ಬೆಂಗಳೂರು: ಇಂದು ರಿಯಲ್ ಸ್ಟಾರ್ ಉಪೇಂದ್ರಗೆ ಹುಟ್ಟು ಹಬ್ಬದ ಸಂಭ್ರಮ. 47ನೇ ವಸಂತಕ್ಕೆ ಕಾಲಿಟ್ಟ ಸೂಪರ್ ಸ್ಟಾರ್ ಉಪೇಂದ್ರ ಅಭಿಮಾನಿಗಳ ಜತೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು.
ಇನ್ನು ಕತ್ರಿಗುಪ್ಪೆಯಲ್ಲಿರುವ ಉಪ್ಪಿ ಮನೆ ಮುಂದೆ ನೆರೆದಿದ್ದ ನೂರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಕೇಕ್ ತಿನ್ನಿಸಿ, ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ರು.
ರಾತ್ರಿ 12 ಗಂಟೆಗೆ ಅಭಿಮಾನಿಗಳು ತಂದಿದ್ದ ಕೇಕ್ ಕತ್ತರಿಸಿದ ಉಪೇಂದ್ರ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಕಲಾವಿದರ ಮೇಲೆ ಅಭಿಮಾನಿಗಳಿಟ್ಟಿರುವ ಪ್ರೀತಿ ಸಂತಸ ತಂದಿದೆ, ಅಭಿಮಾನಿಗಳಿಂದಲೇ ಕಲಾವಿದರು ದೊಡ್ಡ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ರಿಯಲ್ ಸ್ಟಾರ್ ಉಪೇಂದ್ರರ ಹುಟ್ಟು ಹಬ್ಬಕ್ಕೆ ಉಡುಗೊರೆಯೆಂಬಂತೆ ಒಂದು ದಿನ ಮುಂಚಿತವಾಗಿ ಕಾಂಬೋಡಿಯಾದ ಅಂಕೋರ್ ವಿಶ್ವ ವಿದ್ಯಾನಿಲಯ ಚಿತ್ರರಂಗದಲ್ಲಿನ ಅವರ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಿದ್ದು, ಅಭಿಮಾನಿಗಳ ಸಂತಸವನ್ನು ಇಮ್ಮಡಿಗೊಳಿಸಿದೆ.