ಬೆಂಗಳೂರು: ಅನೂಪ್ ಭಂಢಾರಿ ಅವರ ಚೊಚ್ಚಲ ನಿರ್ದೇಶನದ ಹಾರರ್-ಥ್ರಿಲ್ಲರ್ ಸಿನೆಮಾ 'ರಂಗಿತರಂಗ' ಪರಭಾಷಾ ಸಿನೆಮಾಗಳ ಹಾವಳಿಗೂ ಬಗ್ಗದೆ ಮುನ್ನಡೆದು ಕನ್ನಡ ಚಿತ್ರರಂಗಕ್ಕೆ ಭರವಸೆ ಮೂಡಿಸಿದ ಸಿನೆಮಾ.
ಇದರಿಂದ ಉತ್ತೇಜಿತರಾಗಿರುವ ಅನೂಪ್, ಸಹೋದರ ನಟ ನಿರುಪ್ ಭಂಢಾರಿ ಅವರೊಂದಿಗೆ ಕೂಡಿ ಹೊಸ ಸ್ಕ್ರಿಪ್ಟ್ ಒಂದನ್ನು ಸಿದ್ಧಪಡಿಸಿದ್ದಾರೆ. ಇದು 'ರಂಗಿತರಂಗ' ವಿಷಯಕ್ಕಿಂತ ಸಂಪೂರ್ಣ ವಿಭಿನ್ನವಾಗಿರುತ್ತಂತೆ. "ಸದಕ್ಕೆ ನನ್ನ ಬಳಿ ಎರಡು ಸ್ಕ್ರಿಪ್ಟ್ ಗಳಿವ್ಗೆ - ಒಂದು ರೊಮ್ಯಾಂಟಿಕ್ ಹಾಸ್ಯ ಮತ್ತೊಂದು ಸಂಪೂರ್ಣ ಹಾಸ್ಯ. ನನ್ನ ಎರಡನೇ ಸಿನೆಮಾಗೆ ಸಂಪೂರ್ಣ ವಿಭಿನ್ನ ವಿಷಯದ ಜೊತೆ ಕೆಲಸ ಮಾಡಬೇಕೆಂದೇ ಗ್ರಹಿಸಿದ್ದೆ. ಮುಂದಿನ ಒಂದೂವರೆ ತಿಂಗಳಲ್ಲಿ ಚಿತ್ರೀಕರಣದ ಮೊದಲ ಕೆಲಸಗಳು ಪ್ರಾರಂಭವಾಗಲಿವೆ. ಸದ್ಯಕ್ಕೆ ನಿರುಪ್ ಮುಖ್ಯಪಾತ್ರಧಾರಿ ಎಂದು ನಿಶ್ಚಯಿಸಿದ್ದೇನೆ" ಎನ್ನುತ್ತಾರೆ.
ಸದ್ಯಕ್ಕೆ ಉತ್ತರ ಕರ್ನಾಟಕದಲ್ಲಿ ಬಾಹುಬಲಿ ಹಾವಳಿಯಿಂದ ಚಿತ್ರಮಂದಿರಗಳಿಂದ ಹೊರಹಾಕಿದ್ದ ರಂಗಿತರಂಗ ಸಿನೆಮಾವನ್ನು ಮತ್ತೆ ಹಾಕುವಂತೆ ಚಿತ್ರಮಂದಿರ ಮಾಲಿಕರಿಗೆ ಮನವಿ ಮಾಡುತ್ತಿದ್ದಾರಂತೆ. ಈ ಸಿನೆಮಾ ಕರ್ನಾಟಕದ ಪ್ರತಿ ಹಳ್ಳಿಯನ್ನು ತಲುಪಬೇಕು ಎನ್ನುತ್ತಾರೆ ಅನುಪ್.
ವಿದೇಶಿ ಪ್ರೇಕ್ಷಕರು 'ರಂಗಿತರಂಗ' ನೋಡಲು ಬೇಡಿಕೆ ಸಲ್ಲಿಸುತ್ತಿರುವುದು ನಿರ್ದೇಶಕನಿಗೆ ಅತೀವ ಸಂತಸ ನೀಡಿದೆಯಂತೆ. ಯೂರೋಪಿನಲ್ಲಿ ಆಗಸ್ಟ್ ೧ ರಂದು ಸಿನೆಮಾ ಬಿಡುಗಡೆ ಕಾಣಲಿದೆ. ನಂತರ ಕೆನಡಾ, ನ್ಯೂಜೀಲ್ಯಾಂಡ್, ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲೂ ಸಿನೆಮಾ ಬಿಡುಗಡೆ ಕಾಣಲಿದೆಯಂತೆ.