ಸಿನಿಮಾ ಸುದ್ದಿ

ನಾಗಶೇಖರ್ ಮುಂದಿನ ಸಿನೆಮಾದಲ್ಲಿ ತಾಪ್ಸೀ ಪನ್ನು

Guruprasad Narayana

ಬೆಂಗಳೂರು: ಪರಭಾಷಾ ನಟಿಯರನ್ನು ಕನ್ನಡಕ್ಕೆ ತರುವುದರಲ್ಲಿ ನಿಸ್ಸೀಮರಾದ ನಾಗಶೇಖರ್, ನಾಲ್ಕು ಭಾಷೆಗಳಲ್ಲಿ ನಿರ್ದೇಶಿಸುತ್ತಿರುವ ತಮ್ಮ ಮುಂದಿನ ಸಿನೆಮಾಗೆ ತಾಪ್ಸೀ ಪನ್ನು ಅವರನ್ನು ಕರೆತಂದಿದ್ದಾರೆ. ತಮ್ಮದೇ ಚಿತ್ರ 'ಮೈನಾ'ಗೆ ಈ ಹಿಂದೆ ನಿತ್ಯಾ ಮೆನನ್ ಅವರನ್ನು ಕರೆತಂದಿದ್ದರು.

ನಿರ್ಮಾಪಕ ಕೆ ಪಿ ಶ್ರೀಕಾಂತ್ ಜೊತೆ ಚನ್ನೈಗೆ ತೆರಳಿ ನಟಿ ಪನ್ನು ಅವರಿಗೆ ಕಥೆ ಹೇಳಿರುವ ನಾಗಶೇಖರ್ "ಸ್ಕ್ರಿಪ್ಟಿಂಗ್ ನಿಂದಲೂ ನನ್ನ ತಲೆಯಲ್ಲಿ ತಾಪ್ಸೀ ಅವರೇ ಇದ್ದರು. ಅವರು ಕಥೆಯನ್ನು ಮೆಚ್ಚಿದ್ದಾರೆ. ಮತ್ತು ಹಸಿರು ನಿಶಾನೆ ತೋರಿದ್ದಾರೆ. ಇನ್ನುಳಿದದ್ದನ್ನು ನಿರ್ಮಾಪಕರು ಮುಂದುವರೆಸುತ್ತಾರೆ" ಎಂದಿದ್ದಾರೆ.

ನಾಲ್ಕೂ ಭಾಷೆಗಳಲ್ಲಿ ತಾಪ್ಸೀ ಕಾಣಿಸಿಕೊಳ್ಳಲಿದ್ದಾರೆ. ಕನ್ನಡದಲ್ಲಿ ನಟಿಸುತ್ತಿರುವ ಚೇತನ್ ಮಲೆಯಾಳಮ್ ನಲ್ಲೂ ಪಾದಾರ್ಪಣೆ ಮಾಡಲಿದ್ದಾರೆ. "ನನ್ನ ಮುಂದಿನ ನಡೆ ತೆಲುಗು ಮತ್ತು ತಮಿಳು ಅವತರಿಣಿಕೆಗಳಿಗೆ ನಾಯಕ ನಟರನ್ನು ಆಯ್ಕೆ ಮಾಡುವುದು. ನನಗೆ ಸಿದ್ಧಾರ್ಥ್ ಅಥವಾ ದಲ್ಕ್ವೇರ್ ಸಲ್ಮಾನ್ ಅವರ ಜೊತೆ ಕೆಲಸ ಮಾಡುವಾಸೆ. ಸಿದ್ಧಾರ್ಥ್ ಜೊತೆ ಮಾತನಾಡಲು ಚೆನ್ನೈಗೆ ಮತ್ತೆ ತೆರಳುತ್ತಿದ್ದೇನೆ. ಅವರು ಸೇರಿಕೊಳ್ಳುತ್ತಾರೆ ಎಂಬ ನಂಬಿಕೆಯಿದೆ" ಎನ್ನುತ್ತಾರೆ.

ಸೆಪ್ಟಂಬರ್ ನಲ್ಲಿ ಸಿನೆಮಾದ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಮಿಳು ಶೀರ್ಷಿಕೆ ಎಥಿರ್ಗಾಳಂ ಎಂದೂ ಮತ್ತು ತೆಲುಗಿನಲ್ಲಿ ಅಪ್ಪಡಪ್ಪಡು ಎಂದಿದೆ. ಕನ್ನಡ ಮತ್ತು ಮಲಯಾಳಮ್ ಭಾಷೆಗಳಿಗೆ ಒಳ್ಳೆಯ ಶೀರ್ಷಿಕೆಯ ಹುಡುಕಾಟದಲ್ಲಿದ್ದಾರೆ ನಾಗಶೇಖರ್. "ತಾಪ್ಸೀ ಅವರನ್ನು ಸಿನೆಮಾದಲ್ಲಿ ನಟಿಸುವಂತೆ ಕೇಳಿಕೊಳ್ಳುವುದು ನನ್ನ ಪ್ರಥಮ ಆದ್ಯತೆಯಾಗಿತ್ತು. ಈಗ ಅದು ಮುಗಿದಿದೆ. ತಂತ್ರಜ್ಞರನ್ನು ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. ಎಲ್ಲ ಭಾಷೆಗಳಿಗೂ ಸಲ್ಲುವ ಸಿನೆಮ್ಯಾಟೋಗ್ರಫರ್ ಮತ್ತು ಸಂಗೀತ ನಿರ್ದೇಶಕನ ಹುಡುಕಾಟದಲ್ಲಿದ್ದೇನೆ" ಎನ್ನುತ್ತಾರೆ ನಿರ್ದೇಶಕ.

SCROLL FOR NEXT