ಬೆಂಗಳೂರಿನಲ್ಲೊಂದು ಲ್ಯಾಂಡ್ ಮಾರ್ಕ್ ಸೃಷ್ಠಿಯಾಗಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ಇದು ಪುಸ್ತಕಲೋಕದಲ್ಲೂ ಸ್ಯಾಂಡಲ್‌ವುಡ್‌ನಲ್ಲೂ ಒಂದು ಲ್ಯಾಂಡ್ ಮಾರ್ಕೇ!
ಸಾಹಸ ಸಿಂಹ ವಿಷ್ಣುವರ್ಧನ್ ಈಗ ಪುಸ್ತಕದಲ್ಲೂ ಸಾಹಸಸಿಂಹ ಪಾತ್ರದಲ್ಲಿ ರಂಜಿಸಲಿದ್ದಾರೆ. ಆದರೆ ಈ ಬಾರಿ ಅವರು ಮಕ್ಕಳ ಚಿತ್ರದ ಮೂಲಕ ಬಂದಿದ್ದಾರೆ ಅನ್ನಬಹುದು. ಸುದ್ದಿ ಏನಂದ್ರೆ, ಲ್ಯಾಂಡ್ ಮಾರ್ಕ್ ಮಳಿಗೆ ಮತ್ತು ಅಮರ ಚಿತ್ರ ಕಥೆ ಜಂಟಿಯಾಗಿ ಹೊರತಂದಿರುವ ಸಾಹಸ ಸಿಂಹ ಎಂಬ ಕಾಮಿಕ್ಸ್ ಪುಸ್ತಕ ಜ.23ರಂದು ಪೋರಂ ಮಾಲ್‌ನಲ್ಲಿ ಬಿಡುಗಡೆಯಾಗಿದೆ.
ವಿಷ್ಣು ಪತ್ನಿ ಡಾ.ಭಾರತಿ, ನಟಿ ನಿಖಿತಾ ತುಕ್ರಾಲ್, ಅನುರುದ್ಧ್ ಹಾಗೂ ಮೊಮ್ಮಕ್ಕಳಾದ ಶ್ಲಾಕಾ, ಜೇಷ್ಠವರ್ಧನ್ ಎಲ್ಲ ಸೇರಿ ಬಿಡುಗೆ ಮಾಡಿದ ಪುಸ್ತಕದ ವಿಶೇಷವೆಂದರೆ, ಕಾಮಿಕ್ಸ್‌ನಲ್ಲಿ ವಿಷ್ಣುವರ್ಧನ್ ಮಾತ್ರವಲ್ಲದೇ ಮೊಮ್ಮಕ್ಕಳೂ ಸಹ ಪಾತ್ರವಾಗಿದ್ದಾರೆ. ಪತ್ತೇದಾರಿ ಕಥೆಯಿರುವ ಈ ಪುಸ್ತಕ ಮಕ್ಕಳನ್ನು ರಂಜಿಸಲಿದೆ. ವಿಷ್ಣು ಅಭಿಮಾನಿಗಳಿಗೂ ಖುಷಿ ಕೊಡಲಿಕ್ಕೆ ಸಾಕು. ಅಂದಹಾಗೆ, ಕನ್ನಡದ ಈ ಲಯನ್ ಕಿಂಗ್ ಪುಸ್ತಕ ಇನ್ನಷ್ಟು ಕಥೆಗಳ ಸರಣಿ ಕೂಡ ನಿರಂತರವಾಗಿ ಹೊರತರುವ ಯೋಜನೆ ಲ್ಯಾಂಡ್ ಮಾರ್ಕ್ ಮತ್ತು ಅಮರ ಚಿತ್ರ ಕಥೆ ಸಂಸ್ಥೆಗಳಿಗಿದೆಯಂತೆ.
ಕಥೆ ಏನು?
ವಿಷ್ಣುವರ್ಧನ್ ನೆರೆಮನೆಯಲ್ಲಿ ಮಧ್ಯರಾತ್ರಿಯ ದರೋಡೆ ಆಗುತ್ತದೆ. ಅದೇ ಪ್ರದೇಶದಲ್ಲಿನ ಎಲ್ಲ ಬೀದಿ ನಾಯಿಗಳು ಕಾಣೆಯಾಗುತ್ತವೆ. ಈ ಕುರಿತು ಸಾಹಸಸಿಂಹ ಪತ್ತೆದಾರಿ ಕೆಲಸ ಮಾಡುತ್ತಾರೆ. ಕಳ್ಳರು ಮತ್ತು ನಾಯಿಗಳು ಕಾಣೆಯಾಗುವುದಕ್ಕೆ ಸಂಬಂಧ ಇರುತ್ತದೆ. ತನ್ನ ಬುದ್ಧಿವಂತ ಮೊಮ್ಮಕ್ಕಳಾದ ಜೇಷ್ಠ, ಶೋಕ್ಲಾರ ಸಲಹೆಯಂತೆ ಹಲವು ಪ್ರಶ್ನೆಗಳು ಅವರನ್ನು ಕಾಡುತ್ತವೆ. ಅದು ಅವರನ್ನು ಒಂದು ದಟ್ಟ ಅರಣ್ಯಕ್ಕೆ ತೆಗೆದುಕೊಂಡು ಹೋಗುತ್ತದೆ. ಅತಿ ಅಪಾಯದೊಂದಿಗೆ ಕೆಲಸ ಮಾಡುವ ಸ್ಥಿತಿ ಎದುರಾಗುತ್ತದೆ. ಹಲವು ಪ್ರಾಣಿಗಳ ನಡುವೆಯೂ ಭಯವಿಲ್ಲದ ಪತ್ತೆದಾರಿ ಹೇಗೆ ಕೆಲಸ ಮಾಡುತ್ತಾನೆ ಎಂಬುದು ಕಥೆಯ ಸಾರಾಂಶ.