ಸಿನಿಮಾ ಸುದ್ದಿ

'ತಿಥಿ' ಕಿರೀಟಕ್ಕೆ ಮತ್ತೊಂದು ಗರಿ; ಜರ್ಮನಿಯ ಚಲನಚಿತ್ರೋತ್ಸವದಲ್ಲಿ ಮತ್ತೊಂದು ಪ್ರಶಸ್ತಿ

Guruprasad Narayana
ಸ್ಟುಟ್ಗಾರ್ಟ್: ಜರ್ಮನಿಯ ಸ್ಟುಟ್ಗಾರ್ಟ್ ನಲ್ಲಿ ನಡೆದ 13 ನೇ ಭಾರತೀಯ ಸಿನೆಮಾ ಚಲನಚಿತ್ರೋತ್ಸವದಲ್ಲಿ 'ತಿಥಿ' ಕನ್ನಡ ಚಿತ್ರ 'ಜರ್ಮನ್ ಸ್ಟಾರ್ ಆಫ್ ಇಂಡಿಯಾ', ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ರಾಮ್ ರೆಡ್ಡಿ "ಇದರಿಂದ ನಿಜಕ್ಕೂ ಹರ್ಷಗೊಂಡಿದ್ದೇನೆ ಮತ್ತು ವಿನೀತನಾಗಿದ್ದೇನೆ" ಎಂದಿದ್ದಾರೆ.
"'ತಿಥಿ' ಸ್ಟುಟ್ಗಾರ್ಟ್ ಸಿನಿಮೋತ್ಸವದ ಮೂಲಕ ಜರ್ಮನಿಯಲ್ಲಿ ತೆರೆ ಕಂಡಿತು. ಇದು ಅತ್ಯುತ್ತಮ ಸಿನೆಮಾ ಪ್ರಶಸ್ತಿ ಗೆದ್ದಿರುವುದಕ್ಕೆ ಹರ್ಷಗೊಂಡಿದ್ದೇನೆ ಮತ್ತು ವಿನೀತನಾಗಿದ್ದೇನೆ. ಈ ಸಿನೆಮೋತ್ಸವ ನನಗೆ ವಿಶೇಷ ಏಕೆಂದರೆ ಐದು ವರ್ಷದ ಹಿಂದೆ ನನ್ನ ಸಣ್ಣ ಸಿನೆಮಾ 'ಇಕಾ' (ಗರಿ) ಮೊದಲ ಬಾರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರದರ್ಶಿಸಿದ್ದು ಇಲ್ಲಿಯೇ.
"ಈ ಪ್ರಶಸ್ತಿಯೊಂದಿಗೆ ಬಹುಷಃ ಈ ವರ್ಷ ಅತಿ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ಚಿತ್ರವಾಗಿ ನಾವು ಮುಂದುವರೆದಿದ್ದೇವೆ ಮತ್ತು 2016 ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮಾಂಕಿತವಾಗುವ ಭರವಸೆ ಹೊಂದಿದ್ದೇವೆ" ಎಂದು ರಾಮ್ ರೆಡ್ಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜುಲೈ 20-24 ರವರೆಗೆ ಮೆಟ್ರೋಪಾಲ್ ಸಿನೆಮಾದಲ್ಲಿ ನಡೆದ ಈ ಉತ್ಸವದಲ್ಲಿ ರಾಮ್ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ ಈ ಗೌರವಕ್ಕೆ ಪಾತ್ರವಾಗಿದೆ. 
ಹನ್ಸಲ್ ಮೆಹ್ತಾ ಅವರ 'ಆಲಿಘರ್', ಕಮರ್ಷಿಯಲ್ ಚಿತ್ರ 'ನಿರ್ಜಾ' ಮತ್ತು ಕಲ್ಕಿ ಕೋಲ್ಚಿನ್ ಹಾಗು ನಾಸಿರುದ್ದೀನ್ ಷಾ ನಟಿಸಿದ್ದ 'ವೇಟಿಂಗ್' ಮುಂತಾದ ಚಿತ್ರಗಳು ಈ ಸಿನಿಮೋತ್ಸವದ ಸ್ಪರ್ಧೆಯಲ್ಲಿದ್ದವು. 
ಈ ಸಿನಿಮೋತ್ಸವದ ತೀರ್ಪುಗಾರರ ತಂಡದಲ್ಲಿ ಭಾರತೀಯ-ಫ್ರೆಂಚ್ ನಿರ್ದೇಶಕ ಪ್ರಶಾಂತ್ ನಾಯರ್, ರ್ಯಾಪಿಡ್ ಐಸ್ ಮೂವೀಸ್ ನ ಥಾರ್ಸ್ಟನ್ ಪೀಟರ್ಸ್ ಮತ್ತು ಕಂಪನಿ ಜರ್ಮನ್ ಫಿಲಂಸ್ ನ ಕಾಂಸ್ಟಾಂಸ್ ವೇಲ್ಸ್ ಭಾಗವಾಗಿದ್ದರು. 
12ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸಿರುವ 'ತಿಥಿ' ಇಲ್ಲಿಯವರೆಗೂ 16ಕ್ಕೂ  ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವುದಲ್ಲದೆ, 'ಅತ್ಯುತ್ತಮ ಪ್ರಾದೇಶಿಕ ಚಿತ್ರ' ರಾಷ್ಟ್ರೀಯ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ. 
ಈ ಸಿನೆಮಾದ ಕಥೆ-ಚಿತ್ರಕತೆ ಮತ್ತು ಸ್ಕ್ರಿಪ್ಟ್ ರಚನಕಾರ ಈರೇಗೌಡ.  
SCROLL FOR NEXT