ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಜಾತ್ಯಾತೀತ ಜನತಾದಳ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರ್ ಅವರ ಚೊಚ್ಚಲ ಚಿತ್ರ 'ಜಾಗ್ವಾರ್' ಚಿತ್ರೀಕರಣಕ್ಕೆ ವ್ಯಯಕ್ತಿಕ ಆಸಕ್ತಿ ತಳೆದಿದ್ದಾರೆ. ಅವರು ಈ ಸಿನೆಮಾದ ನಿರ್ಮಾಪಕ ಕೂಡ.
ಹೊರಾಂಗಣ ಚಿತ್ರೀಕರಣಕ್ಕೆ ಸ್ಥಳ ಹುಡುಕಿ ಬಲ್ಗೇರಿಯಾಗೆ ಹೋಗಿದ್ದ ಕುಮಾರಸ್ವಾಮಿ ಮತ್ತು ಸಿನೆಮಾದ ನಿರ್ದೇಶಕ ಮಹದೇವ್ ನಗರಕ್ಕೆ ಹಿಂದಿರುಗಿದ್ದಾರೆ ಎಂದು ತಿಳಿಯಲಾಗಿದೆ.
ಚಿತ್ರತಂಡ ಶೀಘ್ರದಲ್ಲಿ ತಂಡದ ೫೦ ಸದಸ್ಯರೊಡನೆ ಐಸ್ ಲ್ಯಾಂಡ್ ಗೆ ತೆರಳಲಿದ್ದು ನಂತರ ಫೈಟ್ ಚಿತ್ರೀಕರಣಕ್ಕಾಗಿ ಬಲ್ಗೇರಿಯಾಗೆ ತೆರಳಲಿದ್ದಾರಂತೆ. "ಮೊದಲ ಫೈಟ್ ಚಿತ್ರೀಕರಣ ಮುಗಿಸಿದ್ದೇನೆ. ಎರಡನೆಯದು ಅರ್ಧ ಮುಗಿದಿದೆ. ಉಳಿದದ್ದು ಬಲ್ಗೇರಿಯಾದಲ್ಲಿ ಚಿತ್ರೀಕರಣಗೊಳ್ಳಲಿದೆ. ನಂತರ ಹಾಡುಗಳ ಚಿತ್ರೀಕರಣ ಕಾರ್ಯ. ಹಿಂತಿರುಗಿದ ನಂತರ ಉಳಿದ ಭಾಗಗಳನ್ನು ಮುಗಿಸುತ್ತೇವೆ" ಎಂದು ಪ್ರಗತಿಯನ್ನು ವಿವರಿಸುತ್ತಾರೆ ನಿಖಿಲ್.
ಜಾಗ್ವಾರ್ ನ ಟೀಸರ್ ಬಿಡುಗಡೆ ಮಾಡಲು ಹೈದರಾಬಾದ್ ನಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಮಾಣ ಸಂಸ್ಥೆ ಯೋಜನೆ ಹಾಕಿಕೊಂಡಿದೆಯಂತೆ.
"ಇದು ದ್ವಿಭಾಷಾ ಚಿತ್ರವಾಗಿರುವುದರಿಂದ ನಮ್ಮ ತಂದೆ ವೈಭವವಾದ ಟ್ರೇಲರ್ ಬಿಡುಗಡೆ ಮಾಡಿ ಆ ಚಿತ್ರರಂಗಕ್ಕೂ ಪರಿಚಯ ಮಾಡಬೇಕೆಂದಿದ್ದಾರೆ. ಅಲ್ಲಿ ತೆಲುಗು ಚಿತ್ರೋದ್ಯಮದ ಹಿರಿಯ ನಟರಿಗೆ ಸನ್ಮಾನವೂ ಆಗಲಿದೆ. ನಂತರ ಬೆಂಗಳುರಿನಲ್ಲೂ ಕಾರ್ಯಕ್ರಮ ನಡೆಯಲಿದೆ" ಎನ್ನುತ್ತಾರೆ ನಿಖಿಲ್.
ನಿಗದಿಯಾದಂತೆ ಅಕ್ಟೋಬರ್ ೮ಕ್ಕೆ ಚಿತ್ರ ಬಿಡುಗಡೆಯಾಗಲು ಭರದಿಂದ ಕೆಲಸಗಳು ನಡೆಯುತ್ತಿವೆಯಂತೆ!