ಸಿನೆಮಾ ನಟಿಯಾಗಿ ಜಯಲಲಿತಾ 
ಸಿನಿಮಾ ಸುದ್ದಿ

ಅಮ್ಮ ಸಿನೆಮಾಯಾನ: ೧೪೦ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದ ಜಯಲಲಿತಾ

ತಮ್ಮ ರಾಜಕೀಯ ಅವತಾರದಲ್ಲಿ ಜನರ ಅಭಿಮಾನ ಗಳಿಸುವುದಕ್ಕೂ ಮುಂಚಿತವಾಗಿ ಜೆ ಜಯಲಲಿತಾ, ೧೯೬೦ ಮತ್ತು ೧೯೭೦ ರ ನಡುವೆ ಜನಪ್ರಿಯ ನಟಿಯಾಗಿ ತಮಿಳು ಚಿತ್ರರಂಗದ ಅನಿಭಿಷಿಕ್ತ ರಾಣಿ

ಚೆನ್ನೈ: ತಮ್ಮ ರಾಜಕೀಯ ಅವತಾರದಲ್ಲಿ ಜನರ ಅಭಿಮಾನ ಗಳಿಸುವುದಕ್ಕೂ ಮುಂಚಿತವಾಗಿ ಜೆ ಜಯಲಲಿತಾ, ೧೯೬೦ ಮತ್ತು ೧೯೭೦ ರ ನಡುವೆ ಜನಪ್ರಿಯ ನಟಿಯಾಗಿ ತಮಿಳು ಚಿತ್ರರಂಗದ ಅನಿಭಿಷಿಕ್ತ ರಾಣಿಯಾಗಿದ್ದವರು. ದಕ್ಷಿಣ ಭಾರತದ ಸಿನೆಮಾದಲ್ಲಿ ಅವರು ಬೆಳಗಿದ ರೀತಿ, ಮತ್ತು ನಂತರ ಅದರಿಂದ ದೂರವುಳಿದಿದ್ದು, ಸಿನೆಮಾ ಸ್ಕ್ರಿಪ್ಟ್ ನಂತೆಯೇ ಕುತೂಹಲಕಾರಿಯಾದದ್ದು. 
೭೪ ದಿನಗಳ ಕಾಲ ಸಾವಿನೊಂದಿಗೆ ಹೋರಾಡಿದ ೬೮ ವರ್ಷದ ಜಯಲಲಿತಾ ನೆನ್ನೆ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಇದು ಚಿತ್ರರಂಗದ ಪಾಲಿಗೂ ತುಂಬಲಾರದ ನಷ್ಟ. 
ಜಯಲಲಿತಾ ವೈಭವಯುತ ಕುಟುಂಬದಲ್ಲಿ ಹುಟ್ಟಿದರೂ, ಅವರ ಸಣ್ಣ ವಯಸ್ಸಿನಲ್ಲಿಯೇ ಕುಟುಂಬ ಕೆಟ್ಟ ದಿನಗಳನ್ನು ಕಾಣಬೇಕಾಗಿ ಬಂದಿತ್ತು. ಆದುದರಿಂದ ಕುಟುಂಬದ ಬೆಂಬಲಕ್ಕೆ ನಿಂತು ತಮ್ಮ ತಾಯಿಯ ಹೆಜ್ಜೆಯನ್ನೇ ಅನುಸರಿಸಿ ತಾರಾಲೋಕಕ್ಕೆ ಇಳಿಯಬೇಕಾಗಿ ಬಂತು ಅವರಿಗೆ. 
ವ್ಯಕ್ತಿಗತವಾಗಿ ಜಯಲಲಿತಾ ಖ್ಯಾತಿಯನ್ನು ದ್ವೇಷಿಸುತ್ತಿದ್ದರು. ಸಿಮಿ ಗೀರ್ವಾಲ್ ಅವರೊಂದಿಗೆ ನೀಡಿದ ಒಂದು ಸಂದರ್ಶನದಲ್ಲಿ ಜಯಲಲಿತಾ "ನನ್ನ ಹಣೆಬರಹ ನನ್ನನ್ನು ಎರಡು ದೊಡ್ಡ ಮಟ್ಟದ ವೃತ್ತಿಜೀವನಕ್ಕೆ ನೂಕಿದೆ  (ಎರಡನೆಯದು ಅವರು ಮುಖ್ಯಮಂತ್ರಿಯಾದದ್ದು)" ಎಂದಿದ್ದರು.
೧೯೬೧ ರಲ್ಲಿ ಅವರು ಬೆಳ್ಳಿ ತೆರೆಯ ಸಂಪರ್ಕಕ್ಕೆ ಬಂದದ್ದು ಶಂಕರ್ ಗಿರಿ ನಿರ್ದೇಶನದ ಇಂಗ್ಲಿಷ್ ಚಿತ್ರ 'ಎಪಿಸ್ಟ್ಲೆ' ಮೂಲಕ. ೧೯೬೪ ರಲ್ಲಿ ಖ್ಯಾತ ನಿರ್ದೇಶಕ ಬಿ ಆರ್ ಪಂತಲು ಜಯಲಲಿತಾ ಅವರನ್ನು ಕನ್ನಡ ಸಿನೆಮಾ 'ಚಿನ್ನದ ಗೊಂಬೆ' ಮೂಲಕ ಪೂರ್ಣಪ್ರಮಾಣದ ನಾಯಕಿಯಾಗಿ ಪರಿಚಿಸದರು. ಜಯಲಲಿತಾ ನಟನೆಗೆ ಈ ಸಿನೆಮಾ ಹೆಚ್ಚು ಗಮನ ಸೆಳೆದಿತ್ತು. 
೧೯೬೫ ಅಲ್ಲಿ ಅವರು ತಮಿಳು ಮತ್ತು ತೆಲುಗು ಸಿನೆಮಾ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ 'ವೆನ್ನಿರ ಅಡೈ' ಮತ್ತು 'ಮನಶುಳು ಮಮತಾಲು' ಸಿನೆಮಾಗಳಲ್ಲಿ ಕ್ರಮವಾಗಿ ನಟಿಸಿದರು. ಶ್ರೀಧರ್ ನಿರ್ದೇಶನದ 'ವೆನ್ನಿರ ಅಡೈ'ನಲ್ಲಿ ಮಾನಸಿಕ ಅಸ್ವಸ್ಥೆಯ ಪಾತ್ರ ನಿರ್ವಹಿಸಿದ್ದ ಜಯಲಲಿತಾ ಎಲ್ಲರ ಪ್ರಶಂಸೆಗೆ ಪಾತ್ರರಾದವರು. 
೧೯೬೫ ರಲ್ಲಿ ಎಂ ಜಿ ರಾಮಚಂದ್ರನ್ ಎದುರು ನಟಿಸಲು ಪಂತುಲು ಜಯಲಲಿತಾ ಅವರನ್ನು ಆಯ್ಕೆ ಮಾಡಿದಾಗ ಈ ಜೋಡಿ ಇತಿಹಾಸ ಸೃಷ್ಟಿಸುತ್ತದೆ ಎಂದು ಅವರು ಊಹಿಸಿರಲಿಕ್ಕಿಲ್ಲ. ಈ ಜೋಡಿ ಮುಂದೆ ಒಟ್ಟು ೨೮ ಸಿನೆಮಾಗಳಲ್ಲಿ ನಟಿಸಿದ್ದು  ವಿಶೇಷ. 
ಎಂ ಜಿ ಆರ್ ಜೊತೆಗೆ ನಟಿಸಿದ ಹಲವು ಸಿನೆಮಾಗಳಲ್ಲಿ 'ಅಡಿಮೈ ಪೆಣ್', 'ಕಾವಲ್ಕಾರನ್'. 'ರಾಮನ್ ತೇದಿಯ ಸೀತೈ' ಮತ್ತು 'ತೇದಿ ವಂದ ಮಾಪಿಳ್ಳೈ' ಇಂದಿಗೂ ಹಸಿರಾಗಿಯೇ ಉಳಿದಿವೆ. 
ಈ ಸಮಯದ ಆಸಕ್ತಿದಾಯಕ ವಿಷಯವೆಂದರೆ, 'ಅಡಿಮೈ ಪೆಣ್' ಸಿನೆಮಾದಲ್ಲಿ ಜಯಲಲಿತಾ ಖ್ಯಾತ ನಟಿ ಸರೋಜಾ ದೇವಿಯನ್ನು ಬದಲಾಯಿಸಿದ್ದರು,. ಸರೋಜಾ ದೇವಿ ಆ ಸಮಯಕ್ಕೆ ವಿವಾಹವಾಗಿದ್ದರಿಂದ, ಎಂ ಜಿ ಆರ್ ಇಡೀ ಸಿನೆಮಾವನ್ನು ಜಯಲಲಿತಾ ಜೊತೆಗೆ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. 
ಬಹಳ ಚಲನಶೀಲ ವ್ಯಕ್ತಿತ್ವವಾಗಿದ್ದ ಜಯಲಲಿತಾ ಗ್ಲಾಮರಸ್ ಪಾತ್ರಗಳಲ್ಲಿ ನಟಿಸಲು ಹಿಂಜರಿಯಲಿಲ್ಲ. ಆಧುನಿಕ ಪಾಶ್ಚಿಮಾತ್ಯ ಬಟ್ಟೆಗಳನ್ನು ಸಿನೆಮಾದಲ್ಲಿ ಧರಿಸುತ್ತಿದ್ದ ಮೊದಲು ತಮಿಳು ನಟಿ ಎಂದೇ ಅವರನ್ನು ಗುರುತಿಸಲಾಗುತ್ತದೆ. 
ಖ್ಯಾತ ನಟ ಶಿವಾಜಿ ಗಣೇಶನ್ ಅವರೊಂದಿಗೂ ಜಯಲಲಿತಾ ಹಲವು ಸಿನೆಮಾಗಳಲ್ಲಿ ನಟಿಸಿದ್ದರು. 'ಮೋಟಾರ್ ಸುಂದರಂ ಪಿಳ್ಳೈ', 'ಗಲಾಟ ಕಲ್ಯಾಣಂ' ಮತ್ತು 'ಎಂಜಿರಂದೋ ವಂಧಲ್' ಸಿನೆಮಾಗಳು ಇಂದಿಗೂ ಅವಿಸ್ಮರಣೀಯ. 
'ಎಂಜಿರಂದೋ ವಂಧಲ್' ಸಿನೆಮಾದಲ್ಲಿ ಅವರು ವೇಷ್ಯೆಯಿಂದ ಪತ್ನಿಯಾಗಿ ಬದಲಾಗುವುದರಲ್ಲಿ ಮಾಡಿದ್ದ ಅಭಿನಯ ಸಿನೆಮಾರಂಗದಲ್ಲಿ ಅವರನ್ನು ಮುನ್ನಲೆಗೆ ತಂದಿತು. 
೧೯೭೩ ರಲ್ಲಿ ತಮಿಳು ಸಿನೆಮಾ 'ಸೂರ್ಯಕಾಂತಿ'ಗೆ ಜಯಲಲಿತಾ ಎರಡನೇ ಫಿಲಂಫೇರ್ ಪ್ರಶಸ್ತಿ ಗಳಿಸಿದ್ದರು. 
ತೆಲುಗಿನಲ್ಲಿ ಜಯಲಲಿತಾ ೨೮ ಸಿನೆಮಾಗಳಲ್ಲಿ ನಟಿಸಿದ್ದಾರೆ. ಖ್ಯಾತ ನಟ ಎನ್ ಟಿ ಆರ್, ಅಕ್ಕಿನೇನಿ ನಾಗೇಶ್ವರ್ ರಾವ್ ಅವರೊಂದಿಗೂ ಜಯಲಲಿತಾ ಅಭಿನಯಿಸಿರುವುದು ವಿಶೇಷ. 
ಕನ್ನಡದಲ್ಲಿ ಜಯಲಲಿತಾ  'ಶ್ರೀ ಶೈಲ ಮಹಾತ್ಮೆ', 'ಚಿನ್ನದಗೊಂಬೆ', 'ಅಮರಶಿಲ್ಪಿ ಜಕಣಾಚಾರಿ', 'ಬದುಕುವ ದಾರಿ', 'ಮಾವನ ಮಗಳು', 'ಮನೆ ಅಳಿಯ', 'ನನ್ನ ಕರ್ತವ್ಯ' ಸಿನೆಮಾಗಳಲ್ಲಿ ನಟಿಸಿ ಖ್ಯಾತರಾದವರು. 
ಜಯಲಲಿತಾ ಅವರ ಒಂದೇ ಒಂದು ಹಿಂದಿ ಸಿನೆಮಾ 'ಇಜ್ಜತ್' ಹಾಗು ಮಲಯಾಳಂ ನಲ್ಲಿ ಎರಡು ಸಿನೆಮಾಗಳಲ್ಲಿ ನಟಿಸಿದ್ದಾರೆ. 
ಜಯಲಲಿತಾ ಬೆಳ್ಳಿತೆರೆಯಲ್ಲಿ ಕೊನೆಯಾಗಿ ಕಾಣಿಸಿಕೊಂಡದ್ದು  ೧೯೮೦ ರ ತಮಿಳು ಸಿನೆಮಾ 'ನಾಧಿಯಲ್ ತೇದಿ ವಂದ ಕಧಳ' ಸಿನೆಮಾದಲ್ಲಿ. ನಂತರ ಅವರು ರಾಜಕೀಯಕ್ಕೆ ಧುಮುಕಿ ಸಿನೆಮಾರಂಗವನ್ನು ತೊರೆದರು. 
೧೯೮೨ ರಲ್ಲಿ ಎ ಐ ಡಿ ಎಂ ಕೆ ಪಕ್ಷದ ಸದಸ್ಯೆಯಾಗಿ, ಬೆಳೆಯುತ್ತ ಹೋದ ಜಯಲಲಿತಾ ೧೯೯೧ ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರದ ರಾಜಕೀಯ ಕಳೆದುಕೊಂಡಷ್ಟೇ ಸಿನೆಮಾ ರಂಗ ಅತ್ಯತ್ತಮ ಚೈತನ್ಯವನ್ನು ನೆನ್ನೆ ಕಳೆದುಕೊಂಡಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT