ಬೆಂಗಳೂರು: ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ಶೂಟಿಂಗ್ ಭಾಗಶಃ ಮುಗಿದಿದ್ದು, ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಈ ವಾರಾಂತ್ಯದಲ್ಲಿ ಕಣಿವೆ ರಾಜ್ಯಕ್ಕೆ ತೆರಳಲಿದೆ.
ಹಲವು ಪ್ರಯತ್ನಗಳ ನಂತರ ಕಾಶ್ಮೀರದಲ್ಲಿ ಶೂಟಿಂಗ್ ಮಾಡಲು ಅನುಮತಿ ಸಿಕ್ಕಿದೆ. ವಿಧಿಸಿದ್ದ ಕರ್ಫ್ಯೂ ತೆರವುಗೊಳಿಸಿರುವುದರಿಂದ ಈ ವಾರಾಂತ್ಯದಲ್ಲಿ ಚಿತ್ರದ ಶೂಟಿಂಗ್ ಗಾಗಿ, ಸುದೀಪ್ ಸೇರಿ 60 ಮಂದಿಯ ಚಿತ್ರತಂಡ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಲಿದೆ ಎಂದು ಚಿತ್ರದ ನಿರ್ದೇಶಕ ಎಸ್. ಕೃಷ್ಣ ತಿಳಿಸಿದ್ದಾರೆ.
ಕಾಶ್ಮೀರದಲ್ಲಿನ ಉದ್ವಿಘ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, 7 ದಿನಗಳ ಕಾಲ ನಾವು ಅಲ್ಲಿ ಶೂಟಿಂಗ್ ನಡೆಸುತ್ತೇವೆ, ಈಗಾಗಲೇ ಚಿತ್ರತಂಡದ ಕೆಲವು ಮಂದಿ ಕಾಶ್ಮೀರಕ್ಕೆ ತೆರಳಿದ್ದಾರೆ.
ಸೆಪ್ಟಂಬರ್ 2 ರಂದು ನಟ ಸುದೀಪ್ ಹುಟ್ಟು ಹಬ್ಬವಿದ್ದು, ಹುಟ್ಟುಹಬ್ಬದ ನಂತರ ಸುದೀಪ್, ನಟಿ ಅಮಲಾ ಪೌಲ್ ಮತ್ತು ಚಿಕ್ಕಣ್ಣ ಸೇರಿದಂತೆ ಉಳಿದ ನಟರು ತೆರಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಚಿತ್ರೀಕರಣ ನಡೆಸುವ ಸ್ಥಳದಲ್ಲಿ ಎಲ್ಲಾ ಭದ್ರತೆಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.