ಮುಂಬೈ: 'ತನು ವೆಡ್ಸ್ ಮನು ರಿಟರ್ನ್ಸ್' ಚಿತ್ರದ ದ್ವಿಪಾತ್ರ ಅಭಿನಯಕ್ಕಾಗಿ ಸೋಮವಾರ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ನಟಿ ಕಂಗನಾ ರನೌತ್ "ಇದು ಹುಟ್ಟುಹಬ್ಬದ ಅತ್ಯುತ್ತಮ ಉಡುಗೊರೆ" ಎಂದಿದ್ದಾರೆ.
"ನನ್ನ ಹುಟ್ಟುಹಬ್ಬಕ್ಕೆ ಎಂದೆಂದಿಗೂ ಸಿಗಬಹುದಾದ ಅತ್ಯುತ್ತಮ ಉಡುಗೊರೆ ಇದು. ಬಹಳ ಥ್ರಿಲ್ ಆಗಿದ್ದೇನೆ. ಧನ್ಯತಾ ಭಾವನೆಯಿದೆ" ಎಂದು ಮಾರ್ಚ್ ೨೩ ಕ್ಕೆ ೨೯ನೇ ವಸಂತಕ್ಕೆ ಕಾಲಿಟ್ಟ ನಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಬಚ್ಚನ್ ಅವರು ನನ್ನ ಜೊತೆ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿರುವುದಕ್ಕೆ ಸಂತಸ ಇಮ್ಮಡಿಯಾಗಿದೆ" ಎಂದು ಕೂಡ ಅವರು ತಿಳಿಸಿದ್ದಾರೆ.
'ಪಿಕು' ಚಿತ್ರದ ನಟನೆಗಾಗಿ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತಿದೆ.
"ಈಗ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ತೊಡುವ ಉಡುಗೆಯ" ಬಗ್ಗೆ ಕಂಗನಾ ಚಿಂತಿಸುತ್ತಿದ್ದಾರಂತೆ.
ಇದು ಕಂಗನಾ ಅವರಿಗೆ ಮೂರನೇ ರಾಷ್ಟ್ರಪ್ರಶಸ್ತಿಯಾಗಿದ್ದು, 'ಫ್ಯಾಶನ್' ಸಿನೆಮಾದ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಮತ್ತು 'ಕ್ವೀನ್' ಸಿನೆಮಾದ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದರು.