ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ 'ನಟರಾಜ ಸರ್ವಿಸ್' ಚಿತ್ರತಂಡ ಮುಂದಿನ ೨೫ ದಿನಗಳವರೆಗೆ ದಾಂಡೇಲಿ ಮತ್ತು ಯಲ್ಲಾಪುರ ಕಾಡುಗಳಲ್ಲಿ ಶಿಬರ ಹೂಡಲಿದೆ. ಶರಣ್ ಮತ್ತು ಮಯೂರಿ ಸಿನೆಮಾದ ನಾಯಕ ಮತ್ತು ನಾಯಕಿ.
ಎನ್ ಎಸ್ ರಾಜಕುಮಾರ್ ನಿರ್ಮಾಣದ ಮತ್ತು ಪುನೀತ್ ರಾಜಕುಮಾರ್ ಅರ್ಪಿಸುತ್ತಿರುವ ಈ ಸಿನೆಮಾದ ಬಹಳಷ್ಟು ಚಿತ್ರೀಕರಣ ಈಗಾಗಲೇ ಸಂಪೂರ್ಣಗೊಂಡಿದ್ದು, ಮುಂದಿನ ಭಾಗ ಗೋವಾ ಗಡಿಯಲ್ಲಿ ನಡೆಯಲಿದೆ ಎನ್ನುತ್ತಾರೆ ನಿರ್ದೇಶಕ ಪವನ್.
ಯಲ್ಲಾಪುರ ಕನ್ನಡ ಚಿತ್ರ ನಿರ್ದೇಶಕರಿಗೆ ನೆಚ್ಚಿನ ಚಿತ್ರೀಕರಣ ತಾಣವಾಗುತ್ತಿರುವುದು ವಿಶೇಷ. ಇತ್ತೀಚೆಗಷ್ಟೇ ರಾಮ್ ಗೋಪಾಲ್ ವರ್ಮಾ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಕೆಲವು ಭಾಗಗಳ ಚಿತ್ರೀಕರಣವನ್ನು ಅಲ್ಲಿ ನಡೆಸಿದ್ದರು ಮತ್ತು ಪವನ್ ಅವರೇ ತಮ್ಮ ಚಿತ್ರ 'ಜೆಸ್ಸಿ'ಯ ಒಂದು ಹಾಡನ್ನು ಅಲ್ಲಿ ಚಿತ್ರೀಕರಿಸಿದ್ದರು.
ಚಿತ್ರೀಕರಣಕ್ಕೆ ಹವಾಮಾನ ಪಕ್ವವಾಗಿದೆ ಎನ್ನುವ ನಿರ್ದೇಶಕ "ಬೆಳಗಿನ ಮಂಜು ಹನಿಯ ನಡುವೆ ಸೂರ್ಯನ ಚಿನ್ನದ ಕಿರಣಗಳನ್ನು ಸೆರೆ ಹಿಡಿಯಲು ಉತ್ಸುಕನಾಗಿದ್ದೇನೆ. ನಾನು ನನ್ನ ಸಿನೆಮಾಗಳ ಚಿತ್ರೀಕರಣಕ್ಕೆ ಸ್ವಾಭಾವಿಕ ಸಂಪನ್ಮೂಲಗಳನ್ನು ಹೆಚ್ಚೆಚ್ಚು ಬಳಸಲು ಬಯಸುತ್ತೇನೆ" ಎನ್ನುತ್ತಾರೆ ಪವನ್.
ಇದೇ ಮೊದಲ ಬಾರಿಗೆ ಶರಣ್ ಮತ್ತು ಮಯೂರಿ ಒಟ್ಟಿಗೆ ನಟಿಸುತ್ತಿದ್ದಾರೆ.