'ಕಿರಿಕ್ ಪಾರ್ಟಿ' ಸಿನೆಮಾದ ಪೋಸ್ಟರ್
ಬೆಂಗಳೂರು: ಸೃಜನಶೀಲತೆಯಿಂದ ಕೂಡಿದ್ದ 'ಕಿರಿಕ್ ಪಾರ್ಟಿ' ಟೀಸರ್ ಮತ್ತು ಟ್ರೇಲರ್ ಪ್ರೇಕ್ಷಕರನ್ನಷ್ಟೇ ಗೆದ್ದಿರುವುದಲ್ಲದೆ, ಹೂಡಿಕೆದಾರರನ್ನು ಸೆಳೆಯುವುದಕ್ಕೆ ಕೂಡ ಸಫಲವಾಗಿದೆ. ಪರಾಂವಹ್ ಸ್ಟುಡಿಯೋಸ್ ನಿರ್ಮಿಸುತ್ತಿರುವ ಈ ಸಿನೆಮಾ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಒಡೆತನದ ಪುಷ್ಕರ್ ಫಿಲಂಸ್ ನಿಂದ ಹೂಡಿಕೆ ಗಳಿಸಲು ಯಶಸ್ವಿಯಾಗಿದೆ.
ಸಿನೆಮಾದ ೩೦% ಸ್ಟೇಕ್ ಅನ್ನು ೪ ಕೋಟಿ ಹೂಡಿಕೆ ಮಾಡಿ ಪುಷ್ಕರ್ ಖರೀದಿಸಿದ್ದಾರೆ ಇನ್ನುಳಿದ ೭೦% ರಕ್ಷಿತ್ ಶೆಟ್ಟಿ ಒಡೆತನದ ಪರಾಂವಹ್ ಸ್ಟುಡಿಯೋಸ್ ಜೊತೆ ಉಳಿದುಕೊಳ್ಳಲಿದೆ.
ಸಿನೆಮಾ ನೋಡಿದ ಮೇಲೆ ಇದು ಬ್ಲಾಕ್ ಬಸ್ಟರ್ ಆಗಲಿದೆ ಎಂದು ಎಣಿಸಿ ಇದರಲ್ಲಿ ಹೂಡಿಕೆ ಮಾಡಿರುವುದಾಗಿ ಧೃಢೀಕರಿಸಿದ್ದಾರೆ ಪುಷ್ಕರ್. "ಇತ್ತೀಚಿನ ಸಿನೆಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದಲ್ಲಿ ರಕ್ಷಿತ್ ಜೊತೆಗೆ ನಾನು ಕೆಲಸ ಮಾಡಿದ್ದೆ. ಇದು ನನಗೆ ಎರಡನೇ ಅತಿ ದೊಡ್ಡ ಸಿನೆಮಾ ಆಗಲಿದೆ. ಈ ವರ್ಷದ ಅಂತ್ಯವನ್ನು ಸಂಭ್ರಮದಿಂದ ಕಳೆದ ಮುಂದಿನ ವರ್ಷವನ್ನು ಧನಾತ್ಮಕತೆಯಿಂದ ಪ್ರಾರಂಭಿಸಬೇಕೆಂದಿದ್ದೇನೆ" ಎನ್ನುತ್ತಾರೆ ಪುಷ್ಕರ್.
ಈ ಸಿನೆಮಾವನ್ನು ವಿತರಣೆ ಮಾಡಲು ಮುಂದಾಗಿರಿಯುವವರು ಜಯಣ್ಣ ಕಂಬೈನ್ಸ್. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಅಷ್ಟೇ ಉತ್ಸಾಹದಲ್ಲಿರುವ ನಟ ರಕ್ಷಿತ್ ಶೆಟ್ಟಿ "ಪುಷ್ಕರ್ ನನ್ನ ಬೆಂಬಲಕ್ಕೆ ನಿಂತಿದ್ದಾರೆ. ನನಗೆ ನನ್ನ ಸೃಜನಶೀಲತೆಯ ಬಗ್ಗೆ ಆತ್ಮವಿಶ್ವಾಸ ಇದೆ. ಅವರ ವ್ಯವಹಾರದ ಚಾತುರ್ಯ ದೊಡ್ಡದು. ಅವರು ಈ ಸಿನೆಮಾದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. 'ಗೋದಿ ಬಣ್ಣ.. ' ಸಿನೆಮಾದಲ್ಲಿ ನಮಗೆ ಅದೃಷ್ಟ ಒಲಿಯಿತು, ಇದೆ ಅದೃಷ್ಟ 'ಕಿರಿಕ್ ಪಾರ್ಟಿ'ಗು ಒಲಿಯಲಿದೆ ಎಂದು ನಂಬಿದ್ದೇನೆ. ಈಗ ಜಯಣ್ಣ ಕೂಡ ಸೇರಿದ್ದು ಇದು ನನಗೆ ಡಬಲ್ ಧಮಾಕ" ಎನ್ನುತ್ತಾರೆ. ಸಿನೆಮಾ ಡಿಸೆಂಬರ್ ೨೩ ಕ್ಕೆ ತೆರೆ ಕಾಣಲಿದೆ.
"ನಾವು ಕ್ರಿಸ್ಮಸ್ ಸಮಯಕ್ಕೆ ಸಿನೆಮಾ ಬಿಡುಗಡೆ ಮಾಡಿ, ಹೊಸ ವರ್ಷದ ಸಂಭ್ರಮವನ್ನು ಆಚರಿಸಲಿದ್ದೇವೆ" ಎನ್ನುತ್ತಾರೆ ರಕ್ಷಿತ್.
ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ, ರಕ್ಷಿತ್ ಜೊತೆಗೆ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತ ಹೆಗಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಕರಮ್ ಚಾವ್ಲಾ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos