ಬೆಂಗಳೂರು: ದೇಶದಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಚಲನಚಿತ್ರ ಪ್ರದರ್ಶನಕ್ಕೂ ಮುಂಚಿತವಾಗಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಚರ್ಚೆಯ ಬಿಸಿ ವಿಷಯವಾಗಿದ್ದರೆ, ನಗರದ ಜನಪ್ರಿಯ ಚಿತ್ರಮಂದಿರವೊಂದು ೧೯೮೮ ರಿಂದಲೂ ನಿರಂತರವಾಗಿ ರಾಷ್ಟಗೀತೆಯನ್ನು ಪ್ರದರ್ಶಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ೧೯೭೩ ರಲ್ಲಿ ಉದ್ಘಾಟನೆಯಾಗಿದ್ದ ಮಾಗಡಿ ಮುಖ್ಯರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರ (ಹಿಂದೆ ಶಾಂತಲಾ ಚಿತ್ರಮಂದಿರ ಎಂಬ ಹೆಸರು ಪಡೆದಿತ್ತು) ಈ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಸಂಸ್ಥೆ.
ಈ ಸಿನೆಮಾದ ಮಾಲೀಕ ಕೆ ವಿ ಚಂದ್ರಶೇಖರ ಹೇಳುವಂತೆ "ನನ್ನ ಸಹೋದರ ಕೆ ಧನಂಜಯ ಸಿಂಗಾಪುರ ದೇಶಕ್ಕೆ ಹೋದಾಗ ಅಲ್ಲಿ ಎಲ್ಲಾ ಚಿತ್ರಮಂದಿರಗಳಲ್ಲೂ ಅವರ ರಾಷ್ಟ್ರಗೀತೆ ನುಡಿಸುವುದನ್ನು ಕಂಡಿದ್ದರು ಮತ್ತು ಅಲ್ಲಿ ಅದಕ್ಕೆ ಎಲ್ಲರು ಗೌರವ ನೀಡುತ್ತಿದ್ದರು. ನಮ್ಮ ಕೌಟುಂಬಿಕ ವ್ಯವಹಾರ ಅದನ್ನು ಅನುಕರಿಸಬೇಕು ಎಂಬುದು ಅವರ ಆಸೆಯಾಗಿತ್ತು. ಆದದರಿಂದ ಅದನ್ನು ಒಳಗೊಂಡು, ಇದನ್ನು ತಪ್ಪದೆ ನಡೆಸಿಕೊಂಡು ಹೋಗುತ್ತಿದ್ದೇವೆ" ಎನ್ನುತ್ತಾರೆ.
ರೀಲ್ ನಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ಮಾರ್ಪಾಡಾದ ಮೇಲೆ ಇದು ಸುಗಮವಾಯಿತು ಎನ್ನುವ ಅವರು, ಇದಕ್ಕೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯಿಸಿದರು ಎಂಬ ಪ್ರಶ್ನೆಗೆ "ಮೊದಲ ಆರು ತಿಂಗಳು ಎಷ್ಟೋ ಜನಕ್ಕೆ ರಾಷ್ಟ್ರಗೀತೆ ನುಡಿಸುವಾಗ ಎದ್ದು ನಿಲ್ಲಬೇಕು ಎಂದು ಕೂಡ ತಿಳಿದಿರಲಿಲ್ಲ, ಆದರೆ ನಿಧಾನವಾಗಿ ಇನ್ನಿತರರನ್ನು ನೋಡಿ ಕಲಿಯುತ್ತ ಹೋದರು" ಎನ್ನುತ್ತಾರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕರು ಆಗಿದ್ದ ಚಂದ್ರಶೇಖರ.
೧೯೫೦ ರಿಂದ ೧೯೭೯ ರ ನಡುವೆ ಬಹುತೇಕ ಎಲ್ಲ ಚಿತ್ರಮಂದಿರಗಳಲ್ಲೂ ರಾಷ್ಟ್ರಗೀತೆ ಪ್ರಸಾರ ಮಾಡುತ್ತಿದ್ದನ್ನು ನೆನಪಿಸಿಕೊಳ್ಳುವ ಅವರು "ಇದನ್ನು ಅಂತ್ಯದಲ್ಲಿ ಹಾಡಲಾಗುತ್ತಿತ್ತು, ಆದರೆ ಜನ ಸಿನೆಮಾ ಮುಗಿದ ನಂತರ ಹೊರ ನಡೆದುಬಿಡುತ್ತಿದ್ದರು. ಆದುದರಿಂದ ೧೯೮೮ ರಲ್ಲಿ ನಾವು ಸಿನೆಮಾಗೆ ಮುಂಚಿತವಾಗಿ ರಾಷ್ಟ್ರಗೀತೆ ಹಾಕುವುದೆಂದು ನಿಶ್ಚಯಿಸಿದೆವು" ಎನ್ನುತ್ತಾರೆ ಚಂದ್ರಶೇಖರ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos