ಬೆಂಗಳೂರು: 'ಬಂಗಾರ s/o ಬಂಗಾರದ ಮನುಷ್ಯ' ಸಿನೆಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವ ಬೆಡಗಿ ವಿದ್ಯಾ ಪ್ರದೀಪ್ ಅವರಿಗೆ ಬೇಡಿಕೆ ಹೆಚ್ಚಾಗಿದೆ. ಮೂಲಗಳ ಪ್ರಕಾರ ಪ್ರೇಮ್ ನಿರ್ದೇಶನದ, ಸುದೀಪ್ ಮತ್ತು ಶಿವರಾಜ್ ಕುಮಾರ್ ನಟಿಸುತ್ತಿರುವ 'ಕಲಿ' ಸಿನೆಮಾದಲ್ಲಿ ಶಿವರಾಜ್ ಕುಮಾರ್ ಎದುರು ನಟಿಸಲು ವಿದ್ಯಾ ಆಯ್ಕೆಯಾಗಿದ್ದಾರೆ.
ಈ ಸಿನೆಮಾದಲ್ಲಿ ಮೂರರಿಂದ ನಾಲ್ಕು ಜನ ನಾಯಕ ನಟಿಯರು ಇರಲಿದ್ದಾರಂತೆ. ಅವರಲ್ಲಿ ವಿದ್ಯಾ ಮೊದಲ ನಾಯಕ ನಟಿಯಾಗಿ ಆಯ್ಕೆಯಾಗಿದ್ದು, ಅವರು ದಿನಾಂಕ ನೀಡಿದ್ದಾರೆ ಎನ್ನಲಾಗಿದೆ.
"ಚಿತ್ರತಂಡ ವಿದ್ಯಾ ಅವರನ್ನು ಅಂತಿಮಗೊಳಿಸಿ ಅವರಿಗೆ ಮುಂಗಡ ನೀಡಿದೆ" ಎಂದು ಮೂಲಗಳು ತಿಳಿಸಿವೆ.
'ಸೆಲ್ ಬಯಾಲಜಿ' ಯಲ್ಲಿ ಪಿ ಎಚ್ ಡಿ ಪಧವೀಧರೆ ವಿದ್ಯಾ ಈಗಾಗಲೇ ತಮಿಳು ಮತ್ತು ಮಲಯಾಳಮ್ ಸಿನೆಮಾಗಳಲ್ಲಿ ಖ್ಯಾತರಾಗಿದ್ದಾರೆ. 'ಪಸಂಗ-೨'ರಲ್ಲಿ ಅವರ ನಟನೆ ವಿಮರ್ಶಕರ ಮೆಚ್ಚುಗೆ ಪಡೆದಿತ್ತು.
ಪ್ರೇಮ್, ನಯನತಾರಾ ಮತ್ತು ಅನುಷ್ಕಾ ಶೆಟ್ಟಿ ಅವರ ಜೊತೆಗೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬಹು ದೊಡ್ಡ ತಾರಾಗಣವಿರಲಿರುವ ಈ ಸಿನೆಮಾ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮೂಡಿಬರಲಿದೆ.