ಸಿನಿಮಾ ಸುದ್ದಿ

ಪುಟ್ಟಣ್ಣ ಕಣಗಾಲ್ ಜಯಂತಿ; ಎರಡು ಸ್ವಾರಸ್ಯಕರ ಪ್ರಸಂಗಗಳು

Guruprasad Narayana

ಕನ್ನಡದ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಜನ್ಮ ದಿನ ಇಂದು. ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ 'ರಂಗನಾಯಕಿ', 'ಗೆಜ್ಜೆಪೂಜೆ', 'ಶುಭಮಂಗಳ', 'ನಾಗರಹಾವು' ಇಂತಹ ಸಿನೆಮಾಗಳನ್ನು ನಿರ್ದೇಶಿಸಿದ ಪುಣ್ಯಾತ್ಮ, ವಿಷ್ಣುವರ್ಧನ್ ಮತ್ತು ಅಂಬರೀಶ್, ಶ್ರೀನಾಥ್ ಇಂತಹ ನಟರಿಗೆ ಸ್ಟಾರ್ ಪಟ್ಟ ನೀಡಿದವರು ಕೂಡ. ಇವರನ್ನು ನೆನೆಯಲು ಬರಹಗಾರ ಜಗನ್ನಾಥ್ ಬಹುಳೆ ಮೇರು ನಿರ್ದೇಶಕರ ಸಂಬಧದ ಎರಡು ಪ್ರಸಂಗಗಳನ್ನು ಇಲ್ಲಿ ನೀಡಿದ್ದಾರೆ.

ಊಟ ಬಿಟ್ಟು ಅತ್ತಾಗ

ಚಿತ್ರದುರ್ಗದ ಬೆಟ್ಟದಲ್ಲಿ ಪುಟ್ಟಣ್ಣನವರ `ನಾಗರಹಾವು' ಚಿತ್ರೀಕರಣ ಸಾಗಿತ್ತು. ಪುಟ್ಟಣ್ಣ ಪ್ರವಾಸಿ ಮಂದಿರದಲ್ಲಿ ಮೊಕ್ಕಾಂ ಹಾಕಿದ್ದರೂ ಹೋಟೆಲು ಊಟ ಬೇಕೆನಿಸಿದಾಗಲೆಲ್ಲ ದುರ್ಗದಲ್ಲಿಯೇ ಇದ್ದ ಮಾಸ್ಟರ್ ಹಿರಣ್ಣಯ್ಯನವರ ಮನೆಗೆ ಬಂದುಬಿಡುತ್ತಿದ್ದರು. ಹರಟೆ ಹೊಡೆಯುತ್ತಿದ್ದರು. ಅದು ಬೆಟ್ಟದ ಮೇಲೆ ದುರ್ಗಮವಾದ, ಎತ್ತರದ, ರಮಣೀಯ ಸ್ಥಳಗಳಲ್ಲಿ ಅತ್ಯಂತ ಸಾಹಸದಿಂದ ಚಿತ್ರದ ಮೂರು ಹಾಡುಗಳನ್ನು ಮುಗಿಸಿ, ಅದರ ನೆಗೆಟೀವ್ ಗಳನ್ನು ಮದರಾಸಿಗೆ ಕಳುಹಿಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಸಂದರ್ಭ. ಕುತೂಹಲ ತಡೆಯಲಾರದೆ ಸ್ವಯಂ ಹಿರಣ್ಣಯ್ಯನವರೇ ಮೂರಾಲ್ಕು ದಿನದ ಬಳಿಕ ಪುಟ್ಟಣ್ಣನವರ ಬಳಿಗೆ ಬಂದು ಚಿತ್ರೀಕರಣವಾಗಿದ್ದ ಹಾಡುಗಳ ಬಗ್ಗೆ ಕೇಳಿದರು. ಆದರೆ ಅಂದು ಪುಟ್ಟಣ್ಣ ಯಾರೊಂದಿಗೂ ಮಾತನಾಡದೆ ಮೌನವಾಗಿ ಕುಳಿತಿದ್ದರು.ಇಡೀ ತಂಡ ಸ್ತಬ್ಧವಾಗಿತ್ತು. ಪುಟ್ಟಣ್ಣನವರು ತಮ್ಮ ಕೋಣೆಯಲ್ಲಿ ಕಣ್ಣೀರಿಡುತ್ತಾ ಒಂಟಿಯಾಗಿ ಕುಳಿತಿದ್ದಾರೆ. ಊಟ ಸಹ ಮಾಡಿರಲಿಲ್ಲ. ಹಿರಣ್ಣಯ್ಯನವರು ಪುಟ್ಟಣ್ಣನವರ ಧಾರಕಾರದ ಕಣ್ಣೀರಿಗೆ ಕಾರಣ ತಿಳಿದು ವಿಸ್ಮಿತರಾದರು. ಆಗಿದ್ದಿಷ್ಟು, ಆ ದುರ್ಗಮ ಬೆಟ್ಟದಲ್ಲಿ ಎಲ್ಲರೂ ಶ್ರಮವಹಿಸಿ ಚಿತ್ರೀಕರಿಸಿದ್ದ ಮೂರು ಹಾಡುಗಳು ನಾನ್ ಸಿಂಕ್ ಆಗಿಬಿಟ್ಟಿತ್ತು. ಅದಕ್ಕೆ ತಾಂತ್ರಿಕ ದೋಷವೇ ಕಾರಣವಾಗಿತ್ತು. ಅದನ್ನು ನಿರ್ದೇಶಕರು ಗಮನಿಸಬೇಕಾಗಿತ್ತು. ತಾನು ಮಾಡಿದ ತಪ್ಪಿಗೆ ಕಲಾವಿದರು, ತಂತ್ರಜ್ಞರು ಶಿಕ್ಷೆ ಅನುಭವಿಸಿದರಲ್ಲ. ನಿರ್ಮಾಪಕರಿಗೆ ಹಣ, ಸಮಯ, ನಷ್ಟವಾಯಿತಲ್ಲ ಎಂಬ ಕೊರಗಿಗೆ ಬಲಿಯಾಗಿ ಪುಟ್ಟಣ್ಣ ನಿರಾಹಾರಿಯಾಗಿ ಕಣ್ಣೀರಿಡುತ್ತಿದ್ದರು. ಕರ್ತವ್ಯದಲ್ಲಿ ಪ್ರಾಮಾಣಿಕತೆ ಎಂದರೆ ಇದೇ ಅಲ್ಲವೇ?​​

ರಾಮಕೃಷ್ಣನಿಗೆ ನಾನು ಗುರು

ಮಾನಸ ಸರೋವರ ಚಿತ್ರದ ಚಿತ್ರೀಕರಣ ಬಳ್ಳಾರಿ ಸಮೀಪದ ಸಿರಗುಪ್ಪದಲ್ಲಿ ನಡೆಯುತ್ತಿತ್ತು. ಸಾವಿರಾರು ಮಂದಿ ಚಿತ್ರೀಕರಣ ವೀಕ್ಷಿಸಲು ಸೇರಿದ್ದರು. ಪ್ಲೇಬಾಯ್ ಖ್ಯಾತಿಯ ರಾಮಕೃಷ್ಣ ಅವರ ಮೇಲೆ `ಚಂದ ಚಂದ' ಗೀತೆಯ ಚಿತ್ರಣವಿತ್ತು. ರಾಮಕೃಷ್ಣ ದೃಷ್ಟಿ ಹಾಯಿಸಿ ಆಗಸದತ್ತ ಮುಖ ಮಾಡುತ್ತಾ ಹಾಡಬೇಕಾಗಿತ್ತು. ಆದರೆ ಆಗಸದತ್ತ ಮುಖ ಮಾಡುತ್ತಲೇ ರಾಮಕೃಷ್ಣ ಕಣ್ಣು ಮುಚ್ಚಿಬಿಡುತ್ತಿದ್ದರು. ಐದಾರು ಶಾಟ್ ಆದರೂ ದೃಶ್ಯ ಓ.ಕೆ. ಆಗಲಿಲ್ಲ. ಸಿಟ್ಟಿಗೆದ್ದ ಪುಟ್ಟಣ್ಣ ರಾಮಕೃಷ್ಣರಿಗೆ ಸಾವಿರಾರು ಜನರೆದುರೆ ಸಖತ್ತಾಗಿ ಬಾರಿಸಿದರು. ಜನರಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ಹೆಚ್ಚಾಗಿದ್ದುದರಿಂದ ಹೋ ಎಂದು ಕಿರುಚಿದರು, ಅಸಮಾಧಾನಗೊಂಡರು.

ಶೂಟಿಂಗ್ ನಿಲ್ಲಿಸಿದ ಪುಟ್ಟಣ್ಣ ಅವರನೆಲ್ಲ ಬಳಿಗೆ ಕರೆದು `ನಿಮ್ಮ ಮೇಷ್ಟ್ರು ನೀವು ಸರಿಯಾಗಿ ಓದದಿದ್ದರೆ, ಗಲಾಟೆ ಮಾಡಿದರೆ ಏನು ಮಾಡುತ್ತಾರೆ' ಎಂದು ಪ್ರಶಿಸಿದರು. ವಿದ್ಯಾರ್ಥಿಗಳು ತೋಚಿದ ಶಿಕ್ಷೆಗಳನು ವಿವರಿಸಿದರು. `ಇದು ಹಾಗೆಯೇ. ರಾಮಕೃಷ್ಣನಿಗೆ ನಾನು ಗುರು. ಆತ ಸರಿಯಾಗಿ ಪಾತ್ರ ಮಾಡದಿದ್ದರೆ ಹೊಡೆಯುವ ಅಧಿಕಾರ ನನಗಿದೆ. ಇದಕ್ಕೆ ಹೀಗೆಲ್ಲ ನೀವು ಕೂಗಬಾರದು' ಎಂದು ಸಮಾಧಾನಗೊಳಿಸಿ ಶೂಟಿಂಗ್ ಆರಂಭಿಸಿದರು. ಶಾಟ್ ಓ.ಕೆ. ಆಯ್ತು. ಜನತೆಯ ಅಭಿಮಾನದ ಹೊಂದಾಣಿಕೆಯಿಂದ.​

-ಬಹುಳೆ

SCROLL FOR NEXT