ಸಿನಿಮಾ ಸುದ್ದಿ

ಆಯ್ಕೆ ಮಾಡಿದ್ದೇ ಬೇರೆ; ಜೀ ಕನ್ನಡ ಪ್ರಶಸ್ತಿ ನೀಡಿದ್ದೆ ಅನ್ಯರಿಗೆ; ಎಂಡಿ ಪಲ್ಲವಿ ಆರೋಪ

Guruprasad Narayana

ಬೆಂಗಳೂರು: ಜೀ ಕನ್ನಡ ಸುದ್ದಿ ವಾಹಿನಿಯ ಸಂಗೀತ ಪ್ರಶಸ್ತಿಗಳು ಘೋಷಣೆಯಾದ ಬೆನ್ನಲ್ಲೇ ಸಂಗೀತ ಸ್ಪರ್ಧೆಯ ತೀರ್ಪುಗಾರ್ತಿಯಾಗಿದ್ದ ಸುಗಮ ಸಂಗೀತಗಾರ್ತಿ ಮತ್ತು ಹಿನ್ನಲೆ ಸಂಗೀತಕಾರ್ತಿ ಎಂ ಡಿ ಪಲ್ಲವಿ, ನಾವು ಆಯ್ಕೆ ಮಾಡದ ಅಭ್ಯರ್ಥಿಗಳಿಗೆ ಪ್ರಶಸ್ತಿ ನೀಡಲಾಗಿದೆ ಎಂದು ದೂರಿದ್ದಾರೆ.

ತಮ್ಮ ಫೇಸ್ಬುಕ್ ಪುಟದಲ್ಲಿ ಈ ವಿಷಯವನ್ನು ಎಂ ಡಿ ಪಲ್ಲವಿ ಬರೆದುಕೊಂಡಿದ್ದು "ನಾನು ಇಂತಹ ಸ್ಪರ್ಧೆಗೆ ತೀರ್ಪುಗಾರ್ತಿಯಾಗಿದ್ದು ಇದೆ ಮೊದಲು. ಆದರೆ ಕೆ ಎಸ್ ಎಲ್ ಸ್ವಾಮಿ ಅವರಿಗೆ ೫೦ ವರ್ಷದ ಅನುಭವವಿದೆ ಹಾಗೂ ಇಂತಹ ಎಷ್ಟೋ ಸ್ಪರ್ಧೆಗಳಲ್ಲಿ ಅವರು ತೀರ್ಪುಗಾರರಾಗಿದ್ದಾರೆ. ನಂದಿತಾ ರಾಕೇಶ್ ಅವರು ೧೫-೧೬ ವರ್ಷಗಳಿಂದ ಹಾಡುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಫಲಿತಾಂಶವನ್ನು ತಿದ್ದಲು ಸುದ್ದಿವಾಹಿನಿ ತೀರ್ಪುಗಾರರ ಅನುಮತಿ ಕೇಳಲಿಲ್ಲ ಮತ್ತು ನಮಗೆ ಇದನ್ನು ತಿಳಿಸಲು ಇಲ್ಲ. ನಾವು ಸ್ಪಷ್ಟನೆ ಕೇಳಿದರೆ ಅವರು ಮೌನಕ್ಕೆ ಶರಣಾಗಿದ್ದಾರೆ ಎಂದಿದ್ದಾರೆ ಪಲ್ಲವಿ.

"ಮಂಗಳವಾರ ನಾನು ಪ್ರದರ್ಶನ ನೀಡಬೇಕಿದ್ದರಿಂದ ನಾನು ಬೇಗನೆ ಹೊರಟೆ. ಆದರೆ ಅವರಿಬ್ಬರೂ ಸುದ್ದಿವಾಹಿನಿಯನ್ನು ಪ್ರಶ್ನಿಸಿದ್ದಾರೆ" ಎಂದಿರುವ ಅವರು "ನಾನು ಕಳೆದ ಎರಡು ದಿನಗಳಿಂದ ಅವರಿಗೆ ಸಂದೇಶ ಕಳುಹಿಸುತ್ತಿದ್ದು, ಅವರು ಇನ್ನೂ ಪ್ರತಿಕ್ರಿಯಿಸಿಲ್ಲ" ಎಂದಿದ್ದಾರೆ.

ತೀರ್ಪುಗಾರರು ಆಯ್ಕೆ ಮಾಡಿದ ಹೆಸರುಗಳನ್ನೂ ಬಹಿರಂಗಪಡಿಸದ ಪಲ್ಲವಿ "ನಾವು ಆಯ್ಕೆ ಮಾಡಿದ ಅಭ್ಯರ್ಥಿಗಳಿಗೆ ಪ್ರಶಸ್ತಿ ಸಿಗದೇ ಹೋದದ್ದು ಅನ್ಯಾಯ ಅಲ್ಲದೆ ಸುದ್ದಿ ವಾಹಿನಿ ತಿದ್ದಿರುವ ಹೆಸರುಗಳನ್ನು ನಾವೇ ಸೂಚಿಸಿದ್ದೇವೆ ಎಂದು ಹೇಳುವುದು ಸರಿಯಲ್ಲ. ಇದಕ್ಕೆ ತೀರ್ಪುಗಾರರು ಏಕೆ ಬೇಕು" ಎಂದು ಕಿಡಿಕಾರಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಜೀ ಕನ್ನಡ ವಾಹಿನಿಯ ಪ್ರಧಾನ ಕಾರ್ಯಕ್ರಮ ನಿರ್ವಾಹಕ ರಾಘವೇಂದ್ರ ಹುಣುಸೂರು "ನಮ್ಮ ತಂಡ ಎಂ ಡಿ ಪಲ್ಲವಿಯವರೊಂದಿಗೆ ಮಾತನಾಡಿದೆ. ಸುದ್ದಿವಾಹಿನಿಯ ತೀರ್ಪುಗಾರರ ಜೊತೆಗೆ ನಿರ್ದೇಶಕ ಎಸ್ ನಾರಾಯಣ್ ನೀಡುವ ಅಂಕಗಳನ್ನು ಪರಿಗಣಿಸಲಾಗುವುದು ಎಂದು ತೀರ್ಪುಗಾರರಿಗೆ ತಿಳಿಸಲಾಗಿತ್ತು ಎಂದಿರುವ ಅವರು ಹೆಚ್ಚೇನು ಬದಲಾವಣೆಗಳನ್ನು ನಾವು ಮಾಡಿಲ್ಲ" ಎಂದಿದ್ದಾರೆ.

SCROLL FOR NEXT