ಶ್ರದ್ಧಾ ಶ್ರೀನಾಥ್-ಗುರುನಂದನ್
ಬೆಂಗಳೂರು: ತೆಲುಗಿನ ಬ್ಲಾಕ್ ಬಸ್ಟರ್ ಸಿನೆಮಾ 'ಪೆಳ್ಳಿ ಚೂಪುಲು' ಈಗ ಕನ್ನಡಕ್ಕೆ ರಿಮೇಕ್ ಆಗಲಿದೆ. ಗಾಂಧಿನಗರದ ಬಲ್ಲ ಮೂಲಗಳ ಪ್ರಕಾರ ಈ ಸಿನೆಮಾದ ಮುಖ್ಯ ಪಾತ್ರಗಳಿಗಾಗಿ 'ಯು ಟರ್ನ್' ಖ್ಯಾತಿಯ ಶ್ರದ್ಧಾ ಶ್ರೀನಾಥ್ ಮತ್ತು '೧ಸ್ಟ್ ರ್ಯಾಂಕ್ ರಾಜು' ಖ್ಯಾತಿಯ ಗುರುನಂದನ್ ಆಯ್ಕೆಯಾಗಿದ್ದಾರೆ. ಈ ಸಿನೆಮಾವನ್ನು ನೃತ್ಯನಿರ್ದೇಶಕ-ನಿರ್ದೇಶಕ ಮುರಳಿ ಮಾಸ್ಟರ್ ನಿರ್ದೇಶಿಸಲಿದ್ದಾರೆ ಎನ್ನುತ್ತವೆ ಮೂಲಗಳು.
ತರುಣ್ ಭಾಸ್ಕರ್ ದಾಸ್ಯಮ್ ನಿರ್ದೇಶಿಸಿದ್ದ ೨೦೧೬ ರ ರೋಮ್ಯಾಂಟಿಕ್ ಕಾಮಿಡಿ ಸಿನೆಮಾ 'ಪೆಳ್ಳಿ ಚೂಪುಲು'ನಲ್ಲಿ ವಿಜಯ್ ದೇವರಕೊಂಡ ಮತ್ತು ರಿತು ವರ್ಮಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನೆಮಾ ಅಮೆರಿಕಾದಲ್ಲಿಯೇ ಮಿಲಿಯನ್ ಡಾಲರ್ ಕ್ಲಬ್ ಸೇರಿ ಅತ್ಯುತ್ತಮ ಗಳಿಕೆ ಕಂಡಿತ್ತು. ಇದರ ತಮಿಳು ರಿಮೇಕ್ ಹಕ್ಕುಗಳನ್ನು ಗೌತಮ್ ವಾಸುದೇವ್ ಕೊಂಡಿದ್ದಲ್ಲದೆ, ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಇದನ್ನು ಬಾಲಿವುಡ್ ನಲ್ಲಿ ರಿಮೇಕ್ ಮಾಡುವ ಆಸಕ್ತಿ ತೋರಿದ್ದರು.
ಇನ್ನು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ಶ್ರದ್ಧಾ ತಮ್ಮ ಮುಂದಿನ ಕನ್ನಡ ಸಿನೆಮಾದಲ್ಲಿ ಗುರುನಂದನ್ ಎದುರು ನಟಿಸಲಿದ್ದಾರೆ ಎನ್ನುತ್ತವೆ ಮೂಲಗಳು.
ಯು ಟರ್ನ್ ಹುಡುಗಿ ಸದ್ಯಕ್ಕೆ ಉರ್ವಿ ಮತ್ತು ಆಪರೇಷನ್ ಅಲಮೇಲಮ್ಮ ಸಿನೆಮಾಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಹಾಗೆಯೇ ಹಲವು ತಮಿಳು ಸಿನೆಮಾಗಳಲ್ಲಿ ನಟಿಸುತ್ತಿರುವ ಅವರು ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.