ಪತ್ರಕರ್ತ ವಿಠ್ಠಲ್ ಭಟ್ ನಿರ್ದೇಶನದ `ಪ್ರೀತಿ ಕಿತಾಬು' ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಸಾಗರ, ಜೋಗ, ಇಕ್ಕೇರಿ, ಕೊಡಚಾದ್ರಿ, ಬೀಮೇಶ್ವರ, ಶರಾವತಿ ಬ್ಯಾಕ್ ವಾಟರ್ ಮುಂತಾದ ಕಡೆ 25ದಿನಗಳ ಶೇ. 70 ಭಾಗ ಚಿತ್ರೀಕರಣ ನಡೆದಿದೆ. ನಟರಾದ ಶೋಭರಾಜ್, ಹೊನ್ನಾವಳಿ ಕೃಷ್ಣ, ರಮೇಶ್ ಭಟ್, ಸುಧಾಕರ್ ರಾಕ್‍ಲೈನ್, ಸಂಗೀತ, ಯಶ್ವಂತ್ ಕುಚ್‍ಬಾಳ್ ಮುಂತಾದವರು ಅಭಿನಯಿಸಿದ್ದು, ನಿಹಾಲ್ ಮೊದಲ ಬಾರಿಗೆ ನಾಯಕನಾಗಿ ಈ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ.
ದುನಿಯಾ ರಶ್ಮಿ ಈ ಚಿತ್ರದ ನಾಯಕಿಯಾಗಿದ್ದು, ಪೂರ್ವಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಎರಡನೇ ಹಂತದ ಚಿತ್ರೀಕರಣದಲ್ಲಿ ನಾಯಕ ನೆಹಾಲ್, ವಿ. ಮನೋಹರ್, ಕೆ.ಎಸ್. ಶ್ರೀಧರ್ ಮತ್ತು ಜಯಲಕ್ಷ್ಮಿ ಕಾಣಿಸಿಕೊಳ್ಳಲಿದ್ದಾರೆ. ವಿ. ಮನೋಹರ್ ಅವರ ಸಂಗೀತದಲ್ಲಿ ನಾಲ್ಕು ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಬಹುಶಃ ಮೊದಲ ಬಾರಿಗೆ ಜೋಗ ಜಲಪಾತದ 1000ಅಡಿಗಳ ಕೆಳಭಾಗಕ್ಕೆ ಇಡೀ ಚಿತ್ರತಂಡ ಚಿತ್ರೀಕರಣದ ಪರಿಕರಗಳನ್ನು ಹೊತ್ತು ಕೆಳಗಿಳಿದು, ಚಿತ್ರದ ಒಂದು ದೃಶ್ಯವನ್ನು ಚಿತ್ರೀಕರಿಸಿದ್ದು ತಂಡದ ಸಾಹಸ ಅಂತಲೇ ಹೇಳಬೇಕು.
ಈ ದೃಶ್ಯ ಇಡೀ ಚಿತ್ರಕ್ಕೆ ಒಂದು ಹೈಲೈಟ್ ಆಗಿ ನಿಲ್ಲುತ್ತೆ ಎಂಬುದು ನಿರ್ದೇಶಕ ವಿಠ್ಠಲ್ ಭಟ್ ಅವರ ವಿಶ್ವಾಸ. ಚಿತ್ರದ ನಾಯಕ ನಿಹಾಲ್ ಮತ್ತು ಸಹ ನಿರ್ಮಾಪಕ ಪ್ರದೀಪ್ ಭಟ್ ಸಾಗರದವರೇ ಆಗಿದ್ದರಿಂದ ಚಿತ್ರೀಕರಣದ ಜೋಗ ಜಲಪಾತದ ಕಡಿದಾದ ಜಾಗಗಳಿಗೆ ಹೋಗಿ ಚಿತ್ರೀಕರಣ ಮಾಡಲು ಸಾಧ್ಯವಾಯಿತಂತೆ. ಜೋಗದಲ್ಲಿ ಸಂಯೋಜನೆ ಮಾಡಿರುವ ದೃಶ್ಯಗಳನ್ನು ಛಾಯಾಗ್ರಾಹಕ ಗಣೇಶ್ ಹೆಗಡೆ ಅದ್ಭುತವಾಗಿ ಚಿತ್ರೀಕರಿಸಿದ್ದಾರಂತೆ.
ಇಕ್ಕೇರಿ ಅಘೋರೇಶ್ವರ ದೇವಸ್ಥಾನ. ಸುಮಾರು 500ವರ್ಷಗಳ ಇತಿಹಾಸವಿರುವ ಈ ದೇವಸ್ಥಾನ ಕದಂಬ ಮತ್ತು ಹೊಯ್ಸಳ ಶೈಲಿಯಲ್ಲಿದೆ. ಇಡೀ ದೇವಸ್ಥಾನದ ಸೊಬಗನ್ನು ಈ ಚಿತ್ರದಲ್ಲಿ ತೋರಿಸಿರುವುದು `ಪ್ರೀತಿ ಕಿತಾಬು' ಚಿತ್ರದ ಮತ್ತೊಂದು ವಿಶೇಷ. ಕೊಡಚಾದ್ರಿ ಬೆಟ್ಟ ಹಾಗೂ ಹಸಿರುಮಕ್ಕಿ ಲಾಂಚ್ ಮೇಲೂ ಚಿತ್ರೀಕರಣ ಮಾಡಲಾಗಿದೆ. ಪ್ರಯಾಣಿಸಲೂ ಸಹ ಕಷ್ಟವಾದ ಕೊಡಚಾದ್ರಿ ಬೆಟ್ಟದ ಮೇಲೆ ಹತ್ತಿರುವುದು ಚಿತ್ರತಂಡದ ಹೆಮ್ಮೆ. `ನಾವು ಕೊಡಚಾದ್ರಿ ಬೆಟ್ಟ ಹತ್ತಿದಾಗ ಇಡೀ ಬೆಟ್ಟ ಮಂಜಿನಿಂದ ಆವೃತವಾಗಿತ್ತು. ದಾರಿ ಕೂಡ ಕಾಣದ ಪರಿಸ್ಥಿತಿ. ಯಾರು ಎಲ್ಲಿದ್ದೇವೆಂದು ಕಾಣದ ವಾತಾವರಣದಲ್ಲಿ ಧೈರ್ಯ ಮಾಡಿ ಬೆಟ್ಟ ಹತ್ತಿ ಚಿತ್ರೀಕರಣ ಮಾಡಿದ್ದೇವೆ. ಬೆಟ್ಟದ ಮೇಲಿನ ಚಿತ್ರೀಕರಣ ರೋಚಕ ಅನುಭವ ನೀಡಿತು' ಎನ್ನುತ್ತಾರೆ ನಿರ್ದೇಶಕ ವಿಠ್ಠಲ್.
ಮೊದಲ ಹಂತದ ಶೂಟಿಂಗ್ ಪಯಣ ಚಿತ್ರತಂಡಕ್ಕೆ ಒಂದು ಅದ್ಭುತವಾದ ಅನುಭವ ತಂದು ಕೊಟ್ಟಿದೆ. ಸುಂದರವಾದ ಪ್ರೇಮ ಕಾವ್ಯವನ್ನು ಅದ್ಭುತವಾದ ತಾಣಗಳಲ್ಲಿ ಚಿತ್ರೀಕರಿಸಿದ್ದು, ಎರಡು ಹಾಡುಗಳಿಗೆ ಮನು ಎಂಬುವವರು ನೃತ್ಯ ಸಂಯೋಜಿಸಿದ್ದಾರೆ. ರಾಜಾ ಕಾಮವರಂ ಚಿತ್ರದ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಶಮಂತ್ ಕೆ ಹಾಗೂ ಪ್ರದೀಪ್ ಭಟ್ ನಿರ್ಮಾಣದ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ ಬರೆದಿದ್ದು, ರವಿಶಂಕರ್ ಮಿರ್ಲೆ ಸಂಭಾಷಣೆ ಬರೆದಿದ್ದಾರೆ. ಮೋಹನ್ ಕಾಮಾಕ್ಷಿ ಅವರ ಸಂಕಲನವಿದೆ. ಒಟ್ಟಿನಲ್ಲಿ ವಿಠ್ಠಲ್ ಭಟ್ ತಂಡ ತಮ್ಮ ಮೊದಲ ಚಿತ್ರಕ್ಕೆ ಮೊದಲ ಚಿತ್ರದ ಚಿತ್ರೀಕರಣಕ್ಕೆ ಪ್ರಕೃತಿಯ ಸ್ಪರ್ಶ ಕೊಟ್ಟಿದೆ. ಸದ್ಯದಲ್ಲೇ `ಪ್ರೀತಿ ಕಿತಾಬು' ಎರಡನೇ ಹಂತದ ಚಿತ್ರೀಕರಣಕ್ಕೆ ತೆರಳಲಿದೆ.?