ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ನಟಿ ಪ್ರಿಯಾಮಣಿ ಸಾಮಾನ್ಯವಾಗಿ ಗ್ಲ್ಯಾಮರಸ್ ಪಾತ್ರಗಳಿಗೆ ಪ್ರಖ್ಯಾತ. ಈಗ ಮೊದಲ ಬಾರಿಗೆ ತಮ್ಮ ವೃತ್ತಿ ಜೀವನದಲ್ಲಿ ಖಾಕಿ ತೊಡಲಿದ್ದಾರೆ. ಸಂಗೀತ ನಿರ್ದೇಶಕ-ಚಿತ್ರ ನಿರ್ದೇಶಕ ಆರ್ ಪಿ ಪಟ್ನಾಯಕ್ ನಿರ್ದೇಶನದ ಇನ್ನೂ ಹೆಸರಿಡದ ತೆಲುಗು-ಕನ್ನಡ ದ್ವಿಭಾಷಾ ಚಿತ್ರಕ್ಕೆ ಪ್ರಿಯಾಮಣಿ ಈ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
"ನನ್ನ ಸಿನೆಮಾದಲ್ಲಿ ಪ್ರಿಯಾ ಸಿಬಿಐ ಅಧಿಕಾರಿ ಪಾತ್ರ ನಿರ್ವಹಿಸಲಿದ್ದಾರೆ. ಅವರನ್ನು ಕೇವಲ ಗ್ಲ್ಯಾಮರಸ್ ಅವತಾರಗಳಲ್ಲಿ ನೋಡುವವರಿಗೆ ಇದು ಸಂತಸದಾಯಕ ಆಶ್ಚರ್ಯವಾಗಲಿದೆ" ಎನ್ನುತ್ತಾರೆ ಪಟ್ನಾಯಕ್.
ಈ ಸಿನೆಮಾ ರಾಜಕೀಯ ಥ್ರಿಲ್ಲರ್ ಆಗಿದ್ದು ಪ್ರಿಯಾ ಸಿನೆಮಾದ ನಾಯಕ ನಟಿ.
"ಸಿನೆಮಾದಲ್ಲಿ ಸಾಕಷ್ಟು ಡ್ರಾಮ ಮತ್ತು ಥ್ರಿಲ್ ಇದೆ. ಪ್ರಿಯಾ ಪಾತ್ರ ಹಿಂದಿನ 'ಕರ್ತವ್ಯಂ' ಸಿನೆಮಾದ ವಿಜಯಶಾಂತಿ ಅವರನ್ನು ನೆನಪಿಸಲಿದೆ. ಪ್ರಿಯಾ ಅವರು ಈ ಪಾತ್ರಕ್ಕಾಗಿ ಸಿಬಿಐ ಅಧಿಕಾರಿಗಳ ಹಾವ ಭಾವಗಳನ್ನು ಪರಿಪಕ್ವವಾಗಿ ಕಲಿತಿದ್ದಕ್ಕೆ ಅವರು ಅಭಿನಂದನಾರ್ಹರು" ಎನ್ನುತ್ತಾರೆ ನಿರ್ದೇಶಕ.
ಪಟ್ನಾಯಕ್ ಅವರೇ ನಿರ್ಮಿಸುತ್ತಿರುವ ಈ ಸಿನೆಮಾವನ್ನು ಆಗಸ್ಟ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.