ ಮುಂದಿನ ಚಿತ್ರದ ಕುರಿತಂತೆ ಯೋಚನೆ ಮಾಡುತ್ತೇವೆ ಎಂದು ದ್ರುವ ಹೇಳಿದರು.

ಪೊಗರು ಚಿತ್ರವನ್ನು ಬಿಕೆ ಗಂಗಾಧರ್ ಅವರು ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದ ಮೂಲಕ ಖ್ಯಾತ ಸಾಹಸ ನಿರ್ದೇಶಕ ರವಿವರ್ಮಾ ಅವರು ನಿರ್ದೇಶಕ ಸ್ಥಾನ ಅಲಂಕರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಇದೇ ಮೇ ಮೊದಲ ವಾರದಿಂದ ಚಿತ್ರೀಕರಣ ಆರಂಭ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇನ್ನು ಭರ್ಜರಿ ಚಿತ್ರವನ್ನು ಕನಕಪುರ ಶ್ರೀನಿವಾಸ್ ಮತ್ತು ಕೆಪಿ ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದು, ಚಿತ್ರವನ್ನು ಬಹದ್ದೂರ್ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಅವರು ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಎರಡೂ ಚಿತ್ರಗಳ ಬಳಿಕ ದ್ರುವ ಸರ್ಜಾ ನಂದಕಿಶೋರ್ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ನಂದ ಕಿಶೋರ್ ಅವರು ಸುದೀಪ್ ಅವರ ಅಭಿನಯದ ರನ್ನ ಚಿತ್ರದಲ್ಲಿ ಬಿಸಿಯಾಗಿದ್ದು, ರನ್ನ ಬಳಿಕ ಅವರು ದ್ರುವ ಸರ್ಜಾ ಅವರೊಂದಿಗೆ ಚಿತ್ರ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT